ಬುಧವಾರ, ಜೂನ್ 16, 2021
21 °C
ಬಲ್ಗೇರಿಯಾದಲ್ಲಿ ಇಂದಿನಿಂದ ಒಲಿಂಪಿಕ್ಸ್ ಅರ್ಹತಾ ಕುಸ್ತಿ

ಟೋಕಿಯೊ ಟಿಕೆಟ್‌ನತ್ತ ಅಮಿತ್ ಧನಕರ್‌ ಚಿತ್ತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸೋಫಿಯಾ, ಬಲ್ಗೇರಿಯಾ: ಭಾರತದ ಅನುಭವಿ ಪೈಲ್ವಾನ್‌ ಅಮಿತ್ ಧನಕರ್ ಅವರು ಟೋಕಿಯೊ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದು, ಗುರುವಾರ ಇಲ್ಲಿ ಆರಂಭವಾಗಲಿರುವ ವಿಶ್ವ ಒಲಿಂಪಿಕ್ಸ್ ಅರ್ಹತಾ ಕುಸ್ತಿಯಲ್ಲಿ ಸೆಣಸಲಿದ್ದಾರೆ. ಅವರೊಂದಿಗೆ ಭಾರತದ 11 ಕುಸ್ತಿಪಟುಗಳು ಕಣಕ್ಕಿಳಿಯುತ್ತಿದ್ದಾರೆ.

32 ವರ್ಷದ ಅಮಿತ್‌ ಅವರು ಮೂರು ಬಾರಿ ಕಾಮನ್‌ವೆಲ್ತ್ ಚಾಂಪಿಯನ್ ಆದವರು. ಆದರೆ 66 ಕೆಜಿ ವಿಭಾಗದಲ್ಲಿ ಯೋಗೇಶ್ವರ್ ದತ್ತ ಅವರೊಂದಿಗೆ ಪೈಪೋಟಿ ನಡೆಸುವ ಕಾರಣ ಹಲವು ಬಾರಿ ಅವರಿಗೆ ಪ್ರಮುಖ ಟೂರ್ನಿಗಳ ಟಿಕೆಟ್ ಕೈತಪ್ಪಿವೆ.

ಅಮಿತ್ ಅವರು ಚೀನಾದ ಕ್ಸಿಯಾನ್‌ನಲ್ಲಿ ನಡೆದ 2019ರ ಏಷ್ಯನ್ ಚಾಂಪಿಯನ್‌ಷಿಪ್‌ನ 74 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.

ರಾಷ್ಟ್ರೀಯ ಟ್ರಯಲ್ಸ್‌ನಲ್ಲಿ ಸೋತಿದ್ದ ಅಮಿತ್‌ ಅವರಿಗೆ ಒಲಿಂಪಿಕ್ಸ್ ಪ್ರವೇಶದ ಅವಕಾಶದ ಬಾಗಿಲು ಮುಚ್ಚಿತ್ತು. ಆದರೆ ರಾಷ್ಟ್ರೀಯ ಚಾಂಪಿಯನ್ ಸಂದೀಪ್ ಸಿಂಗ್ ಮಾನ್ ಅವರು ಅಲ್ಮಾಟಿಯಲ್ಲಿ ನಡೆದ ಏಷ್ಯನ್ ಕ್ವಾಲಿಫೈಯರ್‌ನಲ್ಲಿ ಸೋತ ಬಳಿಕ, ಅಮಿತ್ ಸ್ಪರ್ಧೆಗೆ  ರಾಷ್ಟ್ರೀಯ ಫೆಡರೇಷನ್ ಅನುಮತಿ ನೀಡಿದೆ.

ಧನಕರ್‌ ಟ್ರಯಲ್ಸ್‌ನಲ್ಲಿ ಎರಡನೇ ಸ್ಥಾನ ಗಳಿಸಿದ್ದರಿಂದ ಈ ಅವಕಾಶ ಲಭ್ಯವಾಗಿದೆ.

ಜುಲೈನಲ್ಲಿ ಆರಂಭವಾಗಲಿರುವ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು ಇದು ಕೊನೆಯ ಅವಕಾಶವಾಗಿದೆ.

ವಿವಿಧ ತೂಕ ವಿಭಾಗಗಳಲ್ಲಿ ವಿಶ್ವದ ಏಳು ಮಂದಿ ಒಲಿಂಪಿಕ್ಸ್ ಪದಕ ವಿಜೇತ ಪೈಲ್ವಾನರು ಇಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಇಬ್ಬರು ಫೈನಲಿಸ್ಟ್‌ಗಳು ಟೋಕಿಯೊಗೆ ತೆರಳಲು ಟಿಕೆಟ್ ಗಳಿಸುತ್ತಾರೆ.

2018ರ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್‌ ಸುಮಿತ್ ಮಲಿಕ್‌ (125 ಕೆಜಿ ವಿಭಾಗ), ಸತ್ಯವರ್ತ್ ಕಡಿಯಾನ್‌ (97 ಕೆಜಿ) ಅವರು ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಲಿರುವ ಭಾರತದ ಇನ್ನುಳಿದ ಇಬ್ಬರು ಕುಸ್ತಿಪಟುಗಳು.

ಮಹಿಳಾ ವಿಭಾಗದಲ್ಲಿ ಸೀಮಾ ಬಿಸ್ಲಾ (50 ಕೆಜಿ), ನಿಶಾ (68 ಕೆಜಿ), ಪೂಜಾ (76 ಕೆಜಿ) ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

ಗ್ರೀಕೊ ರೋಮನ್ ವಿಭಾಗದಲ್ಲಿ ಏಷ್ಯನ್ ಚಾಂಪಿಯನ್‌ ಗುರುಪ್ರೀತ್ ಸಿಂಗ್‌ (77 ಕೆಜಿ), ಸಚಿನ್ ರಾಣಾ (60 ಕೆಜಿ), ಆಶು (67ಕೆಜಿ), ಸುನಿಲ್ (87 ಕೆಜಿ), ದೀಪಾಂಶು (97 ಕೆಜಿ), ನವೀನ್ ಕುಮಾರ್ (130 ಕೆಜಿ) ಕಣಕ್ಕಿಳಿಯಲಿದ್ದಾರೆ.

ಭಾರತದ ಆರು ಕುಸ್ತಿಪಟುಗಳು ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಫ್ರೀಸ್ಟೈಲ್ ವಿಭಾಗದಲ್ಲಿ ಬಜರಂಗ್ ಪೂನಿಯಾ (65 ಕೆಜಿ), ರವಿ ದಹಿಯಾ (57 ಕೆಜಿ) ಹಾಗೂ ದೀಪಕ್ ಪೂನಿಯಾ (86 ಕೆಜಿ), ಮಹಿಳಾ ವಿಭಾಗದಲ್ಲಿ ವಿನೇಶಾ ಪೋಗಟ್‌ (53ಕೆಜಿ), ಅನ್ಶು ಮಲಿಕ್‌ (57 ಕೆಜಿ) ಹಾಗೂ ಸೋನಂ ಮಲಿಕ್‌ (62 ಕೆಜಿ) ಟೋಕಿಯೊ ಟಿಕೆಟ್ ಗಿಟ್ಟಿಸಿದವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು