ಶುಕ್ರವಾರ, ಏಪ್ರಿಲ್ 16, 2021
31 °C
ಹತ್ತಾರು ಬಗೆಯ ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌

‘ಬಿಂಕ’ದ ಟ್ರ್ಯಾಕ್‌ನಲ್ಲಿ ಸೈಕ್ಲಿಂಗ್‌ ಸೊಗಸು

ಕೆ.ಎಂ. ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

ಗದಗ: ಶುಕ್ರವಾರ ಬೆಳಿಗ್ಗೆ 9 ಗಂಟೆಯ ಸಮಯ. ಬಿಂಕದಕಟ್ಟಿ ಸಾಲುಮರದ ತಿಮ್ಮಕ್ಕ ಉದ್ಯಾನದ ತುಂಬೆಲ್ಲ ಎಂಟಿಬಿ ಸೈಕಲ್‌ಗಳ ಕಲರವ. ಕೆಲವು ಸೈಕ್ಲಿಸ್ಟ್‌ಗಳ ಕಣ್ಣುಗಳಲ್ಲಿ ಆತಂಕ ಮಡುಗಟ್ಟಿದ್ದರೆ, ಕೆಲವು ಸೈಕ್ಲಿಸ್ಟ್‌ಗಳ ಕಣ್ಣುಗಳು ಜೋಡಿ ದೀಪಗಳಂತೆ ಪ್ರಕಾಶಿಸುತ್ತಿದ್ದವು. ಮುಖದಲ್ಲಿ ಸಂತಸ, ತುಟಿಬಟ್ಟಲಲ್ಲಿ ಆತ್ಮವಿಶ್ವಾಸದ ನಗು ತುಳುಕುತ್ತಿತ್ತು.

***

ಗುಜರಾತ್‌ನಿಂದ ಬಂದಿದ್ದ ಯುವತಿಯೊಬ್ಬಳು ತನ್ನ ಸೈಕಲ್‌ ಅನ್ನು ಉಲ್ಟಾ ಮಲಗಿಸಿ, ಕೈಯಲ್ಲಿ ಪೆಡಲ್‌ ತಿರುಗಿಸುತ್ತಾ ಗಾಲಿ ಹಾಗೂ ಚೈನ್‌ನ ಕಾರ್ಯಕ್ಷಮತೆ ಪರಿಶೀಲಿಸುತ್ತಿದ್ದಳು. ಮೂಗಿನ ತುದಿಗೆ ಬಂದು ಕೂರುತ್ತಿದ್ದ ಕನ್ನಡವನ್ನು ಹಿಂದೆ ಸರಿಸುತ್ತ ಸೈಕಲ್‌ ಗೇರ್‌ ಬದಲಿಸಿ ಚಾಕಚಕ್ಯತೆಯಿಂದ ಸಾಗಲು ಯಾವುದು ಅನುಕೂಲಕಾರಿ ಎಂದು ಮನದಲ್ಲೇ ಗಹನವಾಗಿ ಚಿಂತಿಸುತ್ತಿದ್ದಳು.

***

ದೂರದ ಊರು, ಹೊರ ರಾಜ್ಯಗಳಿಂದ ಮಕ್ಕಳನ್ನು ಸ್ಪರ್ಧೆಗೆ ಕರೆತಂದಿದ್ದ ಪೋಷಕರು ಉದ್ಯಾನದ ತುಂಬೆಲ್ಲ ಲಘುಬಗೆಯಿಂದ ಓಡಾಡುತ್ತಿದ್ದರು. ಆತ್ಮವಿಶ್ವಾಸದಿಂದ ಸ್ಪರ್ಧಿಸುವಂತೆ ಮಕ್ಕಳ ಕಿವಿಯಲ್ಲಿ ಉಸುರುತ್ತಿದ್ದರು. ಸಂವಹನಕ್ಕೆ ಕಣ್ಣುಗಳೇ ಮಾಧ್ಯಮವಾಗಿದ್ದವು. ಸ್ಪರ್ಧೆಯಲ್ಲಿ ಗೆದ್ದ ಮಕ್ಕಳ ಪೋಷಕರ ಸಂತಸ ಮೇರೆ ಮೀರಿತ್ತು. ಸ್ವಲ್ಪ ಅಂತರದಿಂದ ಗೆಲುವಿನಿಂದ ವಂಚಿತರಾದ ಮಕ್ಕಳನ್ನು ಪೋಷಕರು ಹಾಗೂ ತರಬೇತುದಾರರು ಸಂತೈಸುತ್ತಿದ್ದರು. ಮಕ್ಕಳ ಕಣ್ಣಂಚಿನಲ್ಲಿ ನೀರು ಹೊರಕ್ಕೆ ಇಣುಕುತ್ತಿತ್ತು.

ಇಂತಹ ಹತ್ತಾರು ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದ್ದು 17ನೇ ರಾಷ್ಟ್ರ ಮಟ್ಟದ ಮೌಂಟೆನ್‌ ಟೆರೈನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌.

ಎಂಟಿಬಿ ಟ್ರ್ಯಾಕ್‌ ನಿರ್ಮಾಣದಲ್ಲಿ ಪರಿಣತಿ ಸಾಧಿಸಿರುವ ಸುನೀಲ್‌ ನಂಜಪ್ಪ ನಿರ್ಮಾಣದ ಗದುಗಿನ ಎಂಟಿಬಿ ಸೈಕ್ಲಿಂಗ್‌ ಟ್ರ್ಯಾಕ್‌ ರಾಜ್ಯ ಹಾಗೂ ಹೊರ ರಾಜ್ಯದ ಸ್ಪರ್ಧಿಗಳ ಸೈಕ್ಲಿಂಗ್‌ ಕೌಶಲಕ್ಕೆ ಕಠಿಣ ಸವಾಲು ಒಡ್ಡಿತು. ಟ್ರ್ಯಾಕ್‌ನ ಕಠಿಣತೆಯ ಅಂದಾಜು ಸಿಗದ ಕೆಲವು ಸೈಕ್ಲಿಸ್ಟ್‌ಗಳು ಬಿದ್ದು ಗಾಯ ಮಾಡಿಕೊಂಡರು. ಅರಿವು ಇದ್ದವರು ಕೌಶಲ ಪ್ರದರ್ಶಿಸುತ್ತ ಲೀಲಾಜಾಲವಾಗಿ ಗುರಿ ಮುಟ್ಟಿದರು.

ಸೈಕ್ಲಿಂಗ್‌ ಮೈಸೂರು ಸಂಸ್ಥೆಯ ಸೈಕ್ಲಿಸ್ಟ್‌ ಕ್ಯಾರಿನ್‌ ಮಾರ್ಷಲ್‌ 16 ವರ್ಷದೊಳಗಿನವರ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು.

ಅದ್ಭುತ ಟ್ರ್ಯಾಕ್: ‘17ನೇ ರಾಷ್ಟ್ರ ಮಟ್ಟದ ಸೈಕ್ಲಿಂಗ್‌ ಸ್ಪರ್ಧೆಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದೆ. ಟ್ರ್ಯಾಕ್‌ ಅದ್ಭುತವಾಗಿದೆ. ಸೈಕ್ಲಿಂಗ್‌ಗೆ ಮಜಾ ನೀಡಿತು. ಮೊದಲ ಬಾರಿಗೆ ಕರ್ನಾಟಕದಲ್ಲಿ ರಾಷ್ಟ್ರ ಮಟ್ಟದ ಸೈಕ್ಲಿಂಗ್‌ ಸ್ಪರ್ಧೆ ನಡೆದಿದೆ. ಕರ್ನಾಟಕ ಸೈಕ್ಲಿಂಗ್‌ ಅಸೋಸಿಯೇಷನ್‌ನವರು ಎಂಟಿಬಿ ಕ್ಯಾಂಪ್‌ ಮಾಡಿದ್ದರು. ಅದರಲ್ಲಿ ಭಾಗವಹಿಸಿದ್ದು ಹಾಗೂ 10 ದಿನಗಳ ಮುಂಚಿತವಾಗಿಯೇ ಗದುಗಿಗೆ ಬಂದು ಅಭ್ಯಾಸ ಮಾಡಿದ್ದು, ಮೆಡಲ್‌ ಗೆಲ್ಲಲು ನೆರವಾಯಿತು’ ಎಂದು ಕ್ಯಾರಿನ್ ಹೇಳಿದರು.

‘ಕಳೆದ ವರ್ಷ ನಡೆದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದೆ. ಈ ವರ್ಷದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲಬೇಕೆಂಬ ಸಂಕಲ್ಪ ಮಾಡಿದ್ದೆ. ಅದೇ ಛಲದೊಂದಿಗೆ ಜಯಶಾಲಿಯಾದೆ’ ಎಂದು ಸಂತ್ಯಸ ವ್ಯಕ್ತಪಡಿಸಿದರು.

ಏಷ್ಯನ್‌ ಚಾಂಪಿಯನ್‌ಷಿಪ್‌ ಸೈಕ್ಲಿಂಗ್‌ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮೈಸೂರಿನ ಸೈಕ್ಲಿಸ್ಟ್‌ ಎಡೋನಿಸ್‌ 18 ವರ್ಷದೊಳಗಿನವರ ವಿಭಾಗದ ಸ್ಟಾರ್‌ ಸೈಕ್ಲಿಸ್ಟ್‌ ಆಗಿದ್ದರು.

ಸೈಕಲ್‌ ಅನ್ನು ಚಿರತೆಯ ಓಟಕ್ಕೆ ಸಮನಾಗಿ ಓಡಿಸುವ ಕಲೆ ಕರಗತ ಮಾಡಿಕೊಂಡಿರುವ ಈತ ಟ್ರ್ಯಾಕ್‌ನಲ್ಲೂ ಜಾದೂ ಮುಂದುರಿಸಿದ. 18.4 ಕಿ.ಮೀ. ಗುರಿಯ ಮೊದಲ ಸುತ್ತಿನಲ್ಲಿ ಸೈಕಲ್‌ ಓಡಿಸುವಾಗ ಮುಂದಿದ್ದ ಸ್ಪರ್ಧಿಯನ್ನು ಹಿಂದಿಕ್ಕಿ ಎಡೋನಿಸ್‌ ಪ್ರದರ್ಶಿಸಿದ ರ‍್ಯಾಂಪ್‌ ಜಂಪ್‌ ನೋಡುಗರ ಬಾಯಿಂದ ವ್ಹಾವ್‌ ಎನ್ನುವ ಉದ್ಘಾರ ಹೊರಡಿಸಿತು.

ಎಡೋನಿಸ್‌ ಹಿಂದಿದ್ದ ಮಹಾರಾಷ್ಟ್ರದ ಸ್ಪರ್ಧಿ ರ‍್ಯಾಂಪ್‌ ಮೇಲಿಂದ ಸೈಕಲ್‌ ಜಿಗಿಸಿದನಾದರೂ, ಸಮತೋಲನ ಕಳೆದುಕೊಂಡು ಬಿದ್ದುಬಿಟ್ಟ. ಗಲ್ಲಕ್ಕೆ ದೊಡ್ಡ ಪೆಟ್ಟು ಬಿತ್ತು. ಸೈಕಲ್ ಮಾರುದ್ದ ಹಾರಿ ಹೋಯಿತು. ಸ್ಪರ್ಧೆಯಲ್ಲಿ ಗೆಲ್ಲಬೇಕು ಎಂಬ ಕನಸು ಹೊತ್ತು ಬಂದಿದ್ದ ಆ ಹುಡುಗನನ್ನು ಸಂಘಟಕರು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದರು. ಸ್ಟ್ರೆಚರ್‌ ಮೇಲೆ ಆಂಬುಲೆನ್ಸ್‌ ಒಳಕ್ಕೆ ಹೋದ ಸೈಕ್ಲಿಸ್ಟ್‌ ಕಣ್ಣಲ್ಲಿ ವಿಷಾದ ಮಡುಗಟ್ಟಿತ್ತು.

ಮೊದಲ ದಿನದ ಸ್ಪರ್ಧೆಯ ವಿವರ

16 ವರ್ಷದೊಳಗಿನವರ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಸೈಕ್ಲಿಂಗ್‌ ಸ್ಪರ್ಧೆಯಲ್ಲಿ 10 ಕಿ.ಮೀ. ಗುರಿಯನ್ನು ಪೂರೈಸಲು ಸ್ಪರ್ಧಿಗಳು ನಾಲ್ಕು ಲ್ಯಾಪ್ಸ್ (ಸುತ್ತು) ಪೂರ್ಣಗೊಳಿಸಬೇಕಿತ್ತು.

ಒಬ್ಬ ಸ್ಪರ್ಧಿ ಟ್ರ್ಯಾಕ್‌ಗಿಳಿದ 30 ಸೆಕೆಂಡ್‌ ನಂತರ ಮತ್ತೊಬ್ಬ ಸ್ಪರ್ಧಿಯನ್ನು ಟ್ರ್ಯಾಕ್‌ಗೆ ಇಳಿಸಲಾಗುತ್ತಿತ್ತು. ಬಾಲಕ, ಬಾಲಕಿಯರ ವಿಭಾಗದ ಈ ಸ್ಪರ್ಧೆಗಳು ಬಿ ಟ್ರ್ಯಾಕ್‌ನಲ್ಲಿ ನಡೆದವು. 

ನಂತರ ಎ ಟ್ರ್ಯಾಕ್‌ನಲ್ಲಿ ನಡೆದ 18 ವರ್ಷದೊಳಗಿನವರ ವಿಭಾಗದ ಸೈಕ್ಲಿಂಗ್‌ ಸ್ಪರ್ಧೆ 18.4 ಕಿ.ಮೀ. ಗುರಿ ಹೊಂದಿತ್ತು. 4.6 ಕಿ.ಮೀ. ಟ್ರ್ಯಾಕ್‌ನ ನಾಲ್ಕು ಲ್ಯಾಪ್ಸ್‌ಗಳನ್ನು ಪೂರೈಸುವ ಗುರಿ ನೀಡಲಾಗಿತ್ತು. ದಿನದ ಕೊನೆಯಲ್ಲಿ ನಡೆದ ಮೆನ್‌ ಎಲೈಟ್‌ ವಿಭಾಗದ ಸ್ಪರ್ಧೆ 27.6 ಕಿ.ಮೀ. ಗುರಿ ಹೊಂದಿದ್ದು, 6 ಲ್ಯಾಪ್ಸ್‌ ಪೂರ್ಣಗೊಳಿಸಬೇಕಿತ್ತು. 

ಕೊನೆಗೆ ಫಲಿತಾಂಶ ಪ್ರಕಟಿಸಿ, ಮೆಡಲ್‌ ನೀಡಿ ಗೌರವಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು