ಮಂಗಳವಾರ, ಜೂನ್ 22, 2021
27 °C
ಟೋಕಿಯೋ ಕೂಟ ಆಯೋಜನೆಗೆ ಹೆಚ್ಚಿದ ವಿರೋಧ

ಒಲಿಂಪಿಕ್ಸ್‌ಗೆ ವಿರೋಧ: ಮೂರುವರೆ ಲಕ್ಷ ಸಹಿಗಳ ಅರ್ಜಿ ಸಲ್ಲಿಕೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಈ ಬಾರಿಯ ಒಲಿಂಪಿಕ್ಸ್ಅನ್ನು ರದ್ದುಗೊಳಿಸಲು ಆಗ್ರಹಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕೂಟ ಆಯೋಜನೆಗೆ ವಿರೋಧ ವ್ಯಕ್ತಪಡಿಸಿ ಶುಕ್ರವಾರ ಮೂರುವರೆ ಲಕ್ಷಕ್ಕೂ ಅಧಿಕ ಮಂದಿ ಅರ್ಜಿಗೆ ಸಹಿ ಹಾಕಿದ್ದು, ಟೋಕಿಯೊ ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಹೊಸ ರೂಪದ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಟೋಕಿಯೊ, ಒಸಾಕಾ ಸೇರಿ ಕೆಲವು ಪ್ರದೇಶಗಳಲ್ಲಿ 31ರವರೆಗೆ ತುರ್ತು ಪರಿಸ್ಥಿತಿ ಹೇರಲಾಗಿದ್ದು, ಈ ನಗರಗಳ ಜನರು ಅರ್ಜಿಗೆ ಸಹಿ ಹಾಕಿದ್ದಾರೆ.

ಅರ್ಜಿ ಸಲ್ಲಿಸುವ ಅಭಿಯಾನಕ್ಕೆ ಜಪಾನ್‌ನ ವಕೀಲ ಕೆಂಜಿ ಉತ್ಸುನೋಮಿಯಾ ನೇತೃತ್ವ ವಹಿಸಿದ್ದಾರೆ. ಮೇ 5ರಂದು ಸಹಿ ಸಂಗ್ರಹವನ್ನು ಆರಂಭಿಸಲಾಗಿದೆ.

ಇದೇ ವರ್ಷದ ಜುಲೈ 23ರಿಂದ ಒಲಿಂಪಿಕ್ಸ್ ನಿಗದಿಯಾಗಿದೆ.

ಪ್ರತಿಭಟನಾಕಾರರು ಸಲ್ಲಿಸಿದ ಅರ್ಜಿಯನ್ನು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಅಧ್ಯಕ್ಷ ಥಾಮಸ್ ಬ್ಯಾಚ್‌ ಮತ್ತು ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ಸ್‌ ಸಮಿತಿಯ ಅಧ್ಯಕ್ಷ ಆ್ಯಂಡ್ರ್ಯೂ ಪಾರ್ಸನ್ಸ್ ಅವರಿಗೂ ಕಳುಹಿಸಲಾಗಿದೆ. ಕೋವಿಡ್‌ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಬ್ಯಾಚ್ ಅವರು ತಮ್ಮ ಜಪಾನ್ ಭೇಟಿಯನ್ನು ರದ್ದುಗೊಳಿಸಿದ್ದರು.

ಒಲಿಂಪಿಕ್ಸ್ಅನ್ನು ರದ್ದು ಅಥವಾ ಮುಂದೂಡಲು, ಜಪಾನ್‌ನ ಶೇಕಡ 70ರಿಂದ 80ರಷ್ಟು ಜನ ಜನಾಭಿಪ್ರಾಯ ಸಂಗ್ರಹದಲ್ಲಿ ಒತ್ತಾಯಿಸಿದ್ದಾರೆ. ಆದರೆ ಕೂಟವನ್ನು ರದ್ದುಗೊಳಿಸುವ ಯಾವುದೇ ಸೂಚನೆಗಳು ಕಂಡುಬರುತ್ತಿಲ್ಲ.

ಒಲಿಂಪಿಕ್ಸ್ ನಿಗದಿಯಂತೆ ನಡೆಯಲಿದೆ ಎಂದು ಜಪಾನ್ ಪ‍್ರಧಾನಿ ಯೋಶಿಹಿದೆ ಸುಗಾ, ಟೋಕಿಯೊ ಆಯೋಜನಾ ಸಮಿತಿ ಅಧ್ಯಕ್ಷೆ ಸೀಕೊ ಹಶಿಮೋಟೊ ಮತ್ತು ಬ್ಯಾಚ್ ಅವರು ಪುನರುಚ್ಚರಿಸುತ್ತಲೇ ಇದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು