ಗುರುವಾರ , ಏಪ್ರಿಲ್ 15, 2021
23 °C

ಕೋವಿಡ್ ನಂತರದ ಜಗತ್ತಿನಲ್ಲಿ ಅಥ್ಲೆಟಿಕ್ಸ್‌ಗೆ ಭವ್ಯ ಭವಿಷ್ಯ: ಸೆಬಾಸ್ಟಿಯನ್ ಕೋ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೊರೊನಾ ವೈರಾಣು ಉಂಟುಮಾಡಿರುವ ವಿಷಮ ಪರಿಸ್ಥಿತಿ ಸುಧಾರಿಸಿದ ನಂತರ ಅಥ್ಲೆಟಿಕ್ಸ್‌ ಚುರುಕು ಪಡೆದುಕೊಳ್ಳಲಿದ್ದು ಅನೇಕರು ಇದರತ್ತ ಒಲವು ಹೊಂದಲಿದ್ದಾರೆ ಎಂದು ವರ್ಲ್ಡ್ ಅಥ್ಲೆಟಿಕ್ಸ್ ಅಧ್ಯಕ್ಷ ಸೆಬಾಸ್ಟಿಯನ್ ಕೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೊರೊನಾದಿಂದಾಗಿ ಹೆಚ್ಚಿನ ಜನರು ನಡಿಗೆ, ಓಟ ಮುಂತಾದ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿಸುತ್ತಿದ್ದು ಇದು ಅಥ್ಲೆಟಿಕ್ಸ್ ಅಂಗಣಕ್ಕೆ ಧುಮುಕಲು ಅನೇಕರಿಗೆ ಪ್ರೇರಣೆಯಾಗಲಿದೆ ಎಂದು ಅವರು ವಿಶ್ಲೇಷಿಸಿದರು. ಏಷ್ಯನ್ ಅಥ್ಲೆಟಿಕ್ಸ್ ಫೆಡರೇಷನ್ ಆನ್‌ಲೈನ್ ಮೂಲಕ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಅವರು ಪಾಲ್ಗೊಂಡಿದ್ದರು.

‘ಸ್ಥಳೀಯ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ವರ್ಲ್ಡ್ ಅಥ್ಲೆಟಿಕ್ಸ್ ಮುಂದಾಗಿದೆ. ಲಾಕ್‌ಡೌನ್ ಮತ್ತು ಅದರ ನಂತರ ಬಹುತೇಕರು ವ್ಯಾಯಾಮ ಮತ್ತಿತರ ಆರೋಗ್ಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂಬುದನ್ನು ಅಧ್ಯಯನವೊಂದು ಸಾಬೀತು ಮಾಡಿದೆ. ವಿಶ್ವದಾದ್ಯಂತ ವ್ಯಾಯಾಮ ಮಾಡುವವರ ಸಂಖ್ಯೆ ಶೇಕಡಾ 80ಕ್ಕೆ ಏರಿದೆ ಎಂದು ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ. ಅಥ್ಲೆಟಿಕ್ಸ್‌ ಮೇಲೆ ಇದೆಲ್ಲವೂ ಪೂರಕ ಪರಿಣಾಮ ಬೀರಲಿದೆ. ಅದು ಅಥ್ಲೆಟಿಕ್ಸ್ ಪಾಲಿಗೆ ದೊಡ್ಡ ಆಸ್ತಿಯಾಗಲಿದೆ. ಇದನ್ನು ಬಳಸಿಕೊಂಡು ಕೊರೋನೋತ್ತರ ಕಾಲದಲ್ಲಿಇ ಟ್ರ್ಯಾಕ್ ಮತ್ತು ಫೀಲ್ಡ್‌ ಕ್ರೀಡೆಗಳ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು’ ಎಂದು ಅವರು ತಿಳಿಸಿದರು.    

‘ಕೊರೊನಾದ ಹಾವಳಿ ತಗ್ಗಿದರೂ ವಿಶ್ವದಲ್ಲಿ ಗೊಂದಲಗಳು ಮುಂದುವರಿಯಲಿವೆ. ಆದರೆ ಅಥ್ಲೆಟಿಕ್ಸ್‌ಗೆ ಇದು ಭಾದಿಸಲಾರದು. ಆದ್ದರಿಂದ ಈ ಕ್ರೀಡೆ ಇನ್ನಷ್ಟು ಚುರುಕು ಪಡೆದುಕೊಳ್ಳಲಿದೆ. ಕೋವಿಡ್ ಸಂದರ್ಭದಲ್ಲೇ ಮೂರು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ವಾರಾಂತ್ಯದಲ್ಲಿ ಓಟವನ್ನು ಆಯೋಜಿಸುವ ಇಂಗ್ಲೆಂಡ್‌ನ ಪಾರ್ಕ್ರುನ್ ಗ್ಲೋಬಲ್ ಲಿಮಿಟೆಡ್ ಇವುಗಳಲ್ಲಿ ಪ್ರಮುಖವಾದದ್ದು’ ಎಂದು ಅವರು ವಿವರಿಸಿದರು.

ಉದ್ದೀಪನ ಮದ್ದು ಸೇವಿಸಿ ಸಾಮೂಹಿಕವಾಗಿ ಸಿಕ್ಕಿಬಿದ್ದಿರುವ ರಷ್ಯಾದ ಅಥ್ಲೀಟ್‌ಗಳಿಗೆ ಸಂಬಂಧಿಸಿ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಐದು ವರ್ಷಗಳಿಂದ ರಷ್ಯಾದ ಅಥ್ಲೀಟ್‌ಗಳು ‘ವರ್ಲ್ಡ್ ಅಥ್ಲೆಟಿಕ್ಸ್’ಗೆ ತಲೆನೋವಾಗಿದ್ದು ಅಲ್ಲಿ ಅಥ್ಲೆಟಿಕ್ಸ್‌ಗೆ ಮರುಜೀವ ನೀಡಲು ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಕೋ ಅಭಿಪ್ರಾಯಪಟ್ಟರು.  

ಉದ್ದೀಪನ ಮದ್ದು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ವಿಧಿಸಲಾಗಿದ್ದ ಶುಲ್ಕವನ್ನು ಆಗಸ್ಟ್ 15ರ ಒಳಗೆ ಪಾವತಿಸದೇ ಇದ್ದರೆ ರಷ್ಯಾದ ಅಥ್ಲೆಟಿಕ್ಸ್ ಫೆಡರೇಷನ್‌ ಅನ್ನು ವಿಶ್ವ ಫೆಡರೇಷನ್‌ನಿಂದ ಹೊರದಬ್ಬಲು ಜುಲೈ 30ರಂದು ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಡೋಪಿಂಗ್ ಪ್ರಕರಣದಲ್ಲಿ ರಷ್ಯಾವನ್ನು ಐದು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು