ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌: ತಾಯ್ ತ್ಸು ಯಿಂಗ್, ಆ್ಯಂಟೊನ್ಸೆನ್‌ಗೆ ಪ್ರಶಸ್ತಿ

Last Updated 31 ಜನವರಿ 2021, 15:08 IST
ಅಕ್ಷರ ಗಾತ್ರ

ಬ್ಯಾಂಕಾಕ್: ಅಗ್ರಶ್ರೇಯಾಂಕದ ತಾಯ್‌ ತ್ಸು ಯಿಂಗ್ ಅತ್ಯಮೋಘ ಆಟದ ಮೂಲಕ ಒಲಿಂಪಿಕ್ ಚಾಂಪಿಯನ್ ಕರೊಲಿನಾ ಮರಿನ್ ಎದುರು ಜಯ ಗಳಿಸಿ ಬಿಡಬ್ಲ್ಯುಎಫ್‌ ಟೂರ್ ಫೈನಲ್ಸ್‌ನ ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು. ಪುರುಷರ ವಿಭಾಗದ ಪ್ರಶಸ್ತಿ ಆ್ಯಂಡೆರ್ಸ್ ಆ್ಯಂಟೊನ್ಸೆನ್ ಅವರ ಮುಡಿಗೇರಿತು.

ಕಳೆದ ಎರಡು ವಾರಗಳಲ್ಲಿ ಇಲ್ಲಿ ನಡೆದ ಎರಡು ಥಾಯ್ಲೆಂಡ್ ಓಪನ್ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದ್ದ ಸ್ಪೇನ್‌ನ ಕರೊಲಿನಾ ಮರಿನ್ ಹ್ಯಾಟ್ರಿಕ್ ಪ್ರಶಸ್ತಿಯ ಕನಸಿನೊಂದಿಗೆ ಕಣಕ್ಕೆ ಇಳಿದಿದ್ದರು. ಆದರೆ ಥಾಯ್ವಾನ್‌ನ ತಾಯ್ ತ್ಸು ಯಿಂಗ್ 14–21, 21–8, 21–19ರಲ್ಲಿ ಜಯ ಗಳಿಸಿ ಮರಿನ್‌ಗೆ ನಿರಾಸೆ ಮೂಡಿಸಿದರು. ಡೆನ್ಮಾರ್ಕ್‌ನ ಆ್ಯಂಟೊನ್ಸೆನ್‌ ತಮ್ಮದೇ ದೇಶದ ವಿಕ್ಟರ್ ಅಕ್ಸೆಲ್ಸನ್ ಅವರನ್ನು 21–16, 5–21, 21–17ರಲ್ಲಿ ಮಣಿಸಿದರು.

26 ವರ್ಷದ ತಾಯ್‌ ಯಿಂಗ್ ಅವರನ್ನು ಎರಡು ವಾರಗಳಲ್ಲಿ ಎರಡು ಬಾರಿ ಮರಿನ್ ಮಣಿಸಿದ್ದರು. ಭಾನುವಾರದ ಫೈನಲ್‌ನಲ್ಲಿ ಆರಂಭದಲ್ಲೇ ಮರಿನ್ ಅವರಿಗೆ ಪೆಟ್ಟು ನೀಡುವಲ್ಲಿ ತಾಯ್ ಯಿಂಗ್ ಯಶಸ್ವಿಯಾದರು. ಆದರೆ ಎರಡನೇ ಗೇಮ್‌ನಲ್ಲಿ ಭರ್ಜರಿ ತಿರುಗೇಟು ನೀಡಿದ ತಾಯ್ ಯಿಂಗ್ ಶಕ್ತಿಶಾಲಿ ಸ್ಮ್ಯಾಷ್‌ ಮತ್ತು ತಂತ್ರಶಾಲಿ ಡ್ರಾಪ್‌ಗಳ ಮೂಲಕ ಮರಿನ್‌ ಅವರನ್ನು ಕಂಗೆಡಿಸಿದರು.

ನಿರ್ಣಾಯಕ ಗೇಮ್‌ ಅಮೋಘ ರ‍್ಯಾಲಿಗಳಿಂದ ತುಂಬಿತ್ತು. ಇಬ್ಬರೂ ಆಟಗಾರ್ತಿಯರು ಪಾಯಿಂಟ್‌ಗಳನ್ನು ಗಳಿಸುತ್ತ ಸಾಗಿದಂತೆ ‍ಪಂದ್ಯ ರೋಚಕವಾಗುತ್ತ ಹೋಯಿತು. ಮೋಹಕ ಡ್ರಾಪ್ ಶಾಟ್‌ಗಳ ಮೂಲಕ ಗೇಮ್ ಪಾಯಿಂಟ್ ಗಳಿಸಿದ ತಾಯ್‌ ಯಿಂಗ್ ಪಂದ್ಯ ಗೆದ್ದು ಸಂಭ್ರಮಿಸಿದರು.

ಸ್ವಯಂ ತಪ್ಪುಗಳಿಗೆ ಬೆಲೆ ತೆತ್ತ ಅಕ್ಸೆಲ್ಸನ್

ಮೊದಲ ಗೇಮ್‌ನಲ್ಲಿ ಸ್ವಯಂ ತಪ್ಪುಗಳನ್ನು ಎಸಗುತ್ತ ಪಾಯಿಂಟ್‌ಗಳನ್ನು ಕಳೆದುಕೊಂಡ ಅಕ್ಸೆಲ್ಸನ್ ತಮ್ಮನ್ನು ತಾವೇ ನಿಯಂತ್ರಿಸಲಾಗದೆ ಬೇಸರವನ್ನು ಬಹಿರಂಗವಾಗಿ ವ್ಯಕ್ತಪಡಿಸಿದರು. ಆದರೆ ಎರಡನೇ ಗೇಮ್‌ನಲ್ಲಿ ಚೇತರಿಸಿಕೊಂಡ ಅವರು ಎದುರಾಳಿಗೆ ದಿಟ್ಟ ಉತ್ತರ ನೀಡಿ ಭಾರಿ ಅಂತರದಿಂದ ಗೆಲುವು ಸಾಧಿಸಿದರು. ನಿರ್ಣಾಯಕ ಗೇಮ್‌ನಲ್ಲಿ ಆ್ಯಂಟೊನ್ಸೆನ್‌ ಅವರನ್ನು ನಿಯಂತ್ರಿಸಲು ಅಕ್ಸೆಲ್ಸನ್‌ಗೆ ಸಾಧ್ಯವಾಗಲಿಲ್ಲ. ನಡುನಡುವೆ ತಿರುಗೇಟು ನೀಡಲು ಸಾಧ್ಯವಾದರೂ ಪಂದ್ಯ ಗೆಲ್ಲಲು ಅಕ್ಸೆಲ್ಸನ್‌ಗೆ ಸಾಧ್ಯವಾಗಲಿಲ್ಲ.

ಮಹಿಳೆಯರ ಡಬಲ್ಸ್ ವಿಭಾಗದ ಪ್ರಶಸ್ತಿ ದಕ್ಷಿಣ ಕೊರಿಯಾದ ಲೋ ಸೀ ಹೀ ಮತ್ತು ಶಿನ್ ಸೆಂಗ್ ಚಾನ್ ಜೋಡಿಯ ಪಾಲಾಯಿತು. ತಮ್ಮದೇ ದೇಶದ ಕಿಮ್ ಯಾಂಗ್ ಮತ್ತು ಕಾಂಗ್‌ ಹೀ ಯಾಂಗ್ ಜೋಡಿಯನ್ನು ಅವರು 15–21, 26–24, 21–19ರಲ್ಲಿ ಸೋಲಿಸಿದರು. ಪುರುಷರ ಡಬಲ್ಸ್‌ನಲ್ಲಿ ಥಾಯ್ವಾನ್‌ನ ಲೀ ಯಾಂಗ್ ಮತ್ತು ವಾಂಗ್ ಚಿ ಲಿನ್ ಜೋಡಿ ಇಂಡೊನೇಷ್ಯಾದ ಮೊಹಮ್ಮದ್ ಅಹ್ಸಾನ್ ಮತ್ತು ಹೇಂದ್ರ ಸೇತ್ಯವಾನ್ ವಿರುದ್ಧ 21-17, 23-21ರಲ್ಲಿ ಮಣಿಸಿ ಮೂರು ವಾರಗಳಲ್ಲಿ ಮೂರನೇ ಪ್ರಶಸ್ತಿ ಗೆದ್ದರು. ಮಿಶ್ರ ಡಬಲ್ಸ್‌ನಲ್ಲಿ ಥಾಯ್ಲೆಂಡ್‌ನ ಸಪ್‌ಸಿರಿ ತಯರೆಟ್ಟಂಚಿ ಮತ್ತು ದೇಚಪೊಲ್ ಪೌರಂಕೊಹ್ 21-18, 8-21, 21-8ರಲ್ಲಿ ದಕ್ಷಿಣ ಕೊರಿಯಾದ ಸೇ ಸೇಂಗ್‌ ಜೇ ಮತ್ತು ಚೇ ಯೋ ಜಂಗ್‌ ಮಣಿಸಿ ಪ್ರಶಸ್ತಿ ಗೆದ್ದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT