ಶನಿವಾರ, ಆಗಸ್ಟ್ 13, 2022
26 °C
ವಿಶ್ವಕಪ್‌ ಆರ್ಚರಿ: ಭಾರತದ ಜೋಡಿಯ ಸಾಧನೆ

ವಿಶ್ವಕಪ್‌ ಆರ್ಚರಿ: ಭಿಷೇಕ್–ಜ್ಯೋತಿಗೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್‌ (ಪಿಟಿಐ): ಭಾರತದ ಅಭಿಷೇಕ್‌ ವರ್ಮ ಮತ್ತು ಜ್ಯೋತಿ ಸುರೇಖಾ ವೆನ್ನಂ ಅವರು ಇಲ್ಲಿ ನಡೆಯುತ್ತಿರುವ ವಿಶ್ವಕಪ್‌ ಆರ್ಚರಿಯಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದಿತ್ತರು. 

ಶನಿವಾರ ನಡೆದ ಕಾಂಪೌಂಡ್‌ ಮಿಶ್ರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಭಾರತದ ಜೋಡಿ 152–149 ರಲ್ಲಿ ಫ್ರಾನ್ಸ್‌ನ ಜೀನ್‌ ಬೌಲ್ಶ್ ಮತ್ತು ಸೋಫಿ ಡಾಡ್ಮಂಟ್‌ ಅವರನ್ನು ಮಣಿಸಿತು. ವಿಶ್ವಕಪ್‌ನಲ್ಲಿ ಈ ವಿಭಾಗದಲ್ಲಿ ಭಾರತ ಚಿನ್ನ ಜಯಿಸಿದ್ದು ಇದೇ ಮೊದಲು.

ಇಲ್ಲಿ ಮೂರನೇ ಶ್ರೇಯಾಂಕ ಹೊಂದಿದ್ದ ಭಾರತದ ಜೋಡಿ ಆರಂಭದಿಂದಲೇ ನಿಖರವಾಗಿ ಗುರಿ ಹಿಡಿದು ಎದುರಾಳಿಗಳ ಮೇಲೆ ಒತ್ತಡ ಹೇರಿತು. ಮೊದಲ ಸೆಟ್‌ ಕೊನೆಗೊಂಡಾಗ 40-37 ರಲ್ಲಿ ಮುನ್ನಡೆ ಸಾಧಿಸಿತು. ಎರಡನೇ ಸೆಟ್‌ನ ಕೊನೆಯಲ್ಲಿ ಫ್ರಾನ್ಸ್‌ ಹಿನ್ನಡೆಯನ್ನು ಒಂದು ಪಾಯಿಂಟ್‌ಗೆ (75–76) ತಗ್ಗಿಸಿತು.

ಮೂರನೇ ಸೆಟ್‌ನಲ್ಲಿ ಎರಡೂ ತಂಡಗಳು ತಲಾ 39 ಪಾಯಿಂಟ್ಸ್‌ ಸಂಗ್ರಹಿಸಿದವು. ಒಟ್ಟಾರೆಯಾಗಿ ಭಾರತ 115–114 ರಲ್ಲಿ ಮುನ್ನಡೆಯಲ್ಲಿತ್ತು. ನಿರ್ಣಾಯಕ ಸೆಟ್‌ನಲ್ಲಿ ಏಕಾಗ್ರತೆ ಸಾಧಿಸಿದ ಭಾರತದ ಜೋಡಿ 37 ಪಾಯಿಂಟ್ಸ್ ಗಳಿಸಿದರೆ, ಫ್ರಾನ್ಸ್‌ ತಂಡ 35 ಪಾಯಿಂಟ್ಸ್‌ ಮಾತ್ರ ಕಲೆಹಾಕಿತು. ಮೂರು ಪಾಯಿಂಟ್‌ಗಳ ಮುನ್ನಡೆಯೊಂದಿಗೆ ಭಾರತ ಚಿನ್ನ ಜಯಿಸಿತು.

ಕಾಂಪೌಂಡ್‌ ಮಿಶ್ರ ಡಬಲ್ಸ್‌ನಲ್ಲಿ ಭಾರತದ ಅತ್ಯಂತ ಯಶಸ್ವಿ ಜೋಡಿ ಎನಿಸಿಕೊಂಡಿರುವ ಅಭಿಷೇಕ್‌– ಜ್ಯೋತಿ, ವಿಶ್ವಕಪ್‌ನಲ್ಲಿ ಈ ಹಿಂದೆ ಹಲವು ಸಲ ಕಂಚಿನ ಪದಕ ಗೆದ್ದುಕೊಂಡಿದ್ದರು. ಕಳೆದ ವರ್ಷ ಅಮೆರಿಕದ ಯಾಂಕ್ಟನ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಬೆಳ್ಳಿ ಜಯಿಸಿದ್ದು ಅವರ ಇದುವರೆಗಿನ ಉತ್ತಮ ಸಾಧನೆ ಎನಿಸಿಕೊಂಡಿತ್ತು.

ಜ್ಯೋತಿಗೆ ಬೆಳ್ಳಿ: ಕಾಂಪೌಂಡ್‌ ವೈಯಕ್ತಿಕ ವಿಭಾಗದಲ್ಲಿ ಜ್ಯೋತಿ, ಬೆಳ್ಳಿ ಪದಕ ಗೆದ್ದರು. ಅವರು ಫೈನಲ್‌ನಲ್ಲಿ ಇಂಗ್ಲೆಂಡ್‌ನ ಎಲಾ ಗಿಬ್ಸನ್‌ ಎದುರು ಸೋತರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು