ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics: ಕಂಚಿಗೆ ಚಿನ್ನದ ಹೊಳಪು ತುಂಬುವ ನಿರೀಕ್ಷೆ

Last Updated 3 ಆಗಸ್ಟ್ 2021, 19:46 IST
ಅಕ್ಷರ ಗಾತ್ರ

ಟೋಕಿಯೊ: ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿರುವ ಭಾರತದ ಬಾಕ್ಸರ್ ಲವ್ಲಿನಾ ಬೋರ್ಗೊಹೈನ್ ಈಗಾಗಲೇ ಖಚಿತಪಡಿಸಿಕೊಂಡಿರುವ ಕಂಚಿನ ಪದಕಕ್ಕೆ ಚಿನ್ನದ ಹೊಳಪು ತುಂಬುವ ನಿರೀಕ್ಷೆಯಲ್ಲಿ ಬುಧವಾರ ಕಣಕ್ಕೆ ಇಳಿಯಲಿದ್ದಾರೆ.

ಸೆಮಿಫೈನ್‌ನಲ್ಲಿ ಅವರಿಗೆ ಟರ್ಕಿಯ ಬುಸೆನಾಜ್ ಸುರ್ಮೆನೆಲಿ ಎದುರಾಳಿ. ಪ್ರೀಕ್ವಾರ್ಟರ್ ಫೈನಲ್ ಮತ್ತು ಕ್ವಾರ್ಟರ್ ಫೈನಲ್‌ನಲ್ಲಿ ಏಕಪಕ್ಷೀಯ ಜಯ ಗಳಿಸಿರುವ ಬುಸೆನಾಜ್ ಹಾಲಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದರೆ ಲವ್ಲಿನಾ ಭಾರತದ ಪರವಾಗಿ ಇತಿಹಾಸ ಸೃಷ್ಟಿಸಲಿದ್ದಾರೆ. ವಿಜೇಂದರ್ ಸಿಂಗ್ ಮತ್ತು ಎಂ.ಸಿ.ಮೇರಿ ಕೋಮ್ ಕ್ರಮವಾಗಿ 2008 ಮತ್ತು 2012ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಲವ್ಲಿನಾ ಗೆದ್ದರೆ ಭಾರತದ ಪರವಾಗಿ ಫೈನಲ್ ಪ್ರವೇಶಿಸುವ ಮೊದಲ ಬಾಕ್ಸರ್‌ ಆಗಲಿದ್ದಾರೆ.

ಕ್ವಾರ್ಟರ್ ಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ನಿನ್ ಚಿನ್ ಚೆನ್ ವಿರುದ್ಧ ಜಯ ಗಳಿಸಿದ ನಂತರ ಲವ್ಲಿನಾ ಅವರ ಆತ್ಮವಿಶ್ವಾಸ ಹೆಚ್ಚಾಗಿದೆ. ಆ ಬೌಟ್ ಮುಗಿದ ಕೂಡಲೇ ‘ಪದಕ ಎಂದರೆ ಚಿನ್ನದ ಪದಕ. ಅದನ್ನು ಗಳಿಸಲು ಮೊದಲು ಪ್ರಯತ್ನಿಸುವೆ’ ಎಂದು ಹೇಳಿದ್ದರು.

ಟರ್ಕಿ ಬಾಕ್ಸರ್ ಕೂಡ ಭರವಸೆಯಲ್ಲಿದ್ದಾರೆ. ಈ ವರ್ಷ ಅಂತರರಾಷ್ಟ್ರೀಯ ಮಟ್ಟದ ಎರಡು ಪದಕಗಳನ್ನು ಗಳಿಸಿದ್ದಾರೆ. 2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಈ ಇಬ್ಬರೂ ಸ್ಪರ್ಧಿಸಿದ್ದರು. ಆಗ ಸುರ್ಮೆನೆಲಿ ಚಿನ್ನ ಗೆದ್ದಿದ್ದರೆ ಲವ್ಲಿನಾ ಕಂಚು ಗಳಿಸಿದ್ದರು. ಆದರೆ ಅಂದು ಇವರಿಬ್ಬರು ಮುಖಾಮುಖಿಯಾಗುವ ಅವಕಾಶ ಲಭಿಸಲಿಲ್ಲ.

ಈ ಇಬ್ಬರು ಬಾಕ್ಸರ್‌ಗಳು ಹಿಂದೆ ಒಮ್ಮೆಯೂ ಮುಖಾಮುಖಿಯಾಗಲಿಲ್ಲ. ಹೀಗಾಗಿ ಲವ್ಲಿನಾಗೆ ನಿಖರ ರಣತಂತ್ರ ಹೇಳಿಕೊಡಲಾಗಿದೆ. ಅವರು ಎಲ್ಲ ಬಗೆಯ ಸವಾಲಿಗೆ ಸಿದ್ಧರಾಗಿದ್ದಾರೆ. ಸಂಜೆ ವೇಳೆ ಈ ಬೌಟ್ ಇದೆ. ಆದ್ದರಿಂದ ಅವರಿಗೆ ಕೆಲವು ದಿನಗಳಿಂದ ಸಂಜೆಯೇ ತರಬೇತಿ ನೀಡಲಾಗುತ್ತದೆ.

ಮೊಹಮ್ಮದ್ ಅಲಿ ಕ್ವಮರ್ ಭಾರತ ತಂಡದ ಕೋಚ್‌

ವಿಭಾಗ

64ರಿಂದ 69 ಕೆಜಿ

ಸುರ್ಮೆನೆಲಿ ಬುಸೆನಜ್‌

ವಯಸ್ಸು 23 ವರ್ಷ

ಲವ್ಲಿನಾ ಬೋರ್ಗೊಹೈನ್

ವಯಸ್ಸು 23 ವರ್ಷ

ಇಬ್ಬರೂ ಬಾಕ್ಸರ್‌ಗಳು ಸಾಗಿ ಬಂದ ಹಾದಿ

ಲವ್ಲಿನಾ ಬೋರ್ಗೊಹೈನ್

ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನಿಯ ಅಪೆಜ್ ನಡೈನ್ ವಿರುದ್ಧ 3–2ರಲ್ಲಿ ಗೆಲುವು

ಕ್ವಾರ್ಟರ್ ಫೈನಲ್‌ನಲ್ಲಿ ಚೀನಾ ತೈಪೆಯ ಚೆನ್‌ ನೀನ್ ಚಿನ್ ವಿರುದ್ಧ 4–1ರಲ್ಲಿ ಜಯ

ಸುರ್ಮೆನೆಲಿ ಬುಸೆನಜ್‌

ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಪೋಲೆಂಡ್‌ನ ಕೊಜೆವ್‌ಸ್ಕ ಕರೋಲಿನಾ ವಿರುದ್ಧ 5–0ರಲ್ಲಿ ಗೆಲುವು

ಕ್ವಾರ್ಟರ್ ಫೈನಲ್‌ನಲ್ಲಿ ಉಕ್ರೇನ್‌ನ ಲೈಜೆಂಕೊ ಅನಾ ವಿರುದ್ಧ 5–0ಯಲ್ಲಿ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT