ಶುಕ್ರವಾರ, ಮೇ 14, 2021
32 °C
ಆರ್ಚರಿ ವಿಶ್ವಕಪ್ ಮೊದಲ ಹಂತದ ಟೂರ್ನಿ: ಅಂಕಿತಾ ಭಕತ್‌ಗೆ ಸೋಲು

ಸೆಮಿಫೈನಲ್‌ಗೆ ಅತನು, ದೀಪಿಕಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗ್ವಾಟೆಮಾಲಾ ಸಿಟಿ: ಪ್ರತಿಕೂಲದ ಹವಾಗುಣದ ನಡುವೆಯೂ ಉತ್ತಮ ಸಾಮರ್ಥ್ಯ ತೋರಿದ ದೀಪಿಕಾ ಕುಮಾರಿ ಹಾಗೂ ಅತನು ದಾಸ್, ಇಲ್ಲಿ ನಡೆಯುತ್ತಿರುವ ವಿಶ್ವಕಪ್ ಆರ್ಚರಿ ಮೊದಲ ಹಂತದ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಕಾಲಿಟ್ಟರು. ರಿಕರ್ವ್‌ ವಿಭಾಗದ ಪುರುಷ ಮತ್ತು ಮಹಿಳಾ ವೈಯಕ್ತಿಕ ಸ್ಪರ್ಧೆಗಳಲ್ಲಿ ಮುನ್ನಡೆದರು.

ಅತನು ಹಾಗೂ ದೀಪಿಕಾ ದಂಪತಿ, ಗುರುವಾರ ಮಿಶ್ರ ರಿಕರ್ವ್‌ ವಿಭಾಗದಲ್ಲಿ ಜೊತೆಯಾಗಿ ಕಂಚಿನ ಪದಕದ ಪ್ಲೇ ಆಫ್ಸ್ ತಲುಪಿದ್ದರು.

ಇಲ್ಲಿಯ ಲಾಸ್‌ ಅರ್ಕೋಸ್‌ನ ಕ್ರೀಡಾ ಸಂಕೀರ್ಣದಲ್ಲಿ ಶುಕ್ರವಾರ ತೀವ್ರವಾಗಿ ಬೀಸುತ್ತಿದ್ದ ಗಾಳಿಯು ದೀಪಿಕಾ ಅವರ ಗುರಿಯನ್ನು ತಪ್ಪಿಸಲಿಲ್ಲ. ಕ್ವಾರ್ಟರ್‌ಫೈನಲ್‌ನಲ್ಲಿ ನೇರ ಸೆಟ್‌ಗಳಿಂದ ಜರ್ಮನಿಯ ಆರ್ಚರ್‌ ಮಿಚೆಲ್ಲೆ ಕ್ರಾಫನ್‌ ಅವರನ್ನು ಮಣಿಸಿದರು. ಈ ಹಿಂದೆ ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನ ಅಲಂಕರಿಸಿದ್ದ ದೀಪಿಕಾ, ಈ ಪಂದ್ಯದ ಮೂರು ಸೆಟ್‌ಗಳಲ್ಲಿ ಕ್ರಮವಾಗಿ 29, 30 ಹಾಗೂ 30 ಪಾಯಿಂಟ್ಸ್ ಗಳಿಸಿದರು. ಭಾನುವಾರ ನಡೆಯುವ ನಾಲ್ಕರಘಟ್ಟದ ಹಣಾಹಣಿಯಲ್ಲಿ ಅವರಿಗೆ ಮೆಕ್ಸಿಕೊದ ಅಲೆಜಾಂಡ್ರಾ ವೆಲೆನ್ಸಿಯಾ ಸವಾಲು ಎದುರಾಗಿದೆ.

ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿರುವ ದೀಪಿಕಾ, ವಿಶ್ವಕಪ್‌ನ ಎರಡು ಹಂತದ ಟೂರ್ನಿಗಳಲ್ಲಿ ವಿಜಯಿಯಾಗಿದ್ದಾರೆ. 2012ರಲ್ಲಿ ಟರ್ಕಿಯ ಅಂತಲ್ಯಾದಲ್ಲಿ ಹಾಗೂ 2018ರಲ್ಲಿ ಅಮೆರಿಕದ ಸಾಲ್ಟ್‌ಲೇಕ್ ಸಿಟಿಯಲ್ಲಿ ನಡೆದ ಟೂರ್ನಿಗಳಲ್ಲಿ ಅವರು ಅಗ್ರಸ್ಥಾನ ಗಳಿಸಿದ್ದರು.

ಕ್ವಾರ್ಟರ್‌ಫೈನಲ್‌ ಪಂದ್ಯಕ್ಕೂ ಮೊದಲು ದೀಪಿಕಾ, ಅಮೆರಿಕದ ಕೆಸ್ಲಿ ಲಾರ್ಡ್‌ ಎದುರು ಹಾಗೂ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ, ಮೆಕ್ಸಿಕೊದ ಐಡಾ ರೋಮನ್ ವಿರುದ್ಧ ಗೆಲುವು ಸಾಧಿಸಿದ್ದರು.

ಎಂಟರಘಟ್ಟದ ಸೆಣಸಾಟದಲ್ಲಿ ಅತನು, ಕೆನಡಾದ ಎರಿಕ್ ಪೀಟರ್ಸ್‌ ಅವರನ್ನು ಹಿಂದಿಕ್ಕಿದರು. ವಿಶ್ವಕಪ್‌ನಲ್ಲಿ ಮೊದಲ ಬಾರಿ ‘ಪೋಡಿಯಂ ಫಿನಿಶ್‘ ಮಾಡುವ ಅವಕಾಶ ಅತನು ಅವರಿಗೆ ಒದಗಿಬಂದಿದೆ. 2016ರಲ್ಲಿ ಅಂತಲ್ಯಾದಲ್ಲಿ ಅವರು ನಾಲ್ಕನೇ ಸ್ಥಾನ ಗಳಿಸಿದ್ದರು.

ಮಿಶ್ರ ವಿಭಾಗದಲ್ಲಿ ಎರಡನೇ ಶ್ರೇಯಾಂಕ ಪಡೆದಿರುವ ಅತನು– ದೀಪಿಕಾ ಜೋಡಿ ಸ್ಪೇನ್‌ ಸ್ಪರ್ಧಿಗಳನ್ನು ಮಣಿಸಿ ಸೆಮಿಫೈನಲ್ ತಲುಪಿದ್ದರು. ಆದರೆ ಸೆಮಿಯಲ್ಲಿ ಮೆಕ್ಸಿಕೊದ ಎದುರಾಳಿಗಳ ವಿರುದ್ಧ ಸೋಲು ಅನುಭವಿಸಿದರು. ಭಾನುವಾರ ನಡೆಯುವ ಕಂಚಿನ ಪದಕ ಸುತ್ತಿನಲ್ಲಿ ಅವರಿಗೆ ಅಮೆರಿಕದ ಬ್ರಾಡಿ ಎಲಿಸನ್‌–ಕೇಸಿ ಕೌಫೋಲ್ಡ್ ಸವಾಲು ಎದುರಾಗಿದೆ.

ಮಹಿಳೆಯರ ವೈಯಕ್ತಿಕ ವಿಭಾಗದ ರಿಕರ್ವ್‌ ಕ್ವಾರ್ಟರ್‌ಫೈನಲ್‌ನಲ್ಲಿ ಅಂಕಿತಾ ಭಕತ್ ಅವರು ಅಲೆಜಾಂಡ್ರಾ ವೆಲೆನ್ಸಿಯಾ ಎದುರು ಸೋತರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.