ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CWG| ಭಾರತಕ್ಕೆ ಮೂರನೇ ಚಿನ್ನ ಗೆದ್ದುಕೊಟ್ಟ ವೇಟ್‌ಲಿಫ್ಟರ್‌ ಅಚಿಂತ ಶೆವುಲಿ

Last Updated 1 ಆಗಸ್ಟ್ 2022, 15:45 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್‌ (ಪಿಟಿಐ): ನಿರೀಕ್ಷೆಗೆ ತಕ್ಕಂತೆ ಸಾಮರ್ಥ್ಯ ಪ್ರದರ್ಶಿಸಿದ ಭಾರತದ ವೇಟ್‌ಲಿಫ್ಟರ್‌ ಅಚಿಂತ ಶೆವುಲಿ, ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನದ ನಗು ಬೀರಿದರು.

ಭಾನುವಾರ ರಾತ್ರಿ ನಡೆದ ಪುರುಷರ 73 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಅವರು ಒಟ್ಟು 313 ಕೆ.ಜಿ (143 ಕೆ.ಜಿ+ 170 ಕೆ.ಜಿ) ಸಾಧನೆಯೊಂದಿಗೆ ಅಗ್ರಸ್ಥಾನ ಪಡೆದರು. ಇದರೊಂದಿಗೆ ಭಾರತದ ವೇಟ್‌ಲಿಫ್ಟಿಂಗ್‌ ಸ್ಪರ್ಧಿಗಳು ಈ ಕೂಟದಲ್ಲಿ ಗೆದ್ದ ಪದಕಗಳ ಸಂಖ್ಯೆ ಆರಕ್ಕೇರಿತು.

ಶೆವುಲಿಗೆ ಪ್ರಬಲ ಪೈಪೋಟಿ ಒಡ್ಡಿದ ಮಲೇಷ್ಯಾದ ಎರಿ ಹಿದಾಯತ್ ಮುಹಮ್ಮದ್‌ (ಒಟ್ಟು 303 ಕೆ.ಜಿ) ಬೆಳ್ಳಿ ಹಾಗೂ ಕೆನಡಾದ ಶಾಡ್ ಡಾರ್ಸಿಗ್ನಿ (298 ಕೆ.ಜಿ) ಕಂಚು ಪಡೆದುಕೊಂಡರು.

ಜೂನಿಯರ್‌ ವಿಶ್ವಚಾಂಪಿಯನ್‌ಷಿಪ್‌ನ ಬೆಳ್ಳಿ ಪದಕ ವಿಜೇತ ಶೆವುಲಿ, ಸ್ನ್ಯಾಚ್‌ನಲ್ಲಿ ಮೂರು ಪ್ರಯತ್ನಗಳಲ್ಲಿ ಕ್ರಮವಾಗಿ 137 ಕೆ.ಜಿ, 140 ಕೆ.ಜಿ ಮತ್ತು 143 ಕೆ.ಜಿ ಭಾರ ಎತ್ತಿದರು. ಇದು ಕೂಟ ದಾಖಲೆ ಮತ್ತು ಅವರ ವೈಯಕ್ತಿಕ ಶ್ರೇಷ್ಠ ಪ್ರದರ್ಶನವೂ ಹೌದು.

ತಮ್ಮ ಪ್ರತಿಸ್ಪರ್ಧಿಗಳಿಂತ ಐದು ಕೆ.ಜಿ ಅಂತರದ ಮುನ್ನಡೆಯೊಂದಿಗೆ ಕ್ಲೀನ್‌– ಜರ್ಕ್‌ ವಿಭಾಗದಲ್ಲಿ ಕಣಕ್ಕಿಳಿದ ಅವರು ಮೊದಲ ಪ್ರಯತ್ನದಲ್ಲಿ 166 ಕೆ.ಜಿ. ಭಾರವನ್ನು ಸಲೀಸಾಗಿ ಎತ್ತಿದರು. ಎರಡನೇ ಪ್ರಯತ್ನದಲ್ಲಿ 170 ಕೆ.ಜಿ. ಎತ್ತಲು ವಿಫಲರಾದರೂ, ಮೂರನೇ ಹಾಗೂ ಕೊನೆಯ ಪ್ರಯತ್ನದಲ್ಲಿ ಯಶ ಕಂಡರು.

ಮಲೇಷ್ಯಾದ ಪ್ರತಿಸ್ಪರ್ಧಿ ಹಿದಾಯತ್‌ ಕೊನೆಯ ಎರಡು ಪ್ರಯತ್ನಗಳಲ್ಲಿ 176 ಕೆ.ಜಿ. ಭಾರ ಎತ್ತಲು ಪ್ರಯತ್ನಿಸಿ ವಿಫಲರಾದರು. ಇದರಿಂದ ಅಚಿಂತಗೆ ಚಿನ್ನ ಒಲಿಯಿತು.

‘ನನ್ನ ವೃತ್ತಿಜೀವನದ ಅತಿದೊಡ್ಡ ಕೂಟ ಇದಾಗಿದ್ದು, ಈ ಪದಕವನ್ನು ದಿವಂಗತರಾದ ತಂದೆಗೆ (ಹೃದಯಾಘಾತದಿಂದ ನಿಧನರಾಗಿದ್ದರು) ಅರ್ಪಿಸುವೆ. ಈ ಯಶಸ್ಸು ಮುಂದಿನ ದಿನಗಳಲ್ಲಿ ನನಗೆ ಉತ್ತೇಜನ ನೀಡಲಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಅಜಯ್‌ ಸಿಂಗ್‌ಗೆ ನಾಲ್ಕನೇ ಸ್ಥಾನ: ಪುರುಷರ 81 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ ಭಾರತದ ಅಜಯ್‌ ಸಿಂಗ್‌, ಕಂಚಿನ ಪದಕ ಗೆಲ್ಲುವ ಅವಕಾಶವನ್ನು ಅಲ್ಪದರಲ್ಲೇ ಕಳೆದುಕೊಂಡರು.

ತಮ್ಮ ಚೊಚ್ಚಲ ಕಾಮನ್‌ವೆಲ್ತ್‌ ಕೂಟದಲ್ಲಿ ಪಾಲ್ಗೊಂಡ 25 ವರ್ಷದ ಲಿಫ್ಟರ್‌, ಒಟ್ಟು 319 ಕೆ.ಜಿ ಭಾರ ಎತ್ತಿದರು. ಸ್ನ್ಯಾಚ್‌ನಲ್ಲಿ 143 ಕೆ.ಜಿ. ಹಾಗೂ ಕ್ಲೀನ್‌–ಜರ್ಕ್‌ನಲ್ಲಿ 176 ಕೆ.ಜಿ. ಸಾಧನೆ ಮಾಡಿದರು.

325 ಕೆ.ಜಿ. ಭಾರ (144 ಕೆ.ಜಿ+ 181 ಕೆ.ಜಿ) ಎತ್ತಿದ ಇಂಗ್ಲೆಂಡ್‌ನ ಕ್ರಿಸ್‌ ಮರೆ ಚಿನ್ನ ಗೆದ್ದರು. ಒಟ್ಟಾರೆ ವಿಭಾಗದಲ್ಲಿ ಅವರು ಕೂಟ ದಾಖಲೆ ಸ್ಥಾಪಿಸಿದರು.

ಆಸ್ಟ್ರೇಲಿಯದ ಕೈಲ್ ಬ್ರೂಸ್ ಅವರು 323 ಕೆ.ಜಿ (143+ 180) ಸಾಧನೆಯೊಂದಿಗೆ ಬೆಳ್ಳಿ ಹಾಗೂ ಕೆನಡಾದ ನಿಕೊಲಸ್‌ ವಚೊನ್ 320 ಕೆ.ಜಿ ಯೊಂದಿಗೆ (140+180) ಕಂಚು ತಮ್ಮದಾಗಿಸಿಕೊಂಡರು.

‘ನನ್ನಿಂದಾದ ಶ್ರೇಷ್ಠ ಪ್ರದರ್ಶನ ನೀಡಿದರೂ, ಪದಕ ಸಿಗಲಿಲ್ಲ. ಕೋಚ್‌ ವಿಜಯ್‌ ಶರ್ಮಾ ಅವರು ಸ್ಪರ್ಧೆಯ ವೇಳೆ ಉತ್ತೇಜನ ನೀಡುತ್ತಲೇ ಇದ್ದರು. ಆದರೆ ಅದೃಷ್ಟ ನನ್ನ ಪರ ಇರಲಿಲ್ಲ’ ಎಂದು ಅಜಯ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT