ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶಾನ್ಯ ನೆಲದ ಹುಡುಗಿಗೆ ಕನ್ನಡ ನಾಡಿನ ಬಲ

Last Updated 30 ಜೂನ್ 2019, 19:30 IST
ಅಕ್ಷರ ಗಾತ್ರ

ಜರ್ಮನಿಯ ವಿಲಿಂಜೆನ್‌ನಲ್ಲಿ ಕಳೆದ ವಾರ ನಡೆದ ಬ್ಲ್ಯಾಕ್‌ ಫಾರೆಸ್ಟ್ ಕಪ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಬಾಲಕಿಯರು ಅಮೋಘ ಸಾಧನೆ ಮಾಡಿದರು. ಐದು ಚಿನ್ನ ಸೇರಿದಂತೆ ಏಳು ಪದಕಗಳನ್ನು ಭಾರತದ ಯುವ ಬಾಕ್ಸರ್‌ಗಳು ಬಗಲಿಗೆ ಹಾಕಿಕೊಂಡರು.

ಈ ಪೈಕಿ ಇಬ್ಬರ ಸಾಧನೆ ಇನ್ನೂ ವಿಶಿಷ್ಟವಾಗಿತ್ತು. ಒಬ್ಬರು ಹರಿಯಾಣದ ನೇಹಾ, ಮತ್ತೊಬ್ಬರು ಕರ್ನಾಟಕದ ಅಂಜು ದೇವಿ. ನೇಹಾ ಚಾಂಪಿ ಯನ್‌ಷಿಪ್‌ನ ಉತ್ತಮ ಬಾಕ್ಸರ್ ಎನಿಸಿದರೆ ಅಂಜು ಉದಯೋನ್ಮುಖ ಬಾಕ್ಸಿಂಗ್ ಪಟು ಎನಿಸಿಕೊಂಡರು.ಬಾಕ್ಸಿಂಗ್‌ ಬಗ್ಗೆ ಅದರಲ್ಲೂ ಮಹಿಳೆಯರ ಸ್ಪರ್ಧೆಯಲ್ಲಿ ಸ್ವಲ್ಪ ಹಿಂದೆಯೇ ಇರುವ ರಾಜ್ಯದ ಬಾಕ್ಸರ್ ಈ ಸಾಧನೆ ಮಾಡಿದ್ದು ಅನೇಕರ ಅಚ್ಚರಿಗೆ ಕಾರಣವಾಗಿತ್ತು.

ಆದರೆ ಅಂಜು ಮೂಲತಃ ಇಲ್ಲಿಯವರಲ್ಲ. ವಿಶ್ವ ಚಾಂಪಿಯನ್‌ ಮೇರಿ ಕೋಮ್ ನಾಡಾದ ಮಣಿಪುರದವರು. ಅವರ ‘ಪಂಚ್’ಗಳಿಗೆ ಈಗ ಬಲ ತುಂಬಿರುವುದು ಬಳ್ಳಾರಿ ಜಿಲ್ಲೆಯ ವಿಜಯನಗರದಲ್ಲಿರುವ ಜೆಎಸ್‌ಡಬ್ಲ್ಯು ಸಂಸ್ಥೆಯ ಇನ್‌ಸ್ಪಿರೇಷನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌.

ಮೂರು ವರ್ಷಗಳ ಹಿಂದೆಯಷ್ಟೆ ಬಾಕ್ಸಿಂಗ್‌ಗೆ ಪದಾರ್ಪಣೆ ಮಾಡಿದ ಅಂಜು ಈಗಾಗಲೇ ‘ಖೇಲೊ ಇಂಡಿಯಾ’ ಮತ್ತು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕಗಳ ಬೇಟೆಯಾಡಿದ್ದಾರೆ. ಜರ್ಮನಿಯಲ್ಲಿ ಮಾಡಿರುವ ಸಾಧನೆಯ ಹಿನ್ನೆಲೆಯಲ್ಲಿ ಅವರನ್ನು ವಿಕ್ರಂ ಕಾಂತಿಕೆರೆ ಮಾತನಾಡಿಸಿದ್ದಾರೆ.

ನಿಮ್ಮ ಊರು, ತಂದೆ–ತಾಯಿ ಬಗ್ಗೆ ವಿವರಿಸುವಿರಾ...?
ನಾನು ಮಣಿಪುರದ ಇಂಫಾಲ ವೆಸ್ಟ್ ಜಿಲ್ಲೆಯವಳು. ತಂದೆ ಕೃಷಿಕ. ತಾಯಿ ಮನೆಯಲ್ಲೇ ಇರುತ್ತಾರೆ.

ಬಾಕ್ಸಿಂಗ್‌ ಮೇಲೆ ಆಸಕ್ತಿ ಮೂಡಿದ್ದು ಹೇಗೆ? ಯಾವಾಗ ಈ ಕ್ರೀಡೆಯಲ್ಲಿ ಅಭ್ಯಾಸ ಮಾಡಲು ಆರಂಭಿಸಿದಿರಿ?
ಬಾಕ್ಸಿಂಗ್‌ ಕಲಿಯಲು ಆರಂಭಿಸಿದ್ದು ಮೂರು ವರ್ಷಗಳ ಹಿಂದೆ. ಸಣ್ಣವಳಿದ್ದಾಗ ಯಾವುದೇ ಕ್ರೀಡೆಯಲ್ಲಿ ತೊಡಗಿರಲಿಲ್ಲ. ಮೇರಿ ಕೋಮ್ ಅವರ ಸಾಧನೆ ಬಗ್ಗೆ ಕೇಳಿ ನನಗೂ ಬಾಕ್ಸಿಂಗ್‌ನಲ್ಲಿ ಆಸಕ್ತಿ ಮೂಡಿತು. ನಮ್ಮ ಜಿಲ್ಲೆಯಲ್ಲಿ ಚಿತ್ತರಂಜನ್ ಅವರ ಬಳಿ ತರಬೇತಿಗೆ ಸೇರಿಕೊಂಡೆ. ಸದ್ಯ, 50 ಕೆಜಿ ವಿಭಾಗದಲ್ಲಿ ಭಾಗವಹಿಸುತ್ತಿದ್ದೇನೆ.

ವಿಜಯನಗರಕ್ಕೆ ಬಂದ ಬಗೆ ಹೇಗೆ? ಯಾರು ಕರೆದುಕೊಂಡು ಬಂದರು?
ಜೆಎಸ್‌ಡಬ್ಲ್ಯು ಸಂಸ್ಥೆಯವರು ಮಣಿಪುರದಲ್ಲಿ ಆಯ್ಕೆ ಮಾಡಿದರು. ಹೀಗಾಗಿ ಇಲ್ಲಿಗೆ ತಲುಪಿದೆ. ಇಲ್ಲಿನ ಜಿಂದಾಲ್ ವಿದ್ಯಾಮಂದಿರದಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದೇನೆ. ಬಾಕ್ಸಿಂಗ್ ತರಬೇತಿ ಜೊತೆಯಲ್ಲಿ ಓದು ಕೂಡ ಮುಂದುವರಿಯುತ್ತಿದೆ.

ವಿಜಯನಗರದಲ್ಲಿ ನಿಮ್ಮ ಕೋಚ್ ಯಾರು? ತರಬೇತಿ, ಅಲ್ಲಿನ ಪರಿಸರದ ಬಗ್ಗೆ ಏನನಿಸುತ್ತದೆ?
ಇಲ್ಲಿಗೆ ಬರಲು ಸಾಧ್ಯವಾದದ್ದು ನನ್ನ ಅದೃಷ್ಟವೆಂದೇ ತಿಳಿದಿದ್ದೇನೆ. ಇಲ್ಲಿ ಬಾಕ್ಸಿಂಗ್‌ಗೆ ಒಟ್ಟು ಮೂವರು ಕೋಚ್‌ಗಳಿದ್ದಾರೆ. ಅಮೆರಿಕದ ರೊನಾಲ್ಡ್ ಸಿಮ್ಸ್‌ ನನಗೆ ತರಬೇತಿ ನೀಡುತ್ತಿದ್ದಾರೆ. ಅತ್ಯುತ್ತಮ ತರಬೇತಿ ಪಡೆಯಲು ಸಾಧ್ಯವಾಗುತ್ತಿದೆ. ಇಲ್ಲಿನ ಪರಿಸರಕ್ಕೆ ಮಾರು ಹೋಗಿದ್ದೇನೆ. ಉತ್ತಮ ಸೌಲಭ್ಯಗಳಿದ್ದು ಕೋಚ್‌ಗಳು ನನ್ನ ಪ್ರೇರಕರಾಗಿದ್ದಾರೆ.

ಈ ವರೆಗೆ ಭಾಗವಹಿಸಿದ ಪ್ರಮುಖ ಸ್ಪರ್ಧೆಗಳು ಮತ್ತು ಗೆದ್ದ ಪದಕಗಳು ಯಾವುವು?
ಕಳೆದ ವರ್ಷ ಚಂಡೀಗಡದಲ್ಲಿ ನಡೆದಿದ್ದ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದೆ. ಈ ವರ್ಷದ ಖೇಲೊ ಇಂಡಿಯಾ ಕೂಟದಲ್ಲೂ ಚಿನ್ನದ ಪದಕದ ಸಾಧನೆ ಮಾಡಿದ್ದೆ. ಜರ್ಮನಿಯಲ್ಲಿ ಪಾಲ್ಗೊಂಡದ್ದು ಮೊದಲ ಅಂತರರಾಷ್ಟ್ರೀಯ ಸ್ಪರ್ಧೆ. ಚಿನ್ನದೊಂದಿಗೆ ಮರಳಲು ಸಾಧ್ಯವಾದದ್ದು ಖುಷಿ ನೀಡಿದೆ.

ಮುಂದಿರುವ ಗುರಿ ಏನು? ಏನಾಗಬೇಕು ಎಂದುಕೊಂಡಿದ್ದೀರಾ?
ಉತ್ತಮ ಬಾಕ್ಸರ್ ಆಗಿ ಹೆಸರು ಗಳಿಸಬೇಕು. ಈಗ, ಭಾರತ ಬಾಕ್ಸಿಂಗ್ ಫೆಡರೇಷನ್‌ನ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಸಜ್ಜಾಗುತ್ತಿದ್ದೇನೆ. ಮುಂದಿನ ಗುರಿ ಯೂತ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದು ಮತ್ತು ಪದಕ ಗೆಲ್ಲುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT