ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊ ಪ್ಯಾರಾಲಿಂಪಿಕ್ಸ್: ಚಿನ್ನ ಗೆದ್ದ ಅವನಿ ಲೇಖರಾಗೆ ಮಹೀಂದ್ರಾ ಎಸ್‌ಯುವಿ

Last Updated 30 ಆಗಸ್ಟ್ 2021, 12:28 IST
ಅಕ್ಷರ ಗಾತ್ರ

ನವದೆಹಲಿ: ಜಪಾನ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವು ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಮಹಿಳೆಯರ 10 ಮೀಟರ್ ಏರ್‌ ರೈಫಲ್‌ ಸ್ಟ್ಯಾಂಡಿಂಗ್ ಎಸ್‌ಎಚ್‌1 ವಿಭಾಗದಲ್ಲಿ ಭಾರತದ ಅವನಿ ಲೇಖರಾ ಚಿನ್ನದ ಪದಕ ಗೆದ್ದುಕೊಂಡರು. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಮಹಿಳಾ ಪ್ಯಾರಾ ಅಥ್ಲೀಟ್ ಎಂಬ ಖ್ಯಾತಿಗೆ ಪಾತ್ರರಾದರು.

ಚಿನ್ನದ ಸಾಧಕಿಗೆ ಎಲ್ಲಾ ಕಡೆಯಿಂದಲೂ ಶುಭಾಶಯಗಳು ಹರಿದು ಬರುತ್ತಿವೆ. ಮಹೀಂದ್ರ ಗ್ರೂಪ್‌ನ ಅಧ್ಯಕ್ಷ, ಉದ್ಯಮಿ ಆನಂದ್ ಮಹೀಂದ್ರಾ ಪ್ಯಾರಾಲಿಂಪಿಕ್ಸ್ ಚಾಂಪಿಯನ್‌ಗೆ ವಿಶೇಷ ಉಡುಗೊರೆ ಘೋಷಿಸಿದ್ದಾರೆ. ವಿಕಲಚೇತನರಿಗಾಗಿ ಸಿದ್ಧಪಡಿಸುವ ತಮ್ಮ ಕಂಪನಿಯ ಮೊದಲ ಕಸ್ಟಮೈಸ್ಡ್ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಅನ್ನು ಶೂಟರ್ ಅವನಿ ಲೇಖರಾಗೆ ಅರ್ಪಿಸುವುದಾಗಿ ಘೋಷಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಈ ವಿಷಯವನ್ನು ಹಂಚಿಕೊಂಡ ಆನಂದ್ ಮಹೀಂದ್ರಾ, ಇಂತಹ ವಾಹನವನ್ನು ತಯಾರಿಸುವ ಕಲ್ಪನೆಯನ್ನು ಭಾರತದ ಪ್ಯಾರಾಲಿಂಪಿಕ್ ಸಮಿತಿಯ ಅಧ್ಯಕ್ಷೆ ದೀಪಾ ಮಲಿಕ್ ಆಟೋಮೊಬೈಲ್ ಉದ್ಯಮಕ್ಕೆ ಪ್ರಸ್ತುತಪಡಿಸಿದ್ದಾರೆ ಎಂದು ಹೇಳಿದ್ದಾರೆ. ವಿಶೇಷ ಸಾಮರ್ಥ್ಯ ಹೊಂದಿರುವ ಜನರಿಗೆ ರಸ್ತೆಯ ಪ್ರಯಾಣವನ್ನು ಆರಾಮದಾಯಕ ಮತ್ತು ಸುಲಭವಾವಾಗಿಸುವುದು ಈ ಕಸ್ಟಮೈಸ್ಡ್‌ ಎಸ್‌ಯುವಿಯ ಉದ್ದೇಶವಾಗಿದೆ ಎಂದು ಅವರು ಹೇಳಿದ್ಧಾರೆ.

‘ವಾರದ ಹಿಂದೆ, ದೀಪಾ ಮಲಿಕ್ ಅವರು ವಿಕಲಚೇತನರಿಗಾಗಿ ಎಸ್‌ಯುವಿಯನ್ನು ಅಭಿವೃದ್ಧಿಪಡಿಸುವಂತೆ ಸೂಚಿಸಿದರು. ಅವರು ಟೋಕಿಯೊದಲ್ಲಿ ಬಳಸಿದಂತಹ ಎಸ್‌ಯುವಿಯನ್ನು ಅಭಿವೃದ್ಧಿಪಡಿಸಲು ಕೋರಿದ್ದರು. ಅಂತಹ ವಾಹನ ಸಿದ್ಧಪಡಿಸಲು ನನ್ನ ಸಹೋದ್ಯೋಗಿ ಮಹೀಂದ್ರ ಕಂಪನಿಯ ವೇಲು ಅವರಿಗೆ ವಿನಂತಿ ಮಾಡಿರುವೆ. ‘ವೇಲು, ನೀವು ತಯಾರಿಸುವ ಮೊದಲ ವಿಶೇಷ ಎಸ್‌ಯುವಿಯನ್ನು ನಾನು ಉಡುಗೊರೆಯಾಗಿ ಅವನಿ ಲೇಖರಾಗೆ ನೀಡಲು ಬಯಸುತ್ತೇನೆ’ಎಂದು ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಆನಂದ್ ಮಹೀಂದ್ರಾ ನಿರ್ಧಾರಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿವೆ.

‘ನಮ್ಮ ವಿಶೇಷ ಮಕ್ಕಳ ಸಾಧನೆಗೆ ಪ್ರೋತ್ಸಾಹ ನೀಡಲು ನಿಮ್ಮಂತಹ ಹಲವರು ಮುಂದೆ ಬರಬೇಕು’ ಎಂದು ಶ್ಲಾಘಿಸಿದ್ದಾರೆ.

ಪ್ಯಾರಾಲಿಂಪಿಕ್ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿ ಜೊತೆಗೆ, ಅವನಿ ಲೇಖರಾ 249.6 ಅಂಕಗಳೊಂದಿಗೆ ಹೊಸ ಪ್ಯಾರಾಲಿಂಪಿಕ್ ದಾಖಲೆಯನ್ನು ನಿರ್ಮಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

ಜೈಪುರ ಮೂಲದ 19 ವರ್ಷದ ಅವನಿಗೆ 2012ರ ಕಾರು ಅಪಘಾತದಲ್ಲಿ ಬೆನ್ನುಹುರಿಗೆ ಗಾಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT