ಮಂಗಳವಾರ, ಸೆಪ್ಟೆಂಬರ್ 29, 2020
22 °C

ಕೋವಿಡ್ –19 ಸೋಂಕಿತ ಹಾಕಿ ಆಟಗಾರರು ಆಸ್ಪತ್ರೆಗೆ ದಾಖಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್–19 ಸೋಂಕು ಕಾಣಿಸಿಕೊಂಡಿರುವ ಭಾರತ ಹಾಕಿ ತಂಡದ ಆರೂ ಮಂದಿ ಆಟಗಾರರನ್ನೂ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ತಿಳಿಸಿದೆ.

ನಾಯಕ ಮನ್‌ಪ್ರೀತ್ ಸಿಂಗ್ ಅವರೊಂದಿಗೆ ಸುರೇಂದರ್ ಕುಮಾರ್, ಜಸ್‌ಕರಣ್ ಸಿಂಗ್, ಡ್ರ್ಯಾಗ್ ಫ್ಲಿಕ್ಕರ್ ವರುಣ್ ಕುಮಾರ್ ಮತ್ತು ಗೋಲ್‌ಕೀಪರ್ ಕೃಷ್ಣ ಬಹದ್ದೂರ್ ಪಾಠಕ್ ಅವರಲ್ಲಿ ಕಳೆದ ವಾರ ಸೋಂಕು ಕಾಣಿಸಿಕೊಂಡಿತ್ತು. ಫಾರ್ವರ್ಡ್ ಆಟಗಾರ್ ಮನ್‌ದೀಪ್ ಸಿಂಗ್ ಅವರಲ್ಲಿ ಸೋಮವಾರ ಸೋಂಕು ದೃಢವಾಗಿತ್ತು. ಆಟಗಾರರೆಲ್ಲರೂ ದೇಶದ ವಿವಿಧ ರಾಜ್ಯಗಳಲ್ಲಿರುವ ಅವರವರ ಊರಿಂದ ಬೆಂಗಳೂರಿಗೆ ತೆರಳಿದ್ದರು. ಇದೇ ತಿಂಗಳ 20ರಂದು ರಾಷ್ಟ್ರೀಯ ಶಿಬಿರ ಬೆಂಗಳೂರಿನಲ್ಲಿ ಆರಂಭವಾಗಬೇಕಿತ್ತು.

ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಮನ್‌ದೀಪ್ ಸಿಂಗ್ ಅವರನ್ನು ಮಂಗಳವಾರ ಆಸ್ಪತ್ರೆಗೆ ಸೇರಿಸಲಾಗಿತ್ತು. ಸೋಂಕಿಗೆ ಒಳಗಾಗಿರುವ ಇತರ ಆಟಗಾರರನ್ನೂ ನಂತರ ಆಸ್ಪತ್ರಗೆ ದಾಖಲಿಸಲಾಗಿದೆ ಎಂದು ಬುಧವಾರ ಸಾಯ್ ತಿಳಿಸಿದೆ. ಎಲ್ಲರೂ ಎಸ್‌ಎಸ್‌ ಸ್ಪರ್ಶ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಾಯ್ ವಿವರಿಸಿದೆ.

‘ಆಟಗಾರರು ಸದಾ ವೈದ್ಯರ ನಿರೀಕ್ಷಣೆಯಲ್ಲಿ ಇರಬೇಕು ಮತ್ತು ಅವರಿಗೆ ಅತ್ಯುತ್ತಮ ಚಿಕಿತ್ಸೆ ದೊರಕಬೇಕು ಎಂದು ಆಶಯದೊಂದಿಗೆ ಆಸ್ಪತ್ರೆಗೆ ದಾಖಲಿಸುವ ನಿರ್ಣಯ ಕೈಗೊಳ್ಳಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದು ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ’ ಎಂದು ಸಾಯ್ ತಿಳಿಸಿದೆ.

ಸಾಯ್‌ನಲ್ಲಿದ್ದ ಆಟಗಾರರನ್ನು ಒಂದು ತಿಂಗಳ ವಿರಾಮಕ್ಕಾಗಿ ಅವರವರ ಊರುಗಳಿಗೆ ಕಳುಹಿಸಲಾಗಿತ್ತು. ಎಲ್ಲರೂ ಜೊತೆಗೂಡಿ ಬೆಂಗಳೂರಿಗೆ ವಾಪಸಾಗುವಾಗ ಸೋಂಕು ತಗುಲಿರುವ ಸಾಧ್ಯತೆ ಇದೆ. ಆಟಗಾರರನ್ನು ದಿನದಲ್ಲಿ ನಾಲ್ಕು ಬಾರಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಬೆಂಗಳೂರಿಗೆ ಬಂದ ನಂತರ ಕಡ್ಡಾಯ ತಪಾಸಣೆ ನಡೆಸಿದಾಗ ಆರು ಆಟಗಾರರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಮಹಿಳಾ ತಂಡದ ಎಲ್ಲರ ಪರೀಕ್ಷಾ ವರದಿಯೂ ನೆಗೆಟಿವ್ ಆಗಿದ್ದು ಅಭ್ಯಾಸಕ್ಕೆ ಸಜ್ಜಾಗಿದ್ದಾರೆ ಎಂದು ಸಾಯ್ ವಿವರಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು