ಭಾನುವಾರ, ಸೆಪ್ಟೆಂಬರ್ 19, 2021
24 °C

ಸೆಟ್ಲಮೆಂಟ್ ಹಾಕಿ ಕ್ರೀಡೆಯ ರಾಯಭಾರಿ ಬೇನು

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗದುಗಿನ ಹಾಕಿ ಕ್ರೀಡಾಭಿಮಾನಿಗಳ ಬಳಗದಲ್ಲಿ ’ಚಿಗರಿ‘ ಎಂದರೆ ಸಾಕು. ಬೇನು ಬಾಳು ಭಾಟ್ ಅವರ ಆಟದ ಬಗ್ಗೆ ಹತ್ತಾರು ರೋಚಕ ಕಥೆಗಳು ಬಿಚ್ಚಿಕೊಳ್ಳುತ್ತವೆ.  

ದಶಕಗಳ ಹಿಂದೆ ಮೈದಾನದಲ್ಲಿ ಅವರ ಚುರುಕಾದ  ಆಟವನ್ನು ಕಣ್ಣಾರೆ ಕಂಡವರು ಈಗಲೂ  ರೋಮಾಂಚನದೊಂದಿಗೆ ವಿವರಿಸುತ್ತಾರೆ. ’ಅಂತಹ ಆಟಗಾರ ಮತ್ತೆ ಬರಂಗಿಲ್ಲ ಬಿಡ್ರಿ‘ ಎನ್ನುತ್ತಾರೆ. ಬುಧವಾರ ಕೊನೆಯುಸಿರೆಳೆದ  87ರ ಬೇನು, ಹತ್ತಾರು ನೆನಪುಗಳನ್ನು ಉಳಿಸಿಹೋಗಿದ್ದಾರೆ. 

ಬ್ರಿಟಿಷರು ತಮ್ಮ ಆಳ್ವಿಕೆಯಲ್ಲಿ ಗುನ್ಹೆಗಾರರನ್ನು (ಅಪರಾಧಿಗಳು) ಕೂಡಿ ಹಾಕಲು ನಿರ್ಮಿಸಿದ್ದ ಪ್ರದೇಶಗಳು ಸೆಟ್ಲಮೆಂಟ್. ಈ ಪ್ರದೇಶದ ಸುತ್ತಲೂ ಮುಳ್ಳಿನ ಬೇಲಿ ಮತ್ತು ಕಾವಲುಗಾರರ ಭದ್ರತೆ ಇರುತ್ತಿತ್ತು. ಆಗ ನಿರ್ಮಾಣವಾದ ಹುಬ್ಬಳ್ಳಿ, ಬಳ್ಳಾರಿ, ಗದಗ, ಬಾಗಲಕೋಟೆ, ಬೆಳಗಾವಿ ಮತ್ತು ವಿಜಯಪುರಗಳಲ್ಲಿ ಈ ಸೆಟ್ಲಮೆಂಟ್ ಪ್ರದೇಶಗಳು ಈಗಲೂ ಇವೆ. ಕಂಜರಭಾಟ್, ಗಂಟಿಚೋರ್, ಚಪ್ಪರಬಂದ್, ಕೊರವ ಜನಾಂಗದವರಿಗೆ ಅಪರಾಧಿ ಪಟ್ಟ ಕಟ್ಟಿದ್ದ ಬ್ರಿಟಿಷರು ಅಲ್ಲಿಗೆ ತಂದು ಹಾಕುತ್ತಿದ್ದರು. 

ಅಲ್ಲಿಯ ಇಂಗ್ಲಿಷ್ ಅಧಿಕಾರಿಗಳು ಆಡುತ್ತಿದ್ದ ಹಾಕಿ ಆಟವನ್ನು ನೋಡುತ್ತ ಕೆಲವು ಯುವಕರು ಕಲಿತರು. ಸ್ವಾತಂತ್ರ್ಯನಂತರವೂ ಈ ಪ್ರದೇಶಗಳು ಉಳಿದವು. ಆದರೆ, ಇಲ್ಲಿಯ ಜನಾಂಗದ ಅಪರಾಧ ಕೃತ್ಯಗಳಿಗೆ ಕ್ರಮೇಣವಾಗಿ ಕಡಿವಾಣ ಹಾಕುವಲ್ಲಿ ಹಾಕಿ ಸ್ಟಿಕ್ ಯಶಸ್ವಿಯಾಗಿತ್ತು. ಅದರ ಫಲವಾಗಿಯೇ ಅಪ್ರತಿಮ ಆಟಗಾರರು ಹುಟ್ಟಿದರು. ಅವರಲ್ಲಿ ಬೇನು ಅಗ್ರಗಣ್ಯರು.

’ತಮ್ಮ ಬಳಿ ಏಳು ಸಾವಿರ ರೂಪಾಯಿಗಳಿದ್ದರೆ 1964ರ ಟೋಕಿಯೊ ಒಲಿಂಪಿಕ್ಸ್‌ಗೆ ಹೋಗಿರುತ್ತಿದ್ದೆ ಎಂದು ಬೇನು ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದರು. ಅವರ ದೈಹಿಕ ಸಾಮರ್ಥ್ಯವು ಅಪರೂಪದ್ದು. ಚಿಗರೆಯಂತೆ ಓಡುತ್ತಿದ್ದರು. 50ನೇ ವಯಸ್ಸಿನಲ್ಲಿಯೂ ದೊಡ್ಡ ಟೂರ್ನಿಗಳಲ್ಲಿ ಆಡಿದ್ದರು. ತಮ್ಮ ದೊಡ್ಡ ಕುಟುಂಬದ  ಹೊಟ್ಟೆ ತುಂಬಲು ಹೋರಾಡುತ್ತ,  ಹಾಕಿ ಪ್ರೀತಿಯನ್ನು ಕೊನೆಯವರೆಗೂ ಕಾಪಿಟ್ಟುಕೊಂಡಿದ್ದರು‘ ಎಂದು ಗದುಗಿನ ಕ್ರೀಡಾ ಮಾರ್ಗದರ್ಶನ  ಮುನ್ನಾ ಗುಳೇದಗುಡ್ಡ ನೆನಪಿಸಿಕೊಳ್ಳುತ್ತಾರೆ.

’ಅವರು 90ರ ದಶಕದಲ್ಲಿ ಹೋಟೆಲ್‌ವೊಂದರಲ್ಲಿ ಕಾವಲುಗಾರನಾಗಿ ದುಡಿಯುತ್ತಿದ್ದರು. ಆಗ ‘ಪ್ರಜಾವಾಣಿಯಲ್ಲಿ ಬಂದಿದ್ದ ವರದಿ ನೋಡಿ, ಸರ್ಕಾರವು ಬೇನುಗೆ ಯುವಜನ ಮತ್ತು ಕ್ರೀಡಾ ಇಲಾಖೆಯಲ್ಲಿ ಕೋಚ್ ಕೆಲಸ ನೀಡಿ ಗೌರವಧನ ನೀಡಿತ್ತು. ಆದರೆ ಅವರ ಪ್ರತಿಭೆಗೆ ತಕ್ಕ ಮನ್ನಣೆ ಇದುವರೆಗೂ ಸಿಗಲಿಲ್ಲ‘ ಎಂದು ಮುನ್ನಾ ಗುಳೇದಗುಡ್ಡ ಹೇಳುತ್ತಾರೆ.

ಗದುಗಿನ ಹನುಮಾನ್‌ ಬ್ಲೆಸಿಂಗ್ಸ್‌ ಹಾಕಿ ಕ್ಲಬ್‌ ಮೂಲಕ ಅವರ ಹಾಕಿ ಪಯಣ ಆರಂಭವಾಗಿತ್ತು. ಕೂಲಿ ಮಾಡುತ್ತಲೇ ಹಾಕಿಯಲ್ಲಿಯೂ ಬೆಳಗಿದ್ದವರು. 1963–64ರಲ್ಲಿ ಸದರ್ನ್ ರೈಲ್ವೆ ತಂಡದಲ್ಲಿ ಆಡಿದ್ದ ಅವರು ಶ್ರೀಲಂಕಾ ಪ್ರವಾಸ ಮಾಡಿದ್ದರು. 1966ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಮೈಸೂರು ತಂಡದ ಜಯದಲ್ಲಿ ಬೇನು ಆಟವೇ ಪ್ರಮುಖವಾಗಿತ್ತು. ಅವರು ಒಲಿಂಪಿಯನ್ ಬಂಡು ಪಾಟೀಲ, ಪೃಥ್ವಿಪಾಲ್ ಸಿಂಗ್  ಅವರ ಸಮಕಾಲೀನರು. ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಜೊತೆ ಪ್ರದರ್ಶನ ಪಂದ್ಯಗಳಲ್ಲಿ ಆಡಿದ್ದವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು