ಶುಕ್ರವಾರ, ಜುಲೈ 30, 2021
20 °C
ಪ್ಯಾರಾಲಿಂಪಿಕ್ಸ್ ನಿರ್ಧಾರಕ್ಕೆ ಇನ್ನಷ್ಟು ಕಾಲಾವಕಾಶ

ಟೋಕಿಯೊ ಒಲಿಂಪಿಕ್ಸ್‌ಗೆ ಪ್ರೇಕ್ಷಕರ ನಿರ್ಬಂಧ: ಕ್ರೀಡಾ ಸಂಸ್ಥೆ, ಅಥ್ಲಿಟ್‌ಗಳ ಬೇಸರ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಈ ಬಾರಿಯ ಒಲಿಂಪಿಕ್ಸ್‌ ಕೂಟ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶ ನೀಡದೇ ಇರುವುದಕ್ಕೆ ಕ್ರೀಡಾಸಂಸ್ಥೆಗಳು ಮತ್ತು ಅಥ್ಲೀಟ್‌ಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಕ್ರೀಡಾಕೂಟವನ್ನು ನಡೆಸುವುದು ಕೂಡ ಮುಖ್ಯ ಎಂಬ ಅಭಿಪ್ರಾಯವೂ ಅವರಿಂದ ವ್ಯಕ್ತವಾಗಿದೆ.

ಕೋವಿಡ್‌ನಿಂದಾಗಿ ವಿದೇಶಿ ಪ್ರೇಕ್ಷಕರಿಗೆ ಅವಕಾಶ ಇಲ್ಲ ಎಂದು ಈ ಹಿಂದೆಯೇ ಆಯೋಜಕರು ತಿಳಿಸಿದ್ದರು. ಸ್ಥಳೀಯ ಪ್ರೇಕ್ಷಕರಿಗೂ ನಿರ್ಬಂಧ ಹೇರಿ ಗುರುವಾರ ಆದೇಶ ಹೊರಡಿಸಿದೆ. ಜಪಾನ್‌ನಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಹೇರಿದ್ದು, ಅದು ಒಲಿಂಪಿಕ್ಸ್ ಸಂದರ್ಭದಲ್ಲೂ ಜಾರಿಯಲ್ಲಿ ಇರುವುದರಿಂದ ಈ ಕ್ರಮಕ್ಕೆ ಮುಂದಾಗಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಮೊದಲ ಪದಕದ ನಿರೀಕ್ಷೆಯಲ್ಲಿರುವ ಅಮೆರಿಕದ 100 ಮೀಟರ್ಸ್ ಹರ್ಡಲ್ಸ್‌ ಪಟು, ವಿಶ್ವ ದಾಖಲೆಯ ಒಡತಿ ಕೆಂಡ್ರಾ ಹ್ಯಾರಿಸನ್ ‘ಗ್ಯಾಲರಿಯಲ್ಲಿ ಪ್ರೇಕ್ಷಕರಿಲ್ಲದೆ ಟ್ರ್ಯಾಕ್‌ನಲ್ಲಿ ಓಡುವಾಗ ಹುಮ್ಮಸ್ಸು ಕಡಿಮೆಯಾಗುತ್ತದೆ. ಹೀಗಾಗಿ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇದೆ’ ಎಂದು ಹೇಳಿದರು.

 ಕರಾಟೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ಜಪಾನ್‌ನ ಅಯುಮಿ ಉವೆಕುಸ ‘ಕ್ರೀಡಾಪಟುಗಳನ್ನು ಹುರಿದುಂಬಿಸಲು ಪ್ರೇಕ್ಷಕರು ಇಲ್ಲ ಎಂಬುದು ನಾಚಿಕೆಯ ಸಂಗತಿ. ಆದರೂ ಸದ್ಯದ ಪರಿಸ್ಥಿತಿಯಲ್ಲಿ ಪ್ರೇಕ್ಷಕರಿಗೆ ನಿರ್ಬಂಧ ಹೇರುವುದು ಅನಿವಾರ್ಯವಾಗಿದೆ’ ಎಂದರು. 

ಕೆಲವು ಕ್ರೀಡಾ ಸಂಘಟನೆಗಳು ನೀಡಿರುವ ಹೇಳಿಕೆಗೆ ಪೂರಕವಾಗಿ ಅಂತರರಾಷ್ಟ್ರೀಯ ಇಕ್ವೆಸ್ಟ್ರಿಯನ್ ಫೆಡರೇಷನ್‌ ಅಧ್ಯಕ್ಷ ಇಂಗಮಾರ್‌ ಡಿ ವೋಸ್ ಮಾತನಾಡಿದ್ದಾರೆ. ಆದರೆ ಆಯೋಜಕರ ಭಾವನೆಗಳನ್ನು ಅರ್ಥಮಾಡಿಕೊಂಡು ಅವರ ತೀರ್ಮಾನಕ್ಕೆ ತಲೆಬಾಗುವುದಾಗಿ ಹೇಳಿದ್ದಾರೆ. 

ಪ್ರೇಕ್ಷಕರಿಲ್ಲದ ಅಂಗಣದಲ್ಲಿ ಪಾಲ್ಗೊಳ್ಳಲು ತನ್ನ ಕ್ರೀಡಾಪಟುಗಳು ಸಿದ್ಧತೆ ನಡೆಸುತ್ತಿದ್ದಾರೆ ಎಂದು ನ್ಯೂಜಿಲೆಂಡ್ ಒಲಿಂಪಿಕ್ ಸಮಿತಿ ತಿಳಿಸಿದೆ.

ಟಿಕೆಟ್‌ಗಳಲ್ಲಿ ಕಣ್ಣೀರು

ಪ್ರೇಕ್ಷಕರಿಗೆ ಅವಕಾಶ ಇಲ್ಲ ಎಂದು ಆಯೋಜಕರು ಘೋಷಿಸಿದ ನಂತರ ಕ್ರೀಡಾಪ್ರಿಯರು ಟಿಕೆಟ್ ವಾಪಸ್ ಮಾಡಲು ಆರಂಭಿಸಿದ್ದಾರೆ. ಶುಕ್ರವಾರ ಪ್ರೇಕ್ಷಕರೊಬ್ಬರ ಟಿಕೆಟ್ ವಾಪಸ್ ನೀಡುವಾಗ ಅಧಿಕಾರಿ ಹಿಡೆನೊರಿ ಸುಜುಕಿ ಕಣ್ಣೀರು ಹಾಕಿದರು. ಅದರಿಂದ ಟಿಕೆಟ್ ಒದ್ದೆಯಾಯಿತು.

ಪ್ಯಾರಾಲಿಂಪಿಕ್ಸ್‌ಗೆ ಪ್ರೇಕ್ಷಕರನ್ನು ಬಿಡಬೇಕೇ ಬೇಡವೇ ಎಂಬುದರ ಬಗ್ಗೆ ಒಲಿಂಪಿಕ್ಸ್‌ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಟೋಕಿಯೊ ಒಲಿಂಪಿಕ್ಸ್ ಅಧ್ಯಕ್ಷೆ ಸೀಕೊ ಹಾಶಿಮೊಟೊ ತಿಳಿಸಿದ್ದಾರೆ. ಒಲಿಂಪಿಕ್ಸ್ ಕೂಟ ಇದೇ 23ರಿಂದ ಆಗಸ್ಟ್ ಎಂಟರ ವರೆಗೆ ನಡೆಯಲಿದ್ದು ಪ್ಯಾರಾಲಿಂಪಿಕ್ಸ್‌ ಆಗಸ್ಟ್ 24ರಂದು ಆರಂಭವಾಗಲಿದೆ.

ಕ್ರೀಡಾಪಟುಗಳ ಜೊತೆ ಮೋದಿ ಸಂವಾದ 

ಟೋಕಿಯೊ ಒಲಿಂಪಿಕ್ಸ್‌ಗೆ ತೆರಳುವ ಭಾರತದ ಕ್ರೀಡಾಪಟುಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಇದೇ 13ರಂದು ಸಂವಾದ ನಡೆಸಲಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಭಾರತ ನಡೆಸಿರುವ ಸಿದ್ಧತೆಯ ಕುರಿತು ತಿಳಿಯಲು ಶುಕ್ರವಾರ ಅವರು ಸಭೆ ನಡೆಸಿದರು. ಮೊದಲ ತಂಡ ಟೋಕಿಯೊಗೆ ಹೊರಡುವ ಮೂರು ದಿನಗಳ ಹಿಂದೆ ವರ್ಚುವಲ್‌ ಆಗಿ ಸಂವಾದ ನಡೆಯಲಿದೆ ಎಂದು ಸಭೆಯ ನಂತರ ತಿಳಿಸಲಾಯಿತು. ದೇಶದ ಎಲ್ಲ ಜನರ ಪರವಾಗಿ ತಾವು ಅಥ್ಲೀಟ್‌ಗಳ ಜೊತೆ ಮಾತನಾಡಲಿರುವುದಾಗಿ ಮೋದಿ ಟ್ವೀಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು