ಶುಕ್ರವಾರ, ಮೇ 14, 2021
25 °C
ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌: ಸಂಜೀತ್‌ಗೆ ಕಂಚು

ಬೆಳ್ಳಿ ಪದಕ ಗೆದ್ದ ದೀಪಕ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಆಲ್ಮಾಟಿ, ಕಜಕಸ್ತಾನ: ಭಾರತದ ದೀಪಕ್ ಪೂನಿಯಾ ಅವರು ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ 86 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಕೊರಳಿಗೇರಿಸಿಕೊಂಡರು. ಇಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಭಾನುವಾರ ಅವರು ಇರಾನ್‌ನ ಹಸನ್‌ ಯಾಜ್ದನ್‌ಚರಾಟಿ ಎದುರು ಸೋತರು. ಭಾರತದ ಮತ್ತೊಬ್ಬ ಪೈಲ್ವಾನ್ ಸಂಜೀತ್ ಅವರಿಗೆ ಕಂಚಿನ ಪದಕ ಒಲಿಯಿತು.

ಟೂರ್ನಿಯುದ್ದಕ್ಕೂ ಡಿಫೆನ್ಸ್‌ನಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿದ್ದ ದೀಪಕ್, ಫೈನಲ್‌ನಲ್ಲಿ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಸೋಲು ಅನುಭವಿಸಿದರು. 2016ರ ಒಲಿಂಪಿಕ್ ಚಾಂಪಿಯನ್‌ ಆಗಿರುವ ಹಸನ್‌, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಚಿನ್ನ ಗೆದ್ದವರು. 2019ರ ವಿಶ್ವಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ದೀಪ‍ಕ್‌ ಇದೇ ಎದುರಾಳಿಯ ವಿರುದ್ಧ ಆಡಬೇಕಿತ್ತು. ಆದರೆ ಕಾಲಿನ ಗಾಯದಿಂದಾಗಿ ಹಿಂದೆ ಸರಿದಿದ್ದರು.

ಏಷ್ಯನ್ ಕೂಟದಲ್ಲಿ ಎರಡು ಬಾರಿ ಕಂಚಿನ ಪದಕ ಗೆದ್ದಿರುವ ದೀಪ‍ಕ್ ಅವರು ಟೋಕಿಯೊ ಒಲಿಂಪಿಕ್ಸ್‌ಗೆ ಈಗಾಗಲೇ ಅರ್ಹತೆ ಗಳಿಸಿದ್ದಾರೆ. ಈ ಟೂರ್ನಿಯ ಸೆಮಿಫೈನಲ್‌ನಲ್ಲಿ ಅವರು 2–0ಯಿಂದ ಕೊರಿಯಾದ ಗ್ವಾನುಕ್ ಕಿಮ್ ಅವರನ್ನು ಮಣಿಸಿದ್ದರು.

ಇದಕ್ಕೂ ಮೊದಲು ನಡೆದ ಎರಡು ಸುತ್ತುಗಳಲ್ಲಿ ಅವರು ಕ್ರಮವಾಗಿ ಉಜ್ಬೆಕಿಸ್ತಾನದ ಇಸಾ ಶಾಪಿಯೆವ್‌ (9–2) ಹಾಗೂ ತಜಿಕಿಸ್ತಾನದ ಬಖೊದುರ್‌ ಕೊದಿರೊವ್‌ (4–3) ಅವರನ್ನು ಚಿತ್ ಮಾಡಿದ್ದರು.

92 ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ಸಂಜೀತ್, ಕಂಚಿನ ಪದಕದ ಸುತ್ತಿನಲ್ಲಿ 11–8ರಿಂದ ಉಜ್ಬೆಕಿಸ್ತಾನದ ರುಸ್ತಮ್ ಶೊದೆವ್ ಅವರನ್ನು ಪರಾಭವಗೊಳಿಸಿದರು.

ಸಂಜೀತ್ ಅವರು ಮೊದಲ ಸುತ್ತಿನಲ್ಲಿ 9–4ರಿಂದ ಜಪಾನ್‌ನ ರಿಯೊಚಿ ಯಮನಕ ಅವರನ್ನು ಮಣಿಸಿದ್ದರು. ಆದರೆ ಬಳಿಕ ಇರಾನ್‌ನ ಕಮ್ರಾನ್ ಗೋರ್ಬನ್‌ ಘಾಸೆಂಪುರ್ ಎದುರು ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಸೋತರು. ಕಮ್ರಾನ್ ಅವರು ಫೈನಲ್‌ ತಲುಪಿದ್ದರಿಂದ ಸಂಜೀತ್‌ಗೆ ಕಂಚಿನ ಪದಕಕ್ಕಾಗಿ ಆಡುವ ಅವಕಾಶ ಲಭಿಸಿತ್ತು.

ರವಿಂದರ್ (61 ಕೆಜಿ) ಕಂಚಿನ ಪದಕದ ಪ್ಲೇ ಆಫ್‌ನಲ್ಲಿ ಕಿರ್ಗಿಸ್ತಾನದ ಇಕ್ರಮ್ಜೊನ್‌ ಖದಿಮುರೊದೊಯ್ ಎದುರು ಎಡವಿದರು. ಕಿರ್ಗಿಸ್ತಾನದ ಪೈಲ್ವಾನ್ ತಾಂತ್ರಿಕ ಶ್ರೇಷ್ಠತೆಯ ಆಧಾರದ ಗೆಲುವು ಒಲಿಸಿಕೊಂಡರು.

ಮೊದಲ ಸುತ್ತಿನ ಬೌಟ್‌ನಲ್ಲಿ ಇರಾನ್‌ನ ಮಜೀದ್‌ ದಸ್ತಾನ್ ಎದುರು 4–3ರಿಂದ ಗೆದ್ದಿದ್ದ ಭಾರತದ ರವಿಂದರ್‌, ನಾಲ್ಕರ ಘಟ್ಟದ ಹಣಾಹಣಿಯಲ್ಲಿ 4–7ರಿಂದ ಕಜಕಸ್ತಾನದ ಅದ್ಲಾನ್‌ ಆಕರೊಯ್‌ ಎದುರು ಸೋಲು ಕಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು