ಭಾನುವಾರ, ಏಪ್ರಿಲ್ 18, 2021
23 °C
ಭಾರತ ‘ಎ’ ಎದುರು ವೆಸ್ಟ್ ಇಂಡೀಸ್ ‘ಎ’ಗೆ ಐದು ರನ್‌ಗಳ ಜಯ

ನಾಲ್ಕನೇ ಏಕದಿನ ಪಂದ್ಯ: ಅಕ್ಷರ್ ಅಮೋಘ ಆಟ; ಮುರಿದ ಜಯ ಓಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೂಲಿಜ್‌, ವೆಸ್ಟ್ ಇಂಡೀಸ್‌: ಅಕ್ಷರ್ ಪಟೇಲ್ ತೋರಿದ ಪ್ರತಿರೋಧವನ್ನು ಕೊನೆಗೂ ಆತಿಥೇಯರು ಬೇಧಿಸಿದರು. ಅಕ್ಷರ್‌ ಔಟಾಗದೆ ಗಳಿಸಿದ ಅರ್ಧಶತಕ (81; 63 ಎಸೆತ, 1 ಸಿಕ್ಸರ್‌, 8 ಬೌಂಡರಿ) ಭಾರತ ‘ಎ’ ತಂಡದ ಕೈ ಹಿಡಿಯಲಿಲ್ಲ. ಇಲ್ಲಿ ಶುಕ್ರವಾರ ರಾತ್ರಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ‘ಎ’ ಐದು ರನ್‌ಗಳ ರೋಚಕ ಜಯ ಸಾಧಿಸಿತು.

ಡೀವಾನ್ ಥಾಮಸ್ (70; 95 ಎಸೆತ, 4 ಸಿ, 4 ಬೌಂ), ರಾಸ್ಟನ್ ಚೇಸ್ (84; 100ಎ, 2 ಸಿ, 4 ಬೌಂ) ಮತ್ತು ಜೊನಾಥನ್ ಕಾರ್ಟರ್ (50; 43 ಎ, 8 ಬೌಂ) ಅವರ ಅಮೋಘ ಆಟದ ನೆರವಿನಿಂದ ಸುನಿಲ್ ಆ್ಯಂಬ್ರಿಸ್ ನಾಯಕತ್ವದ ವೆಸ್ಟ್ ಇಂಡೀಸ್ ‘ಎ’ 298 ರನ್‌ ಗಳಿಸಿತ್ತು.

‌ಗುರಿ ಬೆನ್ನತ್ತಿದ ಮನೀಷ್ ಪಾಂಡೆ ಬಗಳದ ಅಗ್ರ ಕ್ರಮಾಂಕದ ಮೂವರು ಬೇಗನೇ ಔಟಾದರು. ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ನಾಯಕನಿಗೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಆಗಲಿಲ್ಲ. ಅವರು 24 ರನ್‌ ಗಳಿಸಿ ಮರಳಿದರು. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಕೃಣಾಲ್ ಪಾಂಡ್ಯ (45; 56 ಎ, 5 ಬೌಂ) ಸೊಗಸಾಗಿ ಬ್ಯಾಟ್ ಬೀಸಿದರು. ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ (45; 52 ಎ, 3 ಬೌಂ) ಕೂಡ ಪಾಂಡ್ಯಗೆ ಉತ್ತಮ ಸಹಕಾರ ನೀಡಿದರು. 

ಆದರೂ ತಂಡ 160 ರನ್‌ ಗಳಿಸುವಷ್ಟರಲ್ಲಿ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಅಕ್ಷರ್ ಪಟೇಲ್ ಏಳನೇ ವಿಕೆಟ್‌ಗೆ ವಾಷಿಂಗ್ಟನ್ ಸುಂದರ್ ಜೊತೆ 60 ರನ್ ಸೇರಿಸಿದರು. ವಾಷಿಂಗ್ಟನ್ ಔಟಾದ ನಂತರವೂ ಬಾಲಂಗೋಚಿಗಳ ಜೊತೆ ತಂಡಕ್ಕೆ ಆಸರೆಯಾದರು. ಮೂರು ಎಸೆತಗಳ ಅಂತರದಲ್ಲಿ ಖಲೀಲ್ ಅಹಮ್ಮದ್ ಮತ್ತು ನವದೀಪ್ ಸೈನಿ ಔಟಾದದ್ದು ತಂಡದಲ್ಲಿ ನಿರಾಸೆ ಮೂಡಿಸಿತು. ಕೊನೆಯ ಓವರ್‌ನಲ್ಲಿ ಗೆಲುವಿಗೆ ಒಂಬತ್ತು ರನ್ ಬೇಕಾಗಿದ್ದವು. ಆದರೆ ಮೂರು ರನ್ ಗಳಿಸಲಷ್ಟೇ ಸಾಧ್ಯವಾಯಿತು.

ನಾಯಕ ಹಾಕಿಕೊಟ್ಟ ತಳಪಾಯ: ಟಾಸ್ ಸೋತು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ‘ಎ’ ಮೂರು ರನ್ ಗಳಿಸಿದ್ದಾಗ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ನಾಯಕ ಸುನಿಲ್ ಆ್ಯಂಬ್ರಿಸ್ ಕ್ರೀಸ್‌ನಲ್ಲಿ ಭದ್ರವಾಗಿ ತಳವೂರಿದರು. ಥಾಮಸ್ ಜೊತೆ ಎರಡನೇ ವಿಕೆಟ್‌ಗೆ 73 ರನ್ ಸೇರಿಸಿದರು. ಅವರು ಔಟಾದ ನಂತರ ಥಾಮಸ್ ಮತ್ತು ಚೇಸ್ 81 ರನ್‌ಗಳ ಜೊತೆಯಾಟ ಆಡಿದರು. ಚೇಸ್ ಮತ್ತು ಕಾರ್ಟರ್ ಜೊತೆಯಾಟದಲ್ಲಿ ನಾಲ್ಕನೇ ವಿಕೆಟ್‌ಗೆ 97 ರನ್‌ಗಳು ಹರಿದು ಬಂದವು.

ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್ ‘ಎ‘: 50 ಓವರ್‌ಗಳಲ್ಲಿ 9ಕ್ಕೆ 298 (ಸುನಿಲ್ ಆ್ಯಂಬ್ರಿಸ್ 46, ಡೀವಾನ್ ಥಾಮಸ್ 70, ರಾಸ್ಟನ್ ಚೇಸ್ 84, ಜೊನಾಥನ್ ಕಾರ್ಟರ್ 50; ಖಲೀಲ್ ಅಹಮ್ಮದ್ 67ಕ್ಕೆ4, ಆವೇಶ್ ಖಾನ್ 62ಕ್ಕೆ3, ಕೃಣಾಲ್ ಪಾಂಡ್ಯ 33ಕ್ಕೆ1, ವಾಷಿಂಗ್ಟನ್ ಸುಂದರ್ 54ಕ್ಕೆ1); ಭಾರತ ‘ಎ’: 50 ಓವರ್‌ಗಳಲ್ಲಿ 9ಕ್ಕೆ 293 (ಋತುರಾಜ್ ಗಾಯಕವಾಡ್ 20, ಹನುಮ ವಿಹಾರಿ 20, ಕೃಣಾಲ್ ಪಾಂಡ್ಯ 45, ಮನೀಷ್‌ ಪಾಂಡೆ 24, ವಾಷಿಂಗ್ಟನ್ ಸುಂದರ್ 46, ಅಕ್ಷರ್ ಪಟೇಲ್ ಔಟಾಗದೆ 81; ಕೀಮೊ ಪಾಲ್ 61ಕ್ಕೆ2, ಖಾರಿ ಪೀರೆ 41ಕ್ಕೆ1, ರಾಸ್ಟನ್ ಚೇಸ್ 42ಕ್ಕೆ1, ರೇಮನ್ ರೀಫರ್ 64ಕ್ಕೆ1, ರೋವ್ಮನ್ ಪೊವೆಲ್ 47ಕ್ಕೆ2). ಫಲಿತಾಂಶ: ವೆಸ್ಟ್ ಇಂಡೀಸ್‌ಗೆ 4 ರನ್‌ಗಳ ಜಯ; ಪಂದ್ಯಶ್ರೇಷ್ಠ: ರಾಸ್ಟನ್ ಚೇಸ್‌.

ಮುಂದಿನ ಪಂದ್ಯ: ಜುಲೈ 21ರಂದು, ಕೂಲಿಜ್‌ನಲ್ಲಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು