ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ: ಗೋಲಿನ ಮಳೆ ಸುರಿಸಿದ ಭಾರತ

Last Updated 19 ಅಕ್ಟೋಬರ್ 2018, 18:12 IST
ಅಕ್ಷರ ಗಾತ್ರ

ಮಸ್ಕತ್‌: ಸುಲ್ತಾನ್‌ ಕ್ವಾಬೂಸ್‌ ಸಂಕೀರ್ಣದಲ್ಲಿ ಗುರುವಾರ ರಾತ್ರಿ ಭಾರತದ ಆಟಗಾರರು ಗೋಲಿನ ಮಳೆ ಸುರಿಸಿದರು.

ಸ್ಟ್ರೈಕರ್ ದಿಲ್‌ಪ್ರೀತ್‌ ಸಿಂಗ್‌ ಅವರ ‘ಹ್ಯಾಟ್ರಿಕ್‌’ ಸಾಧನೆಯ ಬಲದಿಂದ ಮನ್‌ಪ್ರೀತ್‌ ಸಿಂಗ್ ಬಳಗ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ತನ್ನ ಮೊದಲ ಹಣಾಹಣಿಯಲ್ಲಿ ಭಾರತ 11–0 ಗೋಲುಗಳಿಂದ ಒಮನ್‌ ಎದುರು ಗೆದ್ದಿತು.ತವರಿನ ಅಭಿಮಾನಿಗಳ ಎದುರು ಕಣಕ್ಕಿಳಿದಿದ್ದ ಒಮನ್‌ ತಂಡದವರು ಮೊದಲ ಕ್ವಾರ್ಟರ್‌ನಲ್ಲಿ ಹಾಲಿ ಚಾಂಪಿಯನ್‌ ಭಾರತಕ್ಕೆ ಗೋಲು ಬಿಟ್ಟುಕೊಡಲಿಲ್ಲ.

ಇದರಿಂದ ವಿಶ್ವಾಸ ಕಳೆದುಕೊಳ್ಳದ ಮನ್‌ಪ್ರೀತ್‌ ಬಳಗ 17ನೇ ನಿಮಿಷದಲ್ಲಿ ಖಾತೆ ತೆರೆಯಿತು. ಲಲಿತ್‌ ಉಪಾಧ್ಯಾಯ ಚೆಂಡನ್ನು ಗುರಿ ಮುಟ್ಟಿಸಿದರು.

22ನೇ ನಿಮಿಷದಲ್ಲಿ ‌ಹರ್ಮನ್‌ಪ್ರೀತ್‌ ಸಿಂಗ್‌ ಕೈಚಳಕ ತೋರಿದರು. ಇದರ ಬೆನ್ನಲ್ಲೇ ನೀಲಕಂಠ ಶರ್ಮಾ (23ನೇ ನಿ.) ಗೋಲು ದಾಖಲಿಸಿದರು. ಹೀಗಾಗಿ ಭಾರತ 3–0ರ ಮುನ್ನಡೆ ಗಳಿಸಿತು. ಆಕಾಶ್‌ದೀಪ್‌ ಸಿಂಗ್‌ (27ನೇ ನಿ.), ಮನದೀಪ್‌ ಸಿಂಗ್‌ (30ನೇ ನಿ.) ಮತ್ತು ಗುರ್ಜಂತ್‌ ಸಿಂಗ್‌ (37ನೇ ನಿ.) ಅವರೂ ಮೋಡಿ ಮಾಡಿದರು.

ದ್ವಿತೀಯಾರ್ಧದಲ್ಲೂ ಭಾರತ ತಂಡ ಪ್ರಾಬಲ್ಯ ಮೆರೆಯಿತು. ದಿಲ್‌ಪ್ರೀತ್‌ 41, 55 ಮತ್ತು 57ನೇ ನಿಮಿಷಗಳಲ್ಲಿ ಗೋಲು ಬಾರಿಸಿ ‘ಹ್ಯಾಟ್ರಿಕ್‌’ ಪೂರೈಸಿದರು.

ವರುಣ್‌ ಕುಮಾರ್‌ ಮತ್ತು ಚಿಂಗ್ಲೆನ್‌ಸನಾ ಸಿಂಗ್‌ ಅವರು ಕ್ರಮವಾಗಿ 49 ಮತ್ತು 53ನೇ ನಿಮಿಷಗಳಲ್ಲಿ ಗೋಲು ಗಳಿಸಿ ಗೆಲುವಿನ ಅಂತರ ಹೆಚ್ಚಿಸಿದರು.

‘ಸಹ ಆಟಗಾರರ ನೆರವಿನಿಂದಾಗಿ ‘ಹ್ಯಾಟ್ರಿಕ್‌’ ಗೋಲು ಗಳಿಸಲು ಸಾಧ್ಯವಾಯಿತು. ಮುಂದಿನ ಪಂದ್ಯಗಳಲ್ಲೂ ಇದೇ ರೀತಿಯ ಸಾಮರ್ಥ್ಯ ತೋರಿ ತಂಡಕ್ಕೆ ಗೆಲುವು ತಂದುಕೊಡಲು ಪ್ರಯತ್ನಿಸುತ್ತೇನೆ’ ಎಂದು ‘ಪಂದ್ಯಶ್ರೇಷ್ಠ’ ಗೌರವ ಪಡೆದ ಬಳಿಕ ದಿಲ್‌ಪ್ರೀತ್‌ ತಿಳಿಸಿದರು.

‘ಮೊದಲ ಪಂದ್ಯದಲ್ಲೇ ದೊಡ್ಡ ಅಂತರದಿಂದ ಗೆದ್ದಿದ್ದು ಖುಷಿ ನೀಡಿದೆ. ಇದು ಆಟಗಾರರ ಮನೋಬಲ ಹೆಚ್ಚುವಂತೆ ಮಾಡಿದೆ’ ಎಂದು ಮುಖ್ಯ ಕೋಚ್ ಹರೇಂದ್ರ ಸಿಂಗ್‌ ನುಡಿದಿದ್ದಾರೆ.ಭಾರತ ತಂಡ ಶನಿವಾರ ನಡೆಯುವ ತನ್ನ ಎರಡನೇ ಹೋರಾಟದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT