ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌ ಒಲಿಂಪಿಯಾಡ್‌: ಭಾರತ ತಂಡಗಳ ಶುಭಾರಂಭ

ಜಿಂಬಾಬ್ವೆ ವಿರುದ್ಧ ‘ಎ’ ತಂಡಕ್ಕೆ ಜಯ
Last Updated 29 ಜುಲೈ 2022, 15:39 IST
ಅಕ್ಷರ ಗಾತ್ರ

ಮಾಮಲ್ಲಪುರಂ:ಭಾರತದ ತಂಡಗಳು 44ನೇ ಚೆಸ್‌ ಒಲಿಂಪಿಯಾಡ್‌ನ ಮುಕ್ತ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಮೊದಲ ಸುತ್ತಿನಲ್ಲಿ ಗೆದ್ದು ಶುಭಾರಂಭ ಮಾಡಿದವು.

ಮುಕ್ತ ವಿಭಾಗದಲ್ಲಿ ಭಾರತ ‘ಎ’, ‘ಬಿ’ ಮತ್ತು ‘ಸಿ’ ತಂಡಗಳು ಕ್ರಮವಾಗಿ ಜಿಂಬಾಬ್ವೆ, ಯುಎಇ ಹಾಗೂ ದಕ್ಷಿಣ ಸುಡಾನ್‌ ತಂಡಗಳ ಎದುರು ಜಯಿಸಿದವು.

‘ಎ’ ತಂಡದಲ್ಲಿ ಕಣಕ್ಕಿಳಿದ ಅರ್ಜುನ್‌ ಎರಿಗೈಸಿ ಮತ್ತು ಕೆ.ಶಶಿಕಿರಣ್‌ ಅವರು ಕಪ್ಪು ಕಾಯಿಗಳೊಂದಿಗೆ ಆಡಿ ಜಿಂಬಾಬ್ವೆಯ ಮಸಂಗೊ ಸ್ಪೆನ್ಸರ್‌ ಹಾಗೂ ಜೆಂಬಾ ಜೆಮುಸೆ ಅವರನ್ನು ಮಣಿಸಿದರು.

ಬಿಳಿ ಕಾಯಿಗಳೊಂದಿಗೆ ಆಡಿದ ವಿದಿತ್‌ ಗುಜರಾತಿ ಮತ್ತು ಎಸ್‌.ಎಲ್‌.ನಾರಾಯಣನ್‌ ಅವರು ಮಕೊಟೊ ರಾಡ್‌ವೆಲ್‌ ಹಾಗೂ ಮಶೋರ್‌ ಎಮರಾಲ್ಡ್‌ ವಿರುದ್ಧ ಗೆದ್ದರು.

ಮಹಿಳೆಯರ ವಿಭಾಗದಲ್ಲಿ ಅಗ್ರಶ್ರೇಯಾಂಕ ಹೊಂದಿರುವ ಭಾರತ ‘ಎ’ ತಂಡ 3–0 ರಲ್ಲಿ ತಾಜಿಕಿಸ್ತಾನ ತಂಡವನ್ನು ಮಣಿಸಿತು. ಟಾಪ್‌ ಬೋರ್ಡ್‌ನಲ್ಲಿ ಆಡಿದ ಕೊನೇರು ಹಂಪಿ ಅಲ್ಲದೆ ಆರ್‌.ವೈಶಾಲಿ ಮತ್ತು ಭಕ್ತಿ ಕುಲಕರ್ಣಿ ಅವರು ತಮ್ಮ ಎದುರಾಳಿಗಳ ವಿರುದ್ಧ ಗೆದ್ದರು.

ಭಾರತ ‘ಬಿ’ ತಂಡ ವೇಲ್ಸ್‌ ವಿರುದ್ಧ ಗೆದ್ದಿತು. ‘ಸಿ’ ತಂಡವೂ ಮೊದಲ ಸುತ್ತಿನಲ್ಲಿ ಗೆಲುವಿನ ನಗು ಬೀರಿತು.

ಕ್ರೀಡಾ ಸಚಿವರಿಂದ ಚಾಲನೆ: ಭಾರತದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿರುವ ಚೆಸ್‌ ಒಲಿಂಪಿಯಾಡ್‌ನ ಮೊದಲ ಸುತ್ತಿನ ಪಂದ್ಯಗಳಿಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರು, ವಿದಿತ್‌ ಗುಜರಾತಿ ಅವರೊಂದಿಗೆ ಚೆಸ್‌ ಆಡುವ ಮೂಲಕ ಚಾಲನೆ ನೀಡಿದರು.

ಐದು ಬಾರಿಯ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್, ಅಂತರರಾಷ್ಟ್ರೀಯ ಚೆಸ್‌ ಸಂಸ್ಥೆ (ಫಿಡೆ)ಅರ್ಕೇದಿ ದೊರ್ಕೊವಿಚ್‌, ಅಖಿಲ ಭಾರತ ಚೆಸ್‌ ಫೆಡರೇಷನ್‌ ಅಧ್ಯಕ್ಷ ಸಂಜಯ್‌ ಕಪೂರ್‌ ಪಾಲ್ಗೊಂಡಿದ್ದರು.

ಒಲಿಂಪಿಯಾಡ್‌ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉದ್ಘಾಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT