ಶನಿವಾರ, ಜನವರಿ 16, 2021
28 °C

ಕುಸ್ತಿ ಕುಟುಂಬದಲ್ಲಿ ಪುತ್ರೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾರತದ ಖ್ಯಾತ ಕುಸ್ತಿಪಟು ಬಬಿತಾ ಪೋಗಟ್‌ ಮನೆಯಲ್ಲಿ ಮೊದಲ ಮಗುವಿನ ಸಂಭ್ರಮ ಮನೆಮಾಡಿದೆ. ಬಬಿತಾ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅವರು ಹಾಗೂ ಪತಿ, ಕುಸ್ತಿಪಟು ವಿವೇಕ್ ಸುಹಾಗ್ ಈ ವಿಷಯವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಮಗುವಿನೊಟ್ಟಿಗೆ ಇರುವ ಚಿತ್ರವನ್ನು ಪೋಸ್ಟ್ ಮಾಡಿರುವ ಬಬಿತಾ ‘ನಮ್ಮ ಪುಟ್ಟ ಮಗು. ಕನಸುಗಳಲ್ಲಿ ನಂಬಿಕೆಯಿಡಿ; ಅವು ನನಸಾಗುತ್ತವೆ. ನಮ್ಮ ಕನಸು ನೀಲಿ ಬಣ್ಣದೊಂದಿಗೆ ನನಸಾಗಿ ಬಂದಿದೆ!’ ಎಂದು ಮಗುವಿಗೆ ತೊಡಿಸಿರುವ ಬಟ್ಟೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.

ಬಬಿತಾ ಹಾಗೂ ವಿವೇಕ್ 2019ರ ನವೆಂಬರ್‌ನಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ‘ನಮ್ಮ ಮನೆಗೆ ಪುಟ್ಟ ದೇವನ ಆಗಮನವಾಗಿದೆ. ಸಂತಸ ಮತ್ತು ಹೆಮ್ಮೆ ಎನಿಸುತ್ತದೆ‘ ಎಂದು ವಿವೇಕ್ ಸುಹಾಗ್‌ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಈ ದಂಪತಿ ಹೋದ ವರ್ಷದ ನವೆಂಬರ್‌ನಲ್ಲಿ ಪ್ರಕಟಿಸಿದ್ದರು.

ಬಬಿತಾ ಅವರ ಸಹೋದರಿ ರಿತು ಪೋಗಟ್‌, ಕ್ರಿಕೆಟಿಗ ಸುರೇಶ್ ರೈನಾ, ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್‌ ಸೇರಿದಂತೆ ಹಲವರು ದಂಪತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಯಶ ಕೋರಿದ್ದಾರೆ.

31 ವರ್ಷದ ಬಬಿತಾ, 2012ರಲ್ಲಿ ಕೆನಡಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಗ್ಲಾಸ್ಗೊದಲ್ಲಿ 2014ರಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ, 2018ರಲ್ಲಿ ಗೋಲ್ಡ್‌ಕೋಸ್ಟ್‌ನಲ್ಲಿ ಆಯೋಜನೆಯಾಗಿದ್ದ ಕಾಮನ್‌ವೆಲ್ತ್‌ ಕೂಟದಲ್ಲಿ ಬೆಳ್ಳಿ ಪದಕ ಒಲಿಸಿಕೊಂಡಿದ್ದರು.

ಸುಹಾಗ್‌ ಅವರು ‘ಭಾರತ ಕೇಸರಿ’ ಪುರಸ್ಕೃತ ಕುಸ್ತಿಪಟು.

ಈ ದಂಪತಿ 2019ರ ಆಗಸ್ಟ್‌ನಲ್ಲಿ ‘ನಚ್‌ ಬಲಿಯೇ‘ ಎಂಬ ಪ್ರಸಿದ್ಧ ಡ್ಯಾನ್ಸ್‌ ರಿಯಾಲಿಟಿ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದರು. ಬಬಿತಾ ಅವರ ಇನ್ನಿಬ್ಬರು ಸಹೋದರಿಯರಾದ ಗೀತಾ ಹಾಗೂ ಸಂಗೀತಾ ಪೋಗಟ್‌ ಕೂಡ ಕುಸ್ತಿಪಟುಗಳಾಗಿ ಮಿಂಚಿದ್ದಾರೆ. ಪೋಗಟ್‌ ಕುಟುಂಬದ ಕುರಿತು ನಿರ್ಮಿಸಿದ್ದ ಹಿಂದಿ ಸಿನಿಮಾ ‘ದಂಗಲ್‌‘ ಸೂಪರ್ ಹಿಟ್‌ ಆಗಿತ್ತು.

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಸೋಮವಾರ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು