ಶನಿವಾರ, ಮಾರ್ಚ್ 6, 2021
31 °C
ಜುಲೈನಿಂದ ಹೈದರಾಬಾದ್‌ನಲ್ಲಿ ತರಬೇತಿ ಶಿಬಿರ ಆರಂಭಿಸಲು ಬಿಎಐ ಚಿಂತನೆ

ಅಭ್ಯಾಸದ ಅಂಗಣಕ್ಕೆ ಮರಳುವರೆ ಸಿಂಧು?

ಪಿಟಿಐ Updated:

ಅಕ್ಷರ ಗಾತ್ರ : | |

ಪಿ.ವಿ.ಸಿಂಧು–ಎಎಫ್‌ಪಿ ಚಿತ್ರ

ನವದೆಹಲಿ: ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಯು (ಬಿಎಐ) ಜುಲೈ 1ರಿಂದ ಹೈದರಾಬಾದ್‌ನಲ್ಲಿ ತರಬೇತಿ ಶಿಬಿರವನ್ನು ಆಯೋಜಿಸಲು ಚಿಂತನೆ ನಡೆಸಿದೆ. ಒಂದೊಮ್ಮೆ ತೆಲಂಗಾಣ ಸರಕಾರ ತರಬೇತಿಗೆ ಹಸಿರು ನಿಶಾನೆ ತೋರಿದರೆ ಪಿ.ವಿ.ಸಿಂಧು ಸೇರಿದಂತೆ ಪ್ರಮುಖ ಅಥ್ಲೀಟುಗಳು ಅಭ್ಯಾಸದ ಅಂಗಣಕ್ಕೆ ಇಳಿಯಲಿದ್ದಾರೆ.

 ಭಾರತ ಕ್ರೀಡಾ ಪ್ರಾಧಿಕಾರ ರೂಪಿಸಿರುವ ನಿಯಮದ ಪ್ರಕಾರ ಹೋದ ತಿಂಗಳು ಬೆಂಗಳೂರಿನ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ ಒಂದಷ್ಟು ಆಟಗಾರರು ತರಬೇತಿ ನಡೆಸಿದ್ದರು. ಆದರೆ ಹೈದರಾಬಾದ್‌ಗೆ ಈ ಅದೃಷ್ಟ ಇರಲಿಲ್ಲ.

ಹೈದರಾಬಾದ್‌ನಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತೆಲಂಗಾಣ ಸರಕಾರ ಜೂನ್‌ 30ರವರೆಗೆ ಲಾಕ್‌ಡೌನ್‌ ವಿಸ್ತರಿಸಿದೆ. ಅಲ್ಲಿಯವರೆಗೆ ನಗರದಲ್ಲಿ ಕ್ರೀಡಾ ಚಟುವಟಿಕೆಗಳು ನಡೆಯುತ್ತಿಲ್ಲ.

‘ಕೊರೊನಾ ಪಿಡುಗು ನಮ್ಮ ಆಟಗಾರರ ತರಬೇತಿಗೆ ತಡೆಯೊಡ್ಡಿದೆ. ಜುಲೈ1ರಿಂದ ಹೈದರಾಬಾದ್‌ನಲ್ಲಿ ತರಬೇತಿ ಶಿಬಿರ ಆಯೋಜಿಸಲು ನಿರ್ಧರಿಸಿದ್ದೇವೆ. ಇದಕ್ಕೆ ಅಲ್ಲಿಯ ರಾಜ್ಯ ಸರ್ಕಾರದ ಅನುಮತಿ ಬೇಕಿದೆ’ ಎಂದು ಬಿಎಐ ಕಾರ್ಯದರ್ಶಿ ಅಜಯ್ ಸಿಂಘಾನಿಯಾ ತಿಳಿಸಿದ್ದಾರೆ.

ಎಪ್ರಿಲ್‌ 27ರಿಂದ ಮೇ 3ರವರೆಗೆ ನಿಗದಿಯಾಗಿದ್ದ ರಾಷ್ಟ್ರೀಯ ಚಾಂಪಿಯನ್‌ಷಿಪ್ಅನ್ನು ಕೋವಿಡ್‌ ಕಾರಣ ಬಿಎಐ ಮುಂದೂಡಿತ್ತು. ಸದ್ಯ ಸೆಪ್ಟೆಂಬರ್‌ವರೆಗೆ ಯಾವುದೇ ಸ್ಥಳೀಯ ಟೂರ್ನಿಗಳನ್ನು ನಡೆಸದಿರಲು ನಿರ್ಧರಿಸಲಾಗಿದೆ.

‘ಕೋವಿಡ್‌ ಸೃಷ್ಟಿಸಿರುವ ಬಿಕ್ಕಟ್ಟಿನ ಕುರಿತು ಸೆಪ್ಟೆಂಬರ್‌ನಲ್ಲಿ ಪರಾಮರ್ಶೆ ನಡೆಸಿ ಮುಂದುವರಿಯುತ್ತೇವೆ’ ಎಂದು ಸಿಂಘಾನಿಯಾ ತಿಳಿಸಿದ್ದಾರೆ.

ಸ್ಥಳೀಯ ಮಟ್ಟದಲ್ಲಿ ವಿವಿಧ ಹಂತಗಳಲ್ಲಿ ಟೂರ್ನಿಗಳ ಸ್ವರೂಪವನ್ನು ಬದಲಿಸಲು ಬಿಎಐ ಫೆಬ್ರುವರಿಯಲ್ಲಿ ನಿರ್ಧರಿಸಿತ್ತು. ಸೀನಿಯರ್‌ ರ‍್ಯಾಂಕಿಂಗ್‌ ಟೂರ್ನಿಗಳ ಸ್ಥಾನದಲ್ಲಿ ಅಂದಾಜು ₹2 ಕೋಟಿ ಬಹುಮಾನ ಮೊತ್ತದ ಟೂರ್ನಿ ಆಯೋಜನೆಗೆ ಚಿಂತನೆ ನಡೆಸಿತ್ತು. ಆದರೆ ಕೋವಿಡ್‌ ಪ್ರಕರಣಗಳಲ್ಲಿ ಏರಿಕೆಯಾದ ಕಾರಣ ಈ ಚಿಂತನೆ ಬಲ ಕಳೆದುಕೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು