ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್: ಭಾರತ ಮಹಿಳಾ ತಂಡಕ್ಕೆ ಕೋಚ್‌ ಆಗಿ ಭಾಸ್ಕರ್ ಭಟ್‌ ಆಯ್ಕೆ ಸಾಧ್ಯತೆ

Last Updated 7 ನವೆಂಬರ್ 2021, 11:24 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಷ್ಟ್ರೀಯ ಯುವ ತಂಡದ ಕೋಚ್ ಆಗಿ ದೀರ್ಘ ಕಾಲ ಕಾರ್ಯನಿರ್ವಹಿಸಿರುವ ಭಾಸ್ಕರ್ ಭಟ್‌ ಅವರು ಭಾರತ ಸೀನಿಯರ್ ಮಹಿಳಾ ಬಾಕ್ಸಿಂಗ್ ತಂಡಕ್ಕೆ ಮುಖ್ಯ ತರಬೇತುದಾರರಾಗುವುದು ಬಹುತೇಕ ಖಚಿತವಾಗಿದೆ.

ವಿಶ್ವ ಚಾಂಪಿಯನ್‌ಷಿಪ್‌ಗೂ ಮೊದಲು ಈ ಆಯ್ಕೆ ನಡೆಯಲಿದೆ. ಮುಖ್ಯ ಕೋಚ್ ಆಗಿದ್ದ ಮೊಹಮ್ಮದ್ ಅಲಿ ಖಮರ್‌ ಹಾಗೂ ಹೈ ಫರ್ಫಾರ್ಮೆನ್ಸ್ ನಿರ್ದೇಶಕ ರಫೇಲ್‌ ಬರ್ಗ್‌ಮಾಸ್ಕೊ ಅವರ ಗುತ್ತಿಗೆಯನ್ನು ನವೀಕರಿಸಲು ಭಾರತ ಬಾಕ್ಸಿಂಗ್ ಫೆಡರೇಷನ್‌ (ಬಿಎಫ್‌ಐ) ನಿರಾಕರಿಸಿದ ಬಳಿಕ ಈ ವಿದ್ಯಮಾನ ನಡೆದಿದೆ.

ಉತ್ತರಾಖಂಡದ 56 ವರ್ಷದ ಭಟ್‌ ಅವರು 2017ರಿಂದ ಭಾರತ ಯೂತ್ ತಂಡದ ಕೋಚ್ ಆಗಿದ್ದಾರೆ. 2005–2012ರ ಅವಧಿಯಲ್ಲಿ ಮಹಿಳಾ ತಂಡದ ಸಹಾಯಕ ತರಬೇತುದಾರರಾಗಿದ್ದರು.

ಭಾಸ್ಕರ್ ಅವರ ಸಹೋದರ ಡಿ.ಪಿ. ಭಟ್‌ ಕೂಡ ಬಾಕ್ಸರ್ ಹಾಗೂ ರೆಫರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ವಿಶ್ವಚಾಂಪಿಯನ್‌ಷಿಪ್‌ಗೆ ಲವ್ಲಿನಾ ನೇರ ಆಯ್ಕೆ: ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಬಾಕ್ಸರ್‌ ಲವ್ಲಿನಾ ಬೊರ್ಗೊಹೈನ್ ಅವರು ವಿಶ್ವಚಾಂಪಿಯನ್‌ಷಿಪ್‌ಗೆ ನೇರ ಅರ್ಹತೆ ಗಳಿಸಿದ್ದಾರೆ.

70 ಕೆಜಿ ವಿಭಾಗದಲ್ಲಿ ಆಯ್ಕೆಯಾಗಿ ಟ್ರಯಲ್ಸ್ ನಡೆಸಬೇಕೆಂದು ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಚಿನ್ನದ ಪದಕ ವಿಜೇತೆ ಅರುಂಧತಿ ಚೌಧರಿ ಮಾಡಿದ ಮನವಿಯನ್ನು ಬಿಎಫ್‌ಐ ಪರಿಗಣಿಸಿಲ್ಲ.

‘ಮಹಿಳಾ ವಿಶ್ವಚಾಂಪಿಯನ್‌ಷಿಪ್ ಆಯ್ಕೆಗೆ ಯಾವುದೇ ಟ್ರಯಲ್ಸ್‌ಗಳನ್ನು ನಡೆಸುವುದಿಲ್ಲ. ಸೆಪ್ಟೆಂಬರ್‌ನಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯ ನಿರ್ಧಾರದಂತೆ ಲವ್ಲಿನಾ ಸ್ಪರ್ಧಿಸುವ 70 ಕೆಜಿ ವಿಭಾಗವನ್ನು ಹೊರತುಪಡಿಸಿ ಆಯಾ ವಿಭಾಗಗಳಲ್ಲಿ ರಾಷ್ಟ್ರೀಯ ಚಾಂಪಿಯನ್ ಆದವರು ತಂಡದಲ್ಲಿರಲಿದ್ದಾರೆ‘ ಎಂದು ಬಿಎಫ್‌ಐ ಪ್ರಧಾನ ಕಾರ್ಯದರ್ಶಿ ಹೇಮಂತ್ ಕಲಿಟ ಹೇಳಿದ್ದಾರೆ.

‘ಒಲಿಂಪಿಕ್ಸ್‌ನಲ್ಲಿ ತೋರಿದ ಸಾಧನೆಯ ಆಧಾರದ ಮೇಲೆ ಲವ್ಲಿನಾ ಅವರ ಆಯ್ಕೆ ನಡೆದಿದೆ‘ ಎಂದು ಅವರು ಹೇಳಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್‌ ಡಿಸೆಂಬರ್‌ನಲ್ಲಿ ಇಸ್ತಾನ್‌ಬುಲ್‌ನಲ್ಲಿ ನಿಗದಿಯಾಗಿದ್ದು, ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT