ಶುಕ್ರವಾರ, ಜುಲೈ 1, 2022
21 °C

ಅಸ್ತಮಿಸಿದ ಟೇಬಲ್‌ ಟೆನಿಸ್‌ ‘ರವಿ’...

ಪ್ರಮೋದ Updated:

ಅಕ್ಷರ ಗಾತ್ರ : | |

Prajavani

ಉತ್ತರ ಕರ್ನಾಟಕ ಭಾಗದಲ್ಲಿ ಟೇಬಲ್‌ ಟೆನಿಸ್‌ ಕ್ರೀಡೆ ಪ್ರಖರವಾಗಿ ಬೆಳಗಲು ಹಗಲಿರುಳು ದುಡಿದ ಧಾರವಾಡದ ‘ರವಿ’ (ರವಿ ಒಡೆಯರ್) ಅಸ್ತಮಿಸಿದ್ದಾರೆ. ತಮ್ಮ ಬದುಕಿನ 65 ವಸಂತಗಳಲ್ಲಿ ಅವರು ಬಹುಪಾಲು ಸಮಯವನ್ನು ಕ್ರೀಡೆಗಾಗಿಯೇ ಮೀಸಲಿಟ್ಟಿದ್ದರು. ತರಬೇತಿ ಕೌಶಲದ ಮೂಲಕ ಹಲವಾರು ಕ್ರೀಡಾಪಟುಗಳನ್ನು ನಾಡಿಗೆ ಕೊಡುಗೆಯಾಗಿ ಕೊಟ್ಟಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ 1950ರ ಬಳಿಕ ಟೇಬಲ್‌ ಟೆನಿಸ್‌ ಹೆಚ್ಚು ಪ್ರಚಲಿತಕ್ಕೆ ಬಂತು. ಆಗ ಹುಬ್ಬಳ್ಳಿ ರೈಲ್ವೆ ತಂಡ, ಕಾಸ್ಮೊಸ್‌ ಕ್ಲಬ್‌, ಎ.ಕೆ. ಇಂಡಸ್ಟ್ರಿ ತಂಡಗಳು ಪ್ರಮುಖವಾಗಿದ್ದವು. ಆರಂಭದಲ್ಲಿ ಜಯಶೀಲನ್‌, ಕರುಣಾಕರನ್‌, 1960ರ ನಂತರದ ದಶಕದಲ್ಲಿ ಸುಧೀರ ಗೋಖಲೆ, ಜೆ. ಪುರುಷೋತ್ತಮರಾವ್, ಸತೀಶ ಟಗರ್‌ಪುರ್, ರವಿ ಕುಲಕರ್ಣಿ ಇವರೆಲ್ಲ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದರು. ಜಾರ್ಜ್‌ ಎಸ್‌. ಹೆನ್ರಿ ಎಲ್‌ಐಸಿ ದಕ್ಷಿಣ ವಿಭಾಗದ ತಂಡ ಪ್ರತಿನಿಧಿಸಿದ್ದರು.

ಟಿ.ಜಿ. ಉಪಾಧ್ಯೆ ರಾಷ್ಟ್ರೀಯ ಮಟ್ಟದ ರೆಫರಿಯಾಗಿದ್ದರು. ಇವರ ನಂತರದ ತಲೆಮಾರಿನಲ್ಲಿ ಬಂದ ಜೇವೂರ್, ಸಾಗರ್‌, ನಂದಾ ದೇಶಪಾಂಡೆ ಅವರ ಜೊತೆಯಲ್ಲಿಯೇ ಆಡಿ ಈ ಭಾಗದಲ್ಲಿ ಟೇಬಲ್‌ ಟೆನಿಸ್‌ಗೆ ಗಟ್ಟಿತನ ತಂದುಕೊಟ್ಟಿದ್ದು ರವಿ ಒಡೆಯರ್. ಎಡಗೈ ಆಟಗಾರರಾಗಿದ್ದ ಒಡೆಯರ್ ಧಾರವಾಡ ಜಿಲ್ಲಾ ಟೇಬಲ್‌ ಟೆನಿಸ್‌ ಸಂಸ್ಥೆ ಸಂಸ್ಥಾಪಕ ಸದಸ್ಯ ಮತ್ತು ಕಾರ್ಯಾಧ್ಯಕ್ಷರಾಗಿದ್ದರು. ನಾಲ್ಕು ದಶಕಗಳ ಹಿಂದೆ ಎ.ಕೆ. ಇಂಡಷ್ಟ್ರಿ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ತಂಡಗಳನ್ನು ಪ್ರತಿನಿಧಿಸಿದ್ದರು.

ರವಿ ಒಡೆಯರ್ ಜೊತೆಗಿನ ನೆನಪುಗಳನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಭಾರತ ಟೇಬಲ್‌ ಟೆನಿಸ್‌ ಜೂನಿಯರ್ ತಂಡದ ಕೋಚ್‌ ಆಗಿದ್ದ ಜೆ.ಕೆ. ವಿಶ್ವನಾಥ್‌ ‘ನಾಲ್ಕು ದಶಕಗಳ ಹಿಂದೆ ನಾನು ಬೆಂಗಳೂರಿನಲ್ಲಿ ಆಡುತ್ತಿದ್ದರೆ, ರವಿ ಧಾರವಾಡದಲ್ಲಿ ಈ ಕ್ರೀಡೆಯ ಛಾಪು ಮೂಡಿಸಿದ್ದರು. ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಟೂರ್ನಿಗಳು ನಡೆದಾಗ ರವಿ ಬರುತ್ತಾನೆಂದರೆ ನಮ್ಮಲ್ಲಿ ಸಣ್ಣ ಭಯ ಇರುತ್ತಿತ್ತು. ಎಡಗೈ ಆಟಗಾರನಾಗಿದ್ದರಿಂದ ಕರಾರುವಕ್ಕಾದ ಹೊಡೆತಗಳು ಎಲ್ಲರನ್ನೂ ಅಚ್ಚರಿಗೊಳಿಸುತ್ತಿದ್ದವು. ಕರ್ನಾಟಕ ವಿ.ವಿ. ತಂಡಕ್ಕೆ ನಾಯಕರೂ ಆಗಿದ್ದರು. ಹಲವು ಟೂರ್ನಿಗಳಿಗೆ ಕೋಚ್‌ ಆಗಿ ರಾಜ್ಯ ತಂಡದ ಜೊತೆಗಿದ್ದರು’ ಎಂದರು.

‘ರವಿ ತಾವು ಆಡುವ ಜೊತೆಗೆ ಹೊಸ ತಲೆಮಾರಿನ ಆಟಗಾರರನ್ನು ಮನೆಮನೆಗೆ ಹೋಗಿ ಕರೆತಂದು, ಅವರ ಪೋಷಕರ ಮನವೊಲಿಸಿ ತರಬೇತಿ ನೀಡಿದ್ದು ದೊಡ್ಡ ಸಾಧನೆ. ಇದರಿಂದ ವಿದ್ಯಾ ಕಾಮತ್‌, ಶೋಭಾ ವಾಲಿ, ಜಾವೂರ್‌, ವಾಸನ್‌, ರವಿ ನಾಯ್ಕ, ಕಾಶಿನಾಥ್‌ ಕೇದಾರಿ ಹೀಗೆ ಅನೇಕ ಪ್ರತಿಭಾವಂತ ಆಟಗಾರರು ಉತ್ತರ ಕರ್ನಾಟಕದಿಂದ ಬೆಳೆದು ಬಂದರು. ಕಾಶಿನಾಥ್‌ ಟೇಬಲ್‌ ಟೆನಿಸ್‌ ಕ್ರೀಡೆಯಲ್ಲಿನ ಸಾಧನೆಗೆ ಏಕಲವ್ಯ ಪ್ರಶಸ್ತಿ ಪಡೆಯಲು ವಡೆಯರ್ ಕಾರಣ’ ಎಂದರು.


ರವಿ ಒಡೆಯರ್

ತಮ್ಮ ಗುರುವಿನ ಜೊತೆ ಕಳೆದ ದಿನಗಳನ್ನು ಸ್ಮರಿಸಿದ ಕೇದಾರಿ ‘ರವಿ ಮತ್ತು ನಾನು ಇಬ್ಬರೂ ಎಡಗೈ ಆಟಗಾರರು, ಆಡುವ ಶೈಲಿ ಕೂಡ ಒಂದೇ ತೆರನಾಗಿತ್ತು. ಆದ್ದರಿಂದ ಸ್ನೇಹಿತರೆಲ್ಲರೂ ನನಗೆ ಜೂನಿಯರ್‌ ಒಡೆಯರ್ ಎನ್ನುತ್ತಿದ್ದರು. ಕ್ರೀಡೆಯಲ್ಲಿ ಇನ್ನಷ್ಟು ಸಾಧನೆ ಮಾಡಲು ನಾನು 1978ರಲ್ಲಿ ಬೆಂಗಳೂರಿಗೆ ಹೋದಾಗ ಮತ್ತು ಅಖಿಲ ಭಾರತ ಮಟ್ಟದ ಟೂರ್ನಿಗಳಲ್ಲಿ ಆಡುವಾಗಲೂ ರವಿ ಮಾರ್ಗದರ್ಶನ ಪಡೆದುಕೊಳ್ಳುತ್ತಿದ್ದೆ. ನನ್ನ ಎಲ್ಲ ಸಾಧನೆಗೂ ಅವರೇ ಕಾರಣ’ ಎಂದು ಭಾವುಕರಾದರು. ಕೇದಾರಿ ಅವರು 24 ವರ್ಷಗಳ ಕಾಲ ರಾಜ್ಯಮಟ್ಟದ ಟೂರ್ನಿಗಳಲ್ಲಿ ಆಡಿದ್ದಾರೆ. ಮೂರು ಸಲ ಇಂಡಿಯಾ ಕಪ್‌ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.

ರವಿ ಅವರ ಇನ್ನೊಬ್ಬ ಸ್ನೇಹಿತ ಬಸವರಾಜ ಬೇಗೂರು ‘ಟೇಬಲ್‌ ಟೆನಿಸ್‌ ಪಂದ್ಯಗಳನ್ನು ಆಡಲು ರವಿ ಎಷ್ಟು ಮಹತ್ವ ಕೊಡುತ್ತಿದ್ದರೊ ಅಷ್ಟೇ ಮಹತ್ವವನ್ನು ಹೊಸ ಆಟಗಾರರನ್ನು ಬೆಳಕಿಗೆ ತರಲು ನೀಡುತ್ತಿದ್ದರು. ಅತ್ಯುತ್ತಮ ಕ್ರೀಡಾಪಟು ಹಾಗೂ ಕ್ರೀಡಾ ಪೋಷಕರಾಗಿದ್ದರು’ ಎಂದು ಸ್ಮರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು