ಸೋಮವಾರ, ಸೆಪ್ಟೆಂಬರ್ 20, 2021
20 °C
ಹೆಚ್ಚಿನ ಜಿಲ್ಲೆಗಳ ದೈಹಿಕ ಶಿಕ್ಷಣ ಶಿಕ್ಷಕರಿಗಿಲ್ಲ ಚೆಸ್‌ನ ಗಂಧಗಾಳಿ

PV Web Exclusive | ನಿಯಮಗಳ ಬಗ್ಗೆ ಅಜ್ಞಾನ!

ನಾಗೇಶ್‌ ಶೆಣೈ Updated:

ಅಕ್ಷರ ಗಾತ್ರ : | |

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರಿಗೆ ಚೆಸ್‌ ನಿಯಮಗಳ ಅರಿವಿರಲಿಲ್ಲ. ಅವರು ನಿರ್ದಿಷ್ಟ ಅವಧಿ ಮುಗಿದ ತಕ್ಷಣ ಯಾರ ಬೋರ್ಡ್‌ನಲ್ಲಿ ಹೆಚ್ಚು  ಕಾಯಿಗಳಿವೆಯೊ ಅವರನ್ನು ವಿಜೇತರೆಂದು ಪ್ರಕಟಿಸುತ್ತಿದ್ದರು. ಯಾರು ಗೆಲುವಿನ ಸ್ಥಿತಿಯಲ್ಲಿದ್ದಾರೆ ಎಂದು ನೋಡುವ ಗೋಜಿಗೆ ಹೋಗುತ್ತಿರಲಿಲ್ಲ! ಧಾರವಾಡದ ಶಿಕ್ಷಕರೊಬ್ಬರು ಡಿಜಿಟಲ್‌ ಸಾಧನಗಳ ಬಳಕೆಗೆ ಚೆಸ್‌ನಲ್ಲಿ ಅವಕಾಶವಿಲ್ಲ ಎಂದು ತಾವೇ ನಿರ್ಧರಿಸಿ ‘ಕ್ಲಾಕ್‌’ಗಳ ಬಳಕೆಗೆ ನಿರ್ಬಂಧ ಹೇರಿದ್ದರು! ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲ್ಲೂಕಿನಲ್ಲಿ ಶಿಕ್ಷಕರೊಬ್ಬರು ಚೆಸ್‌ ಬೋರ್ಡ್‌ ಎದುರು ಇಬ್ಬರ ಮುಖಾಮುಖಿ ಬದಲು ತಲಾ ಐದು ಮಂದಿಯನ್ನು ಕೂರಿಸಿ ಆಡಿಸುತ್ತಿದ್ದರು. ಅವರೆಲ್ಲ ಚರ್ಚಿಸಿ ತಮ್ಮಲ್ಲಿ ಒಬ್ಬರಿಗೆ  ನಡೆಯನ್ನಿಡಲು ಅವಕಾಶ ಕೊಟ್ಟಿದ್ದರು!

ಇವು ಇತ್ತೀಚಿನ ವರ್ಷಗಳಲ್ಲಿ ಬೆಳಕಿಗೆ ಬಂದ ಕೆಲವು ಪ್ರಸಂಗಗಳಷ್ಟೇ. ದೈಹಿಕ ಶಿಕ್ಷಣ ಶಿಕ್ಷಕರಲ್ಲಿ ಹೆಚ್ಚಿನವರಿಗೆ ಈ ಆಟದ ಜ್ಞಾನ ಇಲ್ಲ. ಹೀಗಾಗಿ ಶಾಲಾ ಆಯ್ಕೆ ಟೂರ್ನಿಗಳ ವೇಳೆ ಇಂಥ ಪ್ರಕರಣಗಳು ನಡೆದಿವೆ. ಪಠ್ಯೇತರ ಚಟುವಟಿಕೆಯಾಗಿ ಈ ಆಟ ಬೆಳೆಸಲು ಸಾರ್ವಜನಿಕ ಶಿಕ್ಷಣ ಇಲಾಖೆಯೂ ಮುತುವರ್ಜಿ ವಹಿಸಲಿಲ್ಲ.

ಏಕಾಗ್ರತೆ, ತರ್ಕ ಶಕ್ತಿ ಬೆಳೆಸುವ ಆಟ ಎಂದೇ ಚದುರಂಗ ಪ್ರಸಿದ್ಧ. ಆದರೆ ರಾಜ್ಯದ ಶೇ 50ರಷ್ಟು ಜಿಲ್ಲೆಗಳಲ್ಲೇ ಚೆಸ್‌ನ ಅರಿವು ಇಲ್ಲ. ಅಲ್ಲಿ ಚೆಸ್‌ ಸಂಸ್ಥೆಗಳೇ ಇಲ್ಲ. ಇನ್ನು ಬಹುತೇಕ ಕಡೆ ಸಕ್ರಿಯವಾಗಿಲ್ಲ.ಇದು ಕ್ರಿಯಾಶೀಲವಾಗಿರುವುದು ಹೆಚ್ಚೆಂದರೆ 8–10 ಜಿಲ್ಲೆಗಳಲ್ಲಿ ಮಾತ್ರ.


ಪ್ರಾಣೇಶ್ ಯಾದವ್

‘ಬಹುತೇಕ ಕ್ರೀಡಾ ಶಿಕ್ಷಕರಿಗೆ ಟೂರ್ನಿಯನ್ನು ನಡೆಸಲು ಬರುವುದಿಲ್ಲ. ನೊಟೇಷನ್‌ (ನಡೆಗಳನ್ನು ಶಾಸ್ತ್ರೀಯ ಕ್ರಮದಲ್ಲಿ ನಮೂದಿಸುವುದು), ಪೇರಿಂಗ್ (ಆಟಗಾರರ ಮುಖಾಮುಖಿ ನಿರ್ಧರಿಸುವ ವಿಧಾನ), ಗಡಿಯಾರದ ಬಳಕೆ, ಬದಲಾಗುವ ನಿಯಮಗಳ ಬಗ್ಗೆ ದೈಹಿಕ ಶಿಕ್ಷಣ ಶಿಕ್ಷಕರಿಗೆ ಅಲ್ಪಾವಧಿ ಶಿಬಿರ, ತರಗತಿಗಳನ್ನು ನಡೆಸಬೇಕಾದ ಅಗತ್ಯವಿದೆ. ಇದರಿಂದ ಖಂಡಿತವಾಗಿ ಅನುಕೂಲವಾಗಲಿದೆ’ ಎನ್ನುತ್ತಾರೆ ಇಂಟರ್‌ನ್ಯಾಷನಲ್‌ ಆರ್ಬಿಟರ್‌, ಶಿವಮೊಗ್ಗದ ಪ್ರಾಣೇಶ್‌ ಯಾದವ್‌.

‘ನಾನು ಕೆಲವು ದೈಹಿಕ ಶಿಕ್ಷಣ ಶಿಕ್ಷಕರಿಗೆ ವಾಟ್ಸ್‌ಆ್ಯಪ್‌ ಮೂಲಕ ಮಾಹಿತಿಗಳನ್ನು ನೀಡಿದ್ದೇನೆ. ಆಗ ನನಗೆ ಅವರು ಮೇಲ್ಕಂಡ ಕೆಲವು ಅನುಭವಗಳನ್ನು ಹೇಳಿದರು’ ಎನ್ನುತ್ತಾರೆ ಯಾದವ್‌.

‘ಕ್ರೀಡಾ ಶಿಕ್ಷಕರಿಗೆ ಚೆಸ್‌ ಬಗ್ಗೆ ಪ್ರಾಥಮಿಕ ಜ್ಞಾನ ಇರಬೇಕು. ಅವರಿಗೆ ಕಬಡ್ಡಿ, ಕೊಕ್ಕೊ, ವಾಲಿಬಾಲ್‌ ಮೊದಲಾದ ಹೊರಾಂಗಣ ಕ್ರೀಡೆಗಳ ಬಗ್ಗೆ ಹೆಚ್ಚು ಆಸಕ್ತಿ. ಹೀಗಾಗಿ ಮಕ್ಕಳಿಗೆ ಚೆಸ್‌ನಲ್ಲಿ ಆಸಕ್ತಿ ಮೂಡುವುದಿಲ್ಲ’ ಎಂಬ ವಿಶ್ಲೇಷಣೆ ಮಂಜುನಾಥ ಜೈನ್‌ ಅವರದ್ದು.  ಅವರು ಹಲವು ವರ್ಷಗಳಿಂದ ಮಂಡ್ಯದಲ್ಲಿ ಚೆಸ್‌ ಅಕಾಡೆಮಿ ನಡೆಸಿಕೊಂಡು ಬಂದಿದ್ದಾರೆ.

ಮಕ್ಕಳ ಚೆಸ್‌ ಬೆಳವಣಿಗೆಯಲ್ಲಿ ಶಾಲಾ ಹಂತದಲ್ಲಿ ಸಿಗುವ ತರಬೇತಿ ಬಹಳ ಮುಖ್ಯ. ಇವು ಶಿಸ್ತುಬದ್ಧವಾಗಿ ಸಿಗುವುದು ಬೆಂಗಳೂರು ಸೇರಿದಂತೆ 3–4 ಜಿಲ್ಲೆಗಳಲ್ಲಿ ಮಾತ್ರ. ವಾರಕ್ಕೊಂದು ಎಂಬಂತೆ ರಾಜಧಾನಿಯಲ್ಲಿ ಟೂರ್ನಿಗಳು ನಡೆಯುತ್ತವೆ. ಕೊರೊನಾ ಕಾಲಘಟ್ಟವಾದ ಕಾರಣ ಈಗ ಆನ್‌ಲೈನ್‌ ಟೂರ್ನಿಗಳು ನಡೆಯುತ್ತಿವೆ. ಶಿವಮೊಗ್ಗ, ಮೈಸೂರು, ದಕ್ಷಿಣ ಕನ್ನಡ, ಮಂಡ್ಯ, ಉಡುಪಿ, ತುಮಕೂರು, ಧಾರವಾಡ, ಗುಲ್ಬರ್ಗದಲ್ಲಿ ಸ್ವಲ್ಪ ಚಟುವಟಿಕೆಗಳು ನಡೆಯುತ್ತಿವೆ.


ಹನುಮಂತ ಆರ್

ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಆಟ ಸಹಜವಾಗಿ ಬೆಳೆಯುತ್ತದೆ. ಇದು ಪ್ರೇಕ್ಷಕರನ್ನು ಸೆಳೆಯುವ ಆಟವಲ್ಲದ ಕಾರಣ ಇದಕ್ಕೆ ಪ್ರಾಯೋಜಕರ ಕೊರತೆಯೂ ಕಾಡುತ್ತಿದೆ ಎನ್ನುವ ಅಭಿಪ್ರಾಯ ಮಂಜುನಾಥ ಜೈನ್‌ ಅವರದು.

ಕೆಲವು ವರ್ಷಗಳ ಹಿಂದೆ ಚಿತ್ರದುರ್ಗದಲ್ಲಿ ನಡೆದ ಟೂರ್ನಿಯೊಂದರಲ್ಲಿ ಆಡಲು ಅವರು ತಮ್ಮ ಅಕಾಡೆಮಿಯ ಹಿರಿ–ಕಿರಿ ವಯಸ್ಸಿನ ಮಕ್ಕಳನ್ನು ಬಸ್‌ ಮಾಡಿಸಿ ಕರೆದುಕೊಂಡು ಬಂದಿದ್ದು ಎಲ್ಲರ ಗಮನ ಸೆಳೆದಿತ್ತು.

ನೆರೆಯ ತಮಿಳುನಾಡಿನಲ್ಲಿ ಪ್ರತಿ ತಾಲ್ಲೂಕುಗಳಲ್ಲೂ ಚೆಸ್‌ ಕ್ರಿಯಾಶೀಲವಾಗಿದೆ. ಹೀಗಾಗಿ ಟೂರ್ನಿಗಳು ಹೇರಳ ಪ್ರಮಾಣದಲ್ಲಿ ನಡೆಯುತ್ತಿರುತ್ತವೆ. ಪ್ರತಿಭಾವಂತ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಮೂಡಿಬರುತ್ತಿದ್ದಾರೆ. ತರಬೇತುದಾರರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅಲ್ಲಿ ಚೆಸ್‌ ಆಟಗಾರರ ಸಾಧನೆ ಪರಿಗಣಿಸಿ ಸೀಟು ನೀಡುವ ಕಾಲೇಜುಗಳಿವೆ. ದೇಶದ ಇಂಟರ್‌ನ್ಯಾಷನಲ್‌ ಮಾಸ್ಟರ್‌, ಗ್ರ್ಯಾಂಡ್‌ಮಾಸ್ಟರ್‌ ಆಟಗಾರರು ಅಲ್ಲಿಂದಲೇ ಹೆಚ್ಚು ಉದಯಿಸಿದ್ದಾರೆ.

ವಿಶಾಲ ನೆಲೆಯ ಕೊರತೆ: ಚೆಸ್‌ ರಾಜ್ಯದಲ್ಲಿ ವಿಶಾಲವಾದ ನೆಲೆ ಹೊಂದಿಲ್ಲ. ರಾಜ್ಯದ ಅಧಿಕೃತ ಚೆಸ್‌ ಸಂಸ್ಥೆಯಾದ ಯುನೈಟೆಡ್‌ ಕರ್ನಾಟಕ ಚೆಸ್‌ ಅಸೋಸಿಯೇಷನ್‌ನಲ್ಲಿ (ಯುಕೆಸಿಎ) 17 ಜಿಲ್ಲೆಗಳು ಮಾತ್ರ ನೋಂದಣಿ ಆಗಿವೆ. ಆದರೆ  ಎಲ್ಲಾ ಕಡೆ ವ್ಯವಸ್ಥಿತ ತರಬೇತಿ, ನಿಯಮಿತ ಟೂರ್ನಿಗಳು ನಡೆಯುವುದಿಲ್ಲ.

ಈ ಕೆಲವು ಜಿಲ್ಲೆಗಳಲ್ಲಿ ಶಾಸ್ತ್ರೀಯವಾಗಿ ಕಲಿತು ಚೆನ್ನಾಗಿ ಆಟವಾಡುವ ಮಕ್ಕಳ ಮುಂದೆ, ಏನೂ ವ್ಯವಸ್ಥೆಯಿಲ್ಲದ ಜಿಲ್ಲೆಗಳ ಮಕ್ಕಳು ಉತ್ತಮ ಪ್ರದರ್ಶನ ನೀಡಲು ಹೇಗೆ ಸಾಧ್ಯ? ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು, ಹಿಂದುಳಿದ ಜಿಲ್ಲೆಗಳಲ್ಲಿ ಚೆಸ್‌ ಬೆಳೆಸುವ ದೊಡ್ಡ ಸವಾಲು ಯುಕೆಸಿಎ ಮುಂದೆ ಇದೆ. ಈಗ ಉತ್ಸಾಹಿ ತಂಡವಿದೆ. ಇವರಲ್ಲಿ ಬಹುತೇಕ ಮಂದಿ ಚೆಸ್‌ ಆಟಗಾರರಾಗಿ, ನಂತರ ತರಬೇತುದಾರರಾದವರು.

ಯುಕೆಸಿಎ, ಅಸ್ತಿತ್ವಕ್ಕೆ ಬಂದ ಮೇಲೆ ಜಿಲ್ಲೆಗಳಲ್ಲಿ ಸಂಸ್ಥೆಗಳನ್ನು ರೂಪಿಸುತ್ತಿದೆ. ಶಿಬಿರಗಳನ್ನು ನಡೆಸಲು ಯೋಜನೆ ಹಾಕಿಕೊಂಡಿದೆ ಎಂದು ಕೆಲವು ಹಿರಿಯ ಆಟಗಾರರು ಹೇಳುತ್ತಾರೆ.

ಮಹತ್ವಾಕಾಂಕ್ಷಿ ಯೋಜನೆ: ‘ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದಾಗ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಗೆ ಒಂದು ತಿಂಗಳ ತರಬೇತಿ ನೀಡುವ ಯೋಜನೆಯಿತ್ತು. ಆದರೆ ಅವರು ಸಂಸ್ಥೆಯಿಂದ ಪ್ರಮಾಣಪತ್ರವನ್ನೂ ನೀಡಬೇಕೆಂದು ಹೇಳಿದರು. ಪ್ರಮಾಣಪತ್ರ ನಾವು ನೀಡುವುದು ಹೇಗೆ? ಹೀಗಾಗಿ ಈ ಯೋಜನೆ ಜಾರಿಯಾಗಲಿಲ್ಲ’ ಎಂದು ಯುಕೆಸಿಎ ಸಿಇಒ ಅರವಿಂದ ಶಾಸ್ತ್ರಿ ಹೇಳುತ್ತಾರೆ.

ಅಖಿಲ ಭಾರತ ಚೆಸ್‌ ಫೆಡರೇಷನ್‌ (ಎಐಸಿಎಫ್‌) ವೆಬ್‌ಸೈಟ್‌ನಲ್ಲೇ ‘ಚೆಸ್ ಇನ್‌ ಸ್ಕೂಲ್ಸ್‌’ ಎಂಬ ಯೋಜನೆಯ ವಿವರ ಇದೆ. ಈ ಯೋಜನೆ ಚೆನ್ನಾಗಿದೆ. ಕಲಿತವರಿಗೆ ಫಿಡೆಯ ಪ್ರಮಾಣಪತ್ರವೂ ದೊರೆಯುತ್ತದೆ. ಆದರೆ ಎಐಸಿಎಫ್‌ನಲ್ಲೇ ಈಗ ಅಧಿಕಾರಕ್ಕಾಗಿ ‘ರಾಜಕೀಯ ಚದುರಂಗದಾಟ’ ನಡೆಯುತ್ತಿದೆ.

‘ಚೆಸ್‌ ಇನ್‌ ಸ್ಕೂಲ್ಸ್‌ಈ ಯೋಜನೆ ಜಾರಿಗೆ ಕೆಲವು ಸರ್ಕಾರಗಳು ಆಸಕ್ತಿ ವಹಿಸಿವೆ. ಕರ್ನಾಟಕದಲ್ಲೂ ಇದು ಜಾರಿಗೆ ಬಂದರೆ ತರಬೇತು ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಸಿಗಲಿದೆ’ ಎಂದು ಅವರು ಹೇಳುತ್ತಾರೆ.

‘ಜಿಲ್ಲೆಗಳಲ್ಲಿ ಚೆಸ್‌ ಚಟುವಟಿಕೆ ಬಲಗೊಳಿಸಬೇಕೆಂಬುದು ನಮ್ಮ ನಿಲುವು ಕೂಡ. ಮೂರು ಜಿಲ್ಲೆಗಳಿಗೆ ಒಂದರಂತೆ ಕಾರ್ಯಾಗಾರ ಆಯೋಜಿಸುವ ಉದ್ದೇಶವಿದೆ. ಇದಕ್ಕೆ ನಾವೂ ನೆರವು ನೀಡುತ್ತೇವೆ. ನಮಗೆ ಅಂಥ ಶಿಬಿರಕ್ಕೆ ಜಾಗ ಒದಗಿಸಿಕೊಟ್ಟರೆ ಸಾಕು’ ಎನ್ನುತ್ತಾರೆ.

ಬೆಂಗಳೂರಿನಲ್ಲಿ ಗೇರ್‌ ಇಂಟರ್‌ನ್ಯಾಷನಲ್‌, ಸಿಲಿಕಾನ್‌ ಸಿಟಿ, ಅರವಿಂದೊ ಮೊದಲಾದ ಶಾಲೆಗಳು ಚದುರಂಗದ ಆಟವನ್ನು ಪಠ್ಯೇತರ ಚಟುವಟಿಕೆ ಎಂದು ಪರಿಗಣಿಸಿ ತರಬೇತಿಗೆ ಅವಕಾಶ ನೀಡಿವೆ.

‘ಯುಕೆಸಿಎ ಕಡೆಯಿಂದಲೂ ನಾವು ಉಚಿತವಾಗಿ ಆನ್‌ಲೈನ್‌ ತರಬೇತಿ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ. ಈಗಾಗಲೇ ರೇಟೆಡ್‌ ಆಟಗಾರರಿಗೆ ಗ್ರ್ಯಾಂಡ್‌ಮಾಸ್ಟರ್‌ ಆಟಗಾರರಿಂದ ಒಂದು ತಿಂಗಳ ಉಚಿತ ತರಗತಿಗಳನ್ನು ನಡೆಸಿದ್ದೇವೆ. ಹೊಸಬರಿಗೂ 100 ಮಂದಿಯ ತಂಡ ಮಾಡಿ ನಿಪುಣ ಕೋಚ್‌ಗಳಿಂದ ಆನ್‌ಲೈನ್‌ ತರಬೇತಿ ನೀಡುತ್ತೇವೆ. ದಿನಾಂಕ ನಿರ್ಧರಿಸುವುದು ಬಾಕಿಯಿದೆ’ ಎನ್ನುತ್ತಾರೆ ಅರವಿಂದ ಶಾಸ್ತ್ರಿ.

‘ಶಿಕ್ಷಣ ಇಲಾಖೆಯಿಂದ ನಮಗೆ ಮನವಿ ಅಥವಾ ಆಹ್ವಾನ ಬಂದರೆ ಜಿಲ್ಲೆಗಳಲ್ಲಿ ಕೋಚಿಂಗ್‌ ಕ್ಯಾಂಪ್‌ ಮಾಡಲು ನಾವು ಸಿದ್ಧ. ಅವರು ಯಾವುದೇ ನೆರವು ಕೇಳಲಿ, ನಮ್ಮ ಕಡೆಯಿಂದ ನೀಡುತ್ತೇವೆ. ಶಿಕ್ಷಣ ಇಲಾಖೆ ಟೂರ್ನಿ ನಡೆಸಿದಾಗ ನಾವು ಕ್ಲಾಕ್‌ಗಳನ್ನು ನೀಡಿದ್ದೇವೆ’ ಎನ್ನುತ್ತಾರೆ ಯುಕೆಸಿಎ ಪ್ರಧಾನ ಕಾರ್ಯದರ್ಶಿ ಹನುಮಂತ ಆರ್‌.

‘ಜಿಲ್ಲೆಗಳಲ್ಲಿ ಚೆಸ್‌ ಬೆಳೆಸಲು ನಾವು ಶ್ರಮ ವಹಿಸುತ್ತಿದ್ದೇವೆ. ಕೋವಿಡ್‌ನಿಂದಾಗಿ ನಮ್ಮ ಕೆಲವು ಯೋಜನೆಗಳು ನಿಂತುಹೋದವು. ಕೋವಿಡ್‌ ನಿಯಂತ್ರಣಕ್ಕೆ ಬಂದ ಮೇಲೆ ಜಿಲ್ಲೆಗಳಲ್ಲೂ ಚೆಸ್‌ ಆಟ ಬೆಳೆಸಲು ನಾವು ಕ್ರಮ ಕೈಗೊಳ್ಳುತ್ತೇವೆ. ನಮ್ಮ ಗಮನವೂ ಹಿಂದುಳಿದ ಜಿಲ್ಲೆಗಳ ಮೇಲಿದೆ’ ಎನ್ನುತ್ತಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು