ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿಗೆ ನೆರಳಾಗಿ...

Last Updated 26 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕಲಿಕಾ ದೋಷವಿರುವ ಮಕ್ಕಳಿಗೆ ಮುಖ್ಯ ವಾಹಿನಿಯ ಮಕ್ಕಳೊಂದಿಗೆ ಬೆರೆಯುತ್ತಲೇ ಕಲಿಯುವ ಅವಕಾಶ ಹಲವಾರು ಶಾಲೆಗಳಲ್ಲಿವೆ. ಅವರ ಕಲಿಕಾ ಸಾಮರ್ಥ್ಯಕ್ಕೆ ತಕ್ಕಂತೆ ಕಲಿಸುವ, ತಿಳಿಸಿಕೊಡುವ ಸಹಾಯಕರ ಅಗತ್ಯ ಅವರಿಗಿರುತ್ತದೆ. ಅಂಥವರು ಸದಾ ಮಕ್ಕಳೊಂದಿಗೆ ಇದ್ದು, ಅವರ ವರ್ತನೆ ಮತ್ತು ಚಟುವಟಿಕೆಗಳನ್ನು ಗಮನಿಸುತ್ತಲೇ ಕಲಿಕೆಯತ್ತ ಸೆಳೆಯಲು ಸಹಾಯಕರಾಗಿರುತ್ತಾರೆ.
ಷ್ಯಾಡೋ ಟೀಚರ್‌ ಆಗಲು ತರಬೇತಿ ಬೇಕು. ಅಪಾರ ಸಂಯಮ, ಸಹನೆ ಇರಬೇಕು. ಹೊಸತನಗಳನ್ನು ಪ್ರಯೋಗಕ್ಕಿಳಿಸುವ ಮನೋಭಾವದವರಾಗಿರಬೇಕು. ಕಲಿಕೆಯ ಸಾಧ್ಯತೆಗಳನ್ನು ಮಗುವಿನ ಆಸಕ್ತಿಗನುಗುಣವಾಗಿ ವಿಸ್ತರಿಸುವ ಕಲೆ ಅವರಿಗಿರಬೇಕು.

ಏನಿದು ಷ್ಯಾಡೋ ಟೀಚಿಂಗ್?
ಇದು ವ್ಯಕ್ತಿಗತ ಶಿಕ್ಷಣ ಕ್ರಮವಾಗಿದೆ. ಕಲಿಕಾ ದೋಷ ಅಥವಾ ಸಮಸ್ಯೆ ಇರುವ ಮಗುವಿಗೆ ಶಾಲಾ ಶಿಕ್ಷಕಿ ಮಾಡುವ ಪಾಠದ ಮೇಲೆ ಗಮನ ವಹಿಸುವಂತೆ ಮಾಡುವುದು. ವಿಷಯ, ವಸ್ತುವನ್ನು ಸುಲಭವಾಗಿ ಗ್ರಹಿಸಲು ಮತ್ತು ಓದಲು ಸ್ಫೂರ್ತಿ ತುಂಬುವುದು ಷ್ಯಾಡೋ ಟೀಚರ್ ಮುಖ್ಯ ಜವಾಬ್ದಾರಿಯಾಗಿರುತ್ತದೆ.

ಷ್ಯಾಡೋ ಟೀಚರ್ ಕೆಲಸ ಪಠ್ಯಕ್ರಮ ಯೋಜನೆ: ಷ್ಯಾಡೋ ಟೀಚರ್ ಮೊದಲ ಜವಾಬ್ದಾರಿ ಎಂದರೆ ಪಠ್ಯಕ್ರಮ ಯೋಜನೆ. ಶಾಲೆಯಲ್ಲಿ ನೀಡಿರುವ ಪಠ್ಯಕ್ರಮವನ್ನು ಪಡೆದು ಮಗುವಿಗೆ ಕಲಿಸುವ ಕುರಿತು ಯೋಜನೆ ರೂಪಿಸುವುದು, ಶಾಲೆಯಲ್ಲಿ ಶಿಕ್ಷಕಿ ಕಲಿಸುವ ಪಾಠವನ್ನು ಪುನರಾವರ್ತಿಸುವುದು. ನಂತರ ಕಲಿಕಾ ದೋಷ ಇರುವ ಮಗುವಿಗೆ ಅರ್ಥವಾಗುವ ರೀತಿಯಲ್ಲಿ ಮನವರಿಕೆ ಮಾಡಿಸುವುದು.

ಬೋಧನೆಯ ವಸ್ತುಗಳು: ಕಲಿಕಾ ದೋಷ ಇರುವ ಮಗುವಿಗೆ ಶಾಲೆಯ ಪಾಠ ಅರ್ಥ ಮಾಡಿಸಲು ತಾನು ಅನುಸರಿಸಿದ ಪರ್ಯಾಯ ಕಲಿಕಾ ಮಾರ್ಗದ ಬಗ್ಗೆ ಶಾಲಾ ಶಿಕ್ಷಕಿಗೆ ತಿಳಿಸಬೇಕು. ಇದರಿಂದ ಶಾಲಾ ಶಿಕ್ಷಕಿ ಕೂಡ ಆ ಮಗವಿಗೂ ಅರ್ಥ ಆಗುವ ರೀತಿಯಲ್ಲಿ ತನ್ನ ಕಲಿಕಾ ವಿಧಾನದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಮಗುವಿನ ವರ್ತನೆಗಳನ್ನು ನಿರ್ವಹಿಸುವುದು: ಸಾಲಿನಲ್ಲಿ ನಿಲ್ಲುವುದು. ಪ್ರಶ್ನೆ ಪೂರ್ತಿಯಾಗಿ ಕೇಳಿಸಿಕೊಳ್ಳುವುದು. ಉತ್ತರಿಸುವುದಕ್ಕೂ ಮುನ್ನ ಕೈಯನ್ನು ಎತ್ತುವುದು. ಸಮೂಹ ಚಟುವಟಿಕೆಗಳಲ್ಲಿ ಮುಂದಾಳತ್ವ ವಹಿಸುವುದು ಇತ್ಯಾದಿ ಬಗ್ಗೆ ಮಗುವಿಗೆ ಸರಿಯಾಗಿ ತಿಳಿಹೇಳಿ ಆ ಬಗ್ಗೆ ಉತ್ಸಾಹ ಬೆಳೆಸುವುದು.

ಹೆಚ್ಚು ಸರಳವಾಗಿ ಅರ್ಥ ಮಾಡಿಸಲು ವಿಡಿಯೊ, ಚಿತ್ರಗಳನ್ನು ಬಳಸಿಕೊಳ್ಳುವುದು. ಈ ಶಿಕ್ಷಕರಿಗೆ ಶಾಲಾ ಆಡಳಿತ ಮಂಡಳಿಗಳು ಸಂಬಳ ನೀಡುವುದಿಲ್ಲ. ವಿದ್ಯಾರ್ಥಿಯ ಪೋಷಕರೇ ಸಂಬಳದ ಹೊಣೆ ಹೊರಬೇಕು. ಇಲ್ಲದಿದ್ದರೆ ಮಗುವಿನ ತಾಯಿಯೇ ಈ ಶಿಕ್ಷಕಿಯ ಪಾತ್ರವನ್ನೂ ವಹಿಸಬಹುದು. ಅದು ಇನ್ನೂ ಪರಿಣಾಮಕಾರಿಯಾಗಿರುತ್ತದೆ.

‘ಕಲಿಕಾ ಸಾಮರ್ಥ್ಯವನ್ನು ಅರ್ಥೈಸಿಕೊಂಡು ಕಲಿಸುವ ಸಾಮರ್ಥ್ಯ ಇರುವ ಯಾರು ಬೇಕಿದ್ದರೂ ಷ್ಯಾಡೋ ಟೀಚರ್ ಆಗಬಹುದು. ಸಹನೆ ಇರಬೇಕು. ಹೊಸತನಗಳನ್ನು ಹುಡುಕುವ ಗುಣವಿರಬೇಕು. ಮಗುವಿನ ವಿಭಿನ್ನ ವರ್ತನೆಗೆ ಕಾರಣ ಏನು ಎಂಬುದನ್ನು ಸಮಾಧಾನವಾಗಿ ಯೋಚಿಸಿ ಆ ಸಮಸ್ಯೆಯಿಂದ ಹೊರಬರಲು ಬೇಕಾದ ಆತ್ಮವಿಶ್ವಾಸ ಮತ್ತು ಸ್ಫೂರ್ತಿ ತುಂಬಿದರೆ ಮಗು ಎಲ್ಲಾ ಮಕ್ಕಳಂತೆ ಸಹಜ ಕಲಿಕೆ ನಡೆಸಲು ಸಾಧ್ಯವಾಗುತ್ತದೆ. ಆ ಮೂಲಕ ಸಾಮಾನ್ಯ ಜೀವನ ನಡೆಸಲು ಕೂಡ ಮಕ್ಕಳನ್ನು ಸಿದ್ಧಗೊಳಿಸಬಹುದು. ಮಕ್ಕಳ ಮಾನಸಿಕ ಸ್ಥಿತಿ, ಆಲೋಚನಾ ಕ್ರಮ, ಸಾಮರ್ಥ್ಯದ ಇತಿಮಿತಿ ಅರಿತುಕೊಂಡು ಪಾಲಕರೇ ಈ ತರಬೇತಿ ಪಡೆದುಕೊಳ್ಳುವುದು ಹೆಚ್ಚು ಸೂಕ್ತ. ಇಲ್ಲದಿದ್ದರೆ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಿಕೊಳ್ಳಬೇಕಾಗುತ್ತದೆ’ ಎನ್ನುತ್ತಾರೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೈಂಡ್ ಡೈನಾಮಿಕ್ಸ್ನ ಡಾ. ಡಿ. ಕೃಷ್ಣಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT