ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಯ, ಪ್ರಣಯ್ ಮೇಲೆ ಭರವಸೆ

ಬಿಡಬ್ಲ್ಯುಎಫ್‌ ವಿಶ್ವ ಚಾಂಪಿಯನ್‌ಷಿಪ್‌: ಸಿಂಧು ಅಲಭ್ಯ
Last Updated 21 ಆಗಸ್ಟ್ 2022, 11:46 IST
ಅಕ್ಷರ ಗಾತ್ರ

ಟೋಕಿಯೊ: ಬಿಡಬ್ಲ್ಯುಎಫ್‌ ವಿಶ್ವ ಚಾಂಪಿಯನ್‌ಷಿಪ್‌ ಸೋಮವಾರ ಇಲ್ಲಿ ಆರಂಭವಾಗಲಿದ್ದು, ಯುವ ಆಟಗಾರ ಲಕ್ಷ್ಯ ಸೇನ್‌ ಮತ್ತು ಎಚ್‌.ಎಸ್‌.ಪ್ರಣಯ್‌ ಅವರು ಭಾರತದ ಪದಕದ ಭರವಸೆ ಎನಿಸಿದ್ದಾರೆ. ದಶಕದಲ್ಲಿ ಮೊದಲ ಬಾರಿಗೆ ಪಿ.ವಿ.ಸಿಂಧು ಅವರು ಚಾಂಪಿಯನ್‌ಷಿಪ್‌ಗೆ ಲಭ್ಯರಿಲ್ಲ.

2019ರಲ್ಲಿ ಚಿನ್ನ ಸೇರಿದಂತೆ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು ಐದು ಪದಕ ಜಯಿಸಿರುವ ಸಿಂಧು, ಪಾದದ ನೋವಿನ ಕಾರಣ ಈ ಬಾರಿ ಕಣಕ್ಕಿಳಿಯುತ್ತಿಲ್ಲ. ಬರ್ಮಿಂಗ್‌ಹ್ಯಾಮ್‌ನಲ್ಲಿ ಇತ್ತೀಚೆಗೆ ಕೊನೆಗೊಂಡ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅವರು ಗಾಯಗೊಂಡಿದ್ದರು.

ಲಕ್ಷ್ಯ, ಪ್ರಣಯ್‌ ಮತ್ತು ಕಿದಂಬಿ ಶ್ರೀಕಾಂತ್‌ ಅವರ ಮೇಲೆ ಈ ಬಾರಿ ಹೆಚ್ಚು ನಿರೀಕ್ಷೆ ಇದೆ. 2011ರ ಆವೃತ್ತಿಯಿಂದ ಭಾರತ ಬರಿಗೈನಲ್ಲಿ ಮರಳಿಲ್ಲ. 2021ರಲ್ಲಿ ಶ್ರೀಕಾಂತ್ ಹಾಗೂ ಲಕ್ಷ್ಯ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳಿಗೆ ಮುತ್ತಿಟ್ಟಿದ್ದರು. ಆದರೆ ಹೋದ ವರ್ಷಕ್ಕಿಂತ ಈ ಬಾರಿ ಕಣದಲ್ಲಿ ಬಲಿಷ್ಠ ಆಟಗಾರರಿರುವುದು ಭಾರತದ ಆಟಗಾರರಿಗೆ ಸವಾಲಾಗಿದೆ.

ಕಳೆದ ಬಾರಿ ಆಡದಿದ್ದ ಜಪಾನ್‌ನ ಕೆಂಟೊ ಮೊಮೊಟಾ, ಇಂಡೊನೇಷ್ಯಾ ಜೋಡಿ ಜೋನಾಥನ್ ಕ್ರಿಸ್ಟಿ ಮತ್ತು ಆ್ಯಂಟನಿ ಗಿಂಟಿಂಗ್ ಈ ಬಾರಿ ಅಂಗಣಕ್ಕಿಳಿಯುವರು. ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನದ ಪದಕ ಜಯಿಸಿರುವ ಲಕ್ಷ್ಯ, ಇಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ಅವರು ಡೆನ್ಮಾರ್ಕ್‌ನ ಹಾನ್ಸ್ ಕ್ರಿಸ್ಟಿಯನ್‌ ಸೋಲ್‌ಬರ್ಗ್‌ ವಿಟಿಂಗಸ್‌ ಎದುರು ಆಡುವರು.

ಪ್ರಣಯ್ ಅವರಿಗೆ ಮೊದಲ ಹಣಾಹಣಿಯಲ್ಲಿ ಮೊಮೊಟಾ ಸವಾಲು ಎದುರಾಗಿದೆ. 2019ರ ವಿಶ್ವ ಚಾಂಪಿಯನ್‌ಷಿಪ್ ಕಂಚು ವಿಜೇತ ಬಿ. ಸಾಯಿ ಪ್ರಣೀತ್ ಕೂಡ ಕಣದಲ್ಲಿದ್ದು, ಮೊದಲ ಪಂದ್ಯದಲ್ಲಿ ತೈವಾನ್‌ನ ಚೊ ಟಿನ್ ಯೆನ್ ಅವರನ್ನು ಎದುರಿಸುವರು. ಡಬಲ್ಸ್ ಜೋಡಿ ಚಿರಾಗ್‌ ಶೆಟ್ಟಿ ಮತ್ತು ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಅವರಿಗೆ ಮೊದಲ ಸುತ್ತಿನಲ್ಲಿ ಬೈ ಲಭಿಸಿದೆ.

ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ ಕೂಡ ಭರವಸೆ ಮೂಡಿಸಿದ್ದಾರೆ. ವಿಶ್ವಚಾಂಪಿಯನ್‌ಷಿಪ್‌ನಲ್ಲಿ ತಲಾ ಒಂದು ಬೆಳ್ಳಿ ಮತ್ತು ಕಂಚು ಗೆದ್ದಿರುವ ಅವರು ಮೊದಲ ಸೆಣಸಾಟದಲ್ಲಿ ಹಾಂಗ್‌ಕಾಂಗ್‌ನ ಚೆಂಗ್ ಎನ್‌ಗಾನ್ ಯಿ ಎದುರು ಆಡುವರು.

ಮಹಿಳಾ ಡಬಲ್ಸ್‌ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ–ಎನ್‌. ಸಿಕ್ಕಿರೆಡ್ಡಿ, ಗಾಯತ್ರಿ ಗೋಪಿಚಂದ್‌–ತ್ರಿಶಾ ಜೋಲಿ ಕೂಡ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

ವಿಶ್ವಚಾಂಪಿಯನ್‌ಷಿಪ್‌ನಲ್ಲಿಭಾರತದ ಪದಕವಿಜೇತರು

ಪುರುಷರ ಸಿಂಗಲ್ಸ್

ಪ್ರಕಾಶ್ ಪಡುಕೋಣೆ

1983;ಕಂಚು

ಬಿ.ಸಾಯಿ ಪ್ರಣೀತ್‌

2019;ಕಂಚು

ಕಿದಂಬಿ ಶ್ರೀಕಾಂತ್‌

2021;ಬೆಳ್ಳಿ

ಲಕ್ಷ್ಯ ಸೇನ್‌

2021;ಕಂಚು

ಮಹಿಳಾ ಸಿಂಗಲ್ಸ್

ಪಿ.ವಿ.ಸಿಂಧು

2013;ಕಂಚು

2014;ಕಂಚು

2017;ಬೆಳ್ಳಿ

2018;ಬೆಳ್ಳಿ

2019;ಚಿನ್ನ

ಸೈನಾ ನೆಹ್ವಾಲ್‌

2015;ಬೆಳ್ಳಿ

2017;ಕಂಚು

ಮಹಿಳಾ ಡಬಲ್ಸ್

ಜ್ವಾಲಾ ಗುಟ್ಟಾ/ಅಶ್ವಿನಿ ಪೊನ್ನಪ್ಪ

2011;ಕಂಚು

ನೇರ ಪ್ರಸಾರ: ಸ್ಪೋರ್ಟ್ಸ್ 18

ಪಂದ್ಯಗಳ ಆರಂಭ: ರಾತ್ರಿ 7.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT