ಬುಧವಾರ, ಏಪ್ರಿಲ್ 14, 2021
24 °C
ಮಿಂಚಿದ ಹಸ್ಸಾನ್‌, ಅಮೊಸ್‌

ಡೈಮಂಡ್‌ ಲೀಗ್‌: ನೋವಾ ಹಿಂದಿಕ್ಕಿದ ಗ್ಯಾಟ್ಲಿನ್‌

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಮೊನಾಕೊ: ಉದಯೋನ್ಮುಖ ಸ್ಪ್ರಿಂಟರ್‌ ನೊವಾ ಲೈಲ್ಸ್‌ ಅವರನ್ನು ಕೂದಲೆಳೆ ಅಂತರದಲ್ಲಿ ಹಿಂದೆಹಾಕಿದ ಅಮೆರಿಕದ ವಿವಾದಾತ್ಮಕ ಓಟಗಾರ ಜಸ್ಟಿನ್‌ ಗ್ಯಾಟ್ಲಿನ್‌, ಶುಕ್ರವಾರ ರಾತ್ರಿ ನಡೆದ ಡೈಮಂಡ್‌ ಲೀಗ್‌ ಕೂಟದ 100 ಮೀಟರ್‌ ಓಟದಲ್ಲಿ ಮೊದಲಿಗರಾದರು. ಮಹಿಳೆಯರ ವಿಭಾಗದ ಮೈಲು ಅಂತರದ ಓಟವನ್ನು ಸಿಫಾನ್‌ ಹಸ್ಸಾನ್‌ ವಿಶ್ವ ದಾಖಲೆ ಅವಧಿಯಲ್ಲಿ ಕ್ರಮಿಸಿದರು.

ಹಿತಕರ ವಾತಾವರಣದಲ್ಲಿ ಓಡಿದ 37 ವರ್ಷದ ಗ್ಯಾಟ್ಲಿನ್‌ ತಮ್ಮ ಉತ್ತಮ ಫಾರ್ಮ್‌ ಜೊತೆ ಒತ್ತಡ ತಾಳಿಕೊಂಡು 9.91 ಸೆಕೆಂಡುಗಳಲ್ಲಿ ದೂರವನ್ನು ಕ್ರಮಿಸಿದರು. ನಿರೀಕ್ಷೆಯಂತೆ 21ರ ಹರೆಯದ ಲೈಲ್ಸ್‌ ತೀವ್ರ ಪೈಪೋಟಿ ನೀಡಿದರೂ, ಸೆಕೆಂಡಿನ ನೂರನೇ ಒಂದು ಭಾಗದಿಂದ ಎರಡನೇ ಸ್ಥಾನಕ್ಕೆ ಸರಿದರು.  

2004ರ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಹಾಗೂ ಹಾಲಿ ವಿಶ್ವ ಚಾಂಪಿಯನ್‌ ಗ್ಯಾಟ್ಲಿನ್‌, ಉದ್ದೀಪನ ಮದ್ದು ಸೇವನೆ ಸಾಬೀತಾದ ಕಾರಣ 2006–10ರ ಅವಧಿಯಲ್ಲಿ ಗ್ಯಾಟ್ಲಿನ್‌ ನಿಷೇಧಕ್ಕೆ ಒಳಗಾಗಿದ್ದರು.

ಮಹಿಳೆಯರ ಮೈಲು ದೂರದ (1,609 ಮೀ) ಓಟದಲ್ಲಿ ಇಥಿಯೋಪಿಯಾ ಸಂಜಾತ ಹಾಲೆಂಡ್‌ನ ಓಟಗಾರ್ತಿ ಹಸಾನ್‌, 4ನಿ.12.33 ಸೆಕೆಂಡುಗಳ ಸಾಧನೆಯೊಡನೆ 0.23 ಸೆಕೆಂಡುಗಳಿಂದ ಹಳೆಯ ದಾಖಲೆ ಮುರಿದರು. 1996ರಲ್ಲಿ ರಷ್ಯದ ಸ್ವೆತ್ಲಾನಾ ಮಾಸ್ಟರಕೋವಾ ಈ ಹಿಂದಿನ ದಾಖಲೆಯ ಒಡತಿಯಾಗಿದ್ದರು.

ಎರಡು ಸುತ್ತುಗಳಿರುವಂತೆ ಇತರ ಸ್ಪರ್ಧಿಗಳನ್ನು ಹಿಂದೆ ಹಾಕಿದ ನಂತರ ಹಸ್ಸಾನ್‌ ಅಗ್ರಸ್ಥಾನ ಬಿಟ್ಟುಕೊಡಲಿಲ್ಲ.

‘ಮೊದಲ 800 ಮೀ.ವರೆಗೆ ಸ್ವಲ್ಪ ನಿಧಾನಗತಿಯಲ್ಲಿ ಓಡಿದ್ದೆ. ವಿಶ್ವದಾಖಲೆಯ ಯೋಚನೆಯೇ ನನಗೆ ಬಂದಿರಲಿಲ್ಲ. ನಾನು ಅಂತಿಮ ರೇಖೆ ದಾಟುತ್ತಿದ್ದಂತೆ ಡಿಸ್‌ಪ್ಲೇ ನೋಡಿ ನನಗೆ ಅಚ್ಚರಿಯಾಯಿತು’ ಎಂದು ಹಸ್ಸಾನ್‌ ಹೇಳಿದರು. 

ದೋಹಾದಲ್ಲಿ ಸೆಪ್ಟೆಂಬರ್‌ 28 ರಿಂದ ಅಕ್ಟೋಬರ್‌ 6ರವರೆಗೆ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ, ಹಸ್ಸಾನ್‌ 1,500 ಮೀ. ಮತ್ತು 5,000 ಮೀ. ಓಟಗಳಲ್ಲಿ ಚಿನ್ನದ ಪದಕಗಳ ಮೇಲೆ ಕಣ್ಣಿಟ್ಟಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು