ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಡಬಲ್ಸ್ ಸ್ಕ್ವಾಷ್‌ ಚಾಂಪಿಯನ್‌ಷಿಪ್‌: ಅವಳಿ ಮಕ್ಕಳ ತಾಯಿಗೆ ಡಬಲ್‌ ಚಿನ್ನ

ಮಿಶ್ರ, ಮಹಿಳೆಯರ ವಿಭಾಗದಲ್ಲಿ ಸಾಧನೆ; ಸೌರವ್, ಜ್ಯೋತ್ಸ್ನಾ ಮಿಂಚು
Last Updated 9 ಏಪ್ರಿಲ್ 2022, 16:20 IST
ಅಕ್ಷರ ಗಾತ್ರ

ಗ್ಲಾಸ್ಗೊ, ಸ್ಕಾಟ್ಲೆಂಡ್‌: ಅವಳಿ ಮಕ್ಕಳಿಗೆ ಜನ್ಮ ನೀಡಿದ ನಂತರ ಇದೇ ಮೊದಲ ಬಾರಿ ಕಣಕ್ಕೆ ಇಳಿದ ಭಾರತದ ಸ್ಕ್ವಾಷ್ ಪಟು ದೀಪಿಕಾ ಪಳ್ಳಿಕ್ಕಲ್ ಡಬಲ್ ಚಿನ್ನದ ಸಾಧನೆ ಮಾಡಿ ಸಂಭ್ರಮಿಸಿದರು.

ಶನಿವಾರ ಮುಕ್ತಾಯಗೊಂಡ ಡಬ್ಲ್ಯುಎಸ್‌ಎಫ್‌ ವಿಶ್ವ ಸ್ಕ್ವಾಷ್‌ ಡಬಲ್ಸ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಡಬಲ್ಸ್ ಮತ್ತು ಮಿಶ್ರ ಡಬಲ್ಸ್‌ ವಿಭಾಗಗಳಲ್ಲಿ ಅವರು ಚಾಂಪಿಯನ್ ಪಟ್ಟ ಅಲಂಕರಿಸಿಕೊಂಡರು.

ಮಿಶ್ರ ಡಬಲ್ಸ್‌ನಲ್ಲಿ ಸೋದರ್ ಸಂಬಂಧಿ ಸೌರವ್ ಘೋಷಾಲ್ ಅವರೊಂದಿಗೆ ಕಣಕ್ಕೆ ಇಳಿದ ಅವರು ಫೈನಲ್‌ನಲ್ಲಿ 11–6, 11–8ರಲ್ಲಿ ಇಂಗ್ಲೆಂಡ್‌ನ ಅಡ್ರಯನ್ ವ್ಯಾಲರ್ ಮತ್ತು ಅಲಿಸನ್ ವಾಟರ್ಸ್ ಜೋಡಿಯನ್ನು ಮಣಿಸಿದರು. ಮಹಿಳೆಯರ ಡಬಲ್ಸ್‌ನಲ್ಲಿ ಬಹುಕಾಲದ ಜೊತೆಗಾತಿ ಜ್ಯೋತ್ಸ್ನಾ ಚಿನ್ನಪ್ಪ ಅವರ ಜೊತೆ ದೀಪಿಕಾ ಆಡಿದ್ದರು. ಫೈನಲ್‌ನಲ್ಲಿ 11–9, 4–11, 11–8ರಲ್ಲಿ ಇಂಗ್ಲೆಂಡ್‌ನ ಸಾರಾ ಜೇನ್ ಪೆರಿ ಮತ್ತು ಅಲಿಸನ್ ವಾಟರ್ಸ್ ಜೋಡಿಯನ್ನು ಮಣಿಸಿದರು.

2018ರ ಅಕ್ಟೋಬರ್ ನಂತರ ಇದೇ ಮೊದಲ ಬಾರಿ ಸ್ಪರ್ಧಾತ್ಮಕ ಸ್ಕ್ವಾಷ್ ಆಡಿದ ದೀಪಿಕಾ ಅವರು ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೆಮ್ಸ್‌ಗೆ ಕೆಲವೇ ತಿಂಗಳು ಉಳಿದಿರುವಾಗ ಮಾಡಿರುವ ಸಾಧನೆ ಭರವಸೆ ಮೂಡಿಸಿದೆ. ಸೌರವ್ ಘೋಷಾಲ್ ಮತ್ತು ಜ್ಯೋತ್ಸ್ನಾ ಅವರ ಮೇಲೆಯೂ ನಿರೀಕ್ಷೆ ಮೂಡಿದೆ.

2014ರ ಕಾಮನ್ವೆಲ್ತ್ ಗೇಮ್ಸ್‌ನ ಮಹಿಳಾ ವಿಭಾಗದ ಡಬಲ್ಸ್‌ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ದೀಪಿಕಾ ಮತ್ತು ಜ್ಯೋತ್ಸ್ನಾ ಇತಿಹಾಸ ನಿರ್ಮಿಸಿದ್ದರು.

ಶುಕ್ರವಾರ ನಡೆದ ಮಿಶ್ರ ಡಬಲ್ಸ್‌ ಸೆಮಿಫೈನಲ್‌ನಲ್ಲಿ ದೀಪಿಕಾ–ಸೌರವ್ 11–9, 11–5ರಿಂದ ವೇಲ್ಸ್‌ನ ಜೋಯಲ್ ಮಾಕಿನ್ ಮತ್ತು ತೇಸ್ನಿ ಇವಾನ್ಸ್ ಅವರನ್ನು ಮಣಿಸಿದ್ದರು. ಮಹಿಳಾ ಡಬಲ್ಸ್‌ನ ನಾಲ್ಕರ ಘಟ್ಟದ ಪಂದ್ಯದಲ್ಲಿ ದೀಪಿಕಾ ಮತ್ತು ಜ್ಯೋತ್ಸ್ನಾ ವಿರುದ್ಧ ಕಣಕ್ಕಿಳಿಯಬೇಕಿದ್ದ ನ್ಯೂಜಿಲೆಂಡ್‌ನ ಜೋಯಲ್‌ ಕಿಂಗ್–ಅಮಂಡಾ ಲ್ಯಾಂಡರ್ಸ್ ಮರ್ಫಿ ಗಾಯಗೊಂಡು ಹಿಂದೆ ಸರಿದಿದ್ದರು. ಹೀಗಾಗಿ ಭಾರತದ ಜೋಡಿಗೆ ವಾಕ್ ಓವರ್ ಲಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT