ಶನಿವಾರ, ಅಕ್ಟೋಬರ್ 24, 2020
18 °C
ಆರಂಭವಾಗದ ಯುನೈಟೆಡ್‌ ಚೆಸ್‌ ಸಂಸ್ಥೆ ಯೋಜನೆ

‘ಗ್ರಾಮೀಣ ಚೆಸ್’ಗೆ ಕೋವಿಡ್‌ ಅಡ್ಡಿ

ಪ್ರಮೋದ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ರಾಜ್ಯದ ಗ್ರಾಮೀಣ ಪ್ರದೇಶ ಗಳ ಮಕ್ಕಳಿಗೆ ಉಚಿತವಾಗಿ ಚೆಸ್‌ ಕಲಿಸುವ ಉದ್ದೇಶದಿಂದ ಯುನೈಟೆಡ್‌ ಕರ್ನಾಟಕ ಚೆಸ್‌ ಸಂಸ್ಥೆ (ಯುಕೆಸಿಎ) ರೂಪಿಸಿರುವ ಯೋಜನೆಗೆ ಕೋವಿಡ್– 19 ಅಡ್ಡಿಯಾಗಿದೆ.

ಚೆಸ್ ಈಗ ‌ನಗರ ಪ್ರದೇಶಗಳ ಮಕ್ಕಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಜಿಲ್ಲಾ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳು ನಡೆದರೆ ನಗರ ಪ್ರದೇಶಗಳ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಳ್ಳಿಗಳಲ್ಲಿಯೂ ಚೆಸ್‌ ಆಡುವವರ ಸಂಖ್ಯೆ ಹೆಚ್ಚಿಸಬೇಕು, ಗ್ರಾಮೀಣ ಮಕ್ಕಳು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಸಾಮರ್ಥ್ಯ ಗಳಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಸಂಸ್ಥೆ ಈ ವರ್ಷದ ಆರಂಭದಲ್ಲಿ ಯೋಜನೆ ರೂಪಿಸಿತ್ತು.

ಇದಕ್ಕಾಗಿ ಸಂಸ್ಥೆ ಸದಸ್ಯರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಚೆಸ್‌ ಸಂಸ್ಥೆ ಪದಾಧಿಕಾರಿಗಳು ವಿಜಯಪುರ, ಬಾಗಲಕೋಟೆ, ಗದಗ ಮತ್ತು ದಕ್ಷಿಣ ಭಾಗದ ಕೆಲ ಜಿಲ್ಲೆಗಳಲ್ಲಿ ಪ್ರಾರಂಭಿಕ ಹಂತದಲ್ಲಿ ಈ ಯೋಜನೆ ಪ್ರಾಯೋಗಿಕ ಅನುಷ್ಠಾನಕ್ಕೆ ತಯಾರಿಯೂ ನಡೆಸಿದ್ದರು. ನಿಗದಿತ ಯೋಜನೆಯಂತೆ ಏಪ್ರಿಲ್‌ನಿಂದ ಚೆಸ್‌ ಕಲಿಕಾ ತರಬೇತಿ ಶಿಬಿರಗಳು ಆರಂಭವಾಗಬೇಕಿದ್ದವು. ಕೋವಿಡ್‌ 19 ಕಾರಣ ಈ ಯೋಜನೆ ಆರಂಭವಾಗಲಿಲ್ಲ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿ ಸಿದ ಯುಕೆಸಿಎ ಅಧ್ಯಕ್ಷ ಡಿ.ಪಿ. ಅನಂತ್‌ ‘ಕೋವಿಡ್‌ ಕಾರಣದಿಂದ ನಮ್ಮ ಯೋಜನೆಗೆ ಆರಂಭದಲ್ಲಿ ಹಿನ್ನಡೆ ಯಾಗಿದೆ. ಸೋಂಕಿನ ಭೀತಿ ಮತ್ತು ಸರ್ಕಾರದ ನಿಯಮಾವಳಿ ಪಾಲಿಸಬೇಕಾದ ಕಾರಣ ಈಗ ಎಲ್ಲ ಟೂರ್ನಿಗಳನ್ನು ಆನ್‌ಲೈನ್ ಮೂಲಕ ನಡೆಸಲಾಗುತ್ತದೆ. ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಚೆಸ್‌ನ ಎಲ್ಲ ಕೌಶಲ ಗಳನ್ನು ಹೇಳಿಕೊಡಬೇಕು, ತಪ್ಪು ಮಾಡಿದರೆ ಅಲ್ಲೇ ತಿದ್ದಬೇಕು. ಎಲ್ಲರಿಗೂ ಸರಳವಾಗಿ ಇಂಟರ್‌ನೆಟ್‌ ಸೌಲಭ್ಯ ಸಿಗುವುದಿಲ್ಲ. ಆದ್ದರಿಂದ ಇದಕ್ಕೆ ಆನ್‌ಲೈನ್‌ ವೇದಿಕೆ ಸರಿಯಾಗುವುದಿಲ್ಲ. ಕೋವಿಡ್‌ ಕಡಿಮೆಯಾದ ಬಳಿಕ ಯೋಜನೆ ಆರಂಭಿಸುತ್ತೇವೆ’ ಎಂದರು.

ಯುಕೆಸಿಎ ಪ್ರಧಾನ ಕಾರ್ಯದರ್ಶಿ ಆರ್‌. ಹನುಮಂತ ‘2–3 ಜಿಲ್ಲೆಗಳ ಮಕ್ಕಳಿಗೆ ಒಂದೇ ಕಡೆ ತರಬೇತಿ ನೀಡಿ, ಬಳಿಕ ಅವರ ನಡುವೆ ಸ್ಪರ್ಧೆ ನಡೆಸಲಾಗುವುದು. ತಳಮಟ್ಟದಿಂದಲೇ ಗುಣಮಟ್ಟದ ತರಬೇತಿ ನೀಡಿದರೆ ಭವಿಷ್ಯದಲ್ಲಿ ಅನುಕೂಲವಾಗುತ್ತದೆ. ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ರಾಜ್ಯ ಸ್ಪರ್ಧಿಗಳ ಪಾಲ್ಗೊಳ್ಳುವಿಕೆ ಹೆಚ್ಚಾಗುತ್ತದೆ. ಕೋವಿಡ್‌ ಮುಗಿಯುವುದನ್ನೇ ಕಾಯುತ್ತಿದ್ದೇವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು