ಗುರುವಾರ , ಮೇ 13, 2021
16 °C
ಫೆಡರೇಷನ್‌ಗಳಿಗೆ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಸೂಚನೆ

ಅರ್ಹತಾ ಟೂರ್ನಿಗಳ ದಿನಾಂಕ ಅಂತಿಮಗೊಳಿಸಿ

ಪಿಟಿಐ Updated:

ಅಕ್ಷರ ಗಾತ್ರ : | |

ಲೂಸನ್‌: ಟೋಕಿಯೊ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಗಳ ದಿನಾಂಕ ಅಂತಿಮಗೊಳಿಸುವಂತೆ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯು (ಐಒಸಿ) ಅಂತರರಾಷ್ಟ್ರೀಯ ಫೆಡರೇಷನ್‌ಗಳನ್ನು ಸೂಚಿಸಿದೆ. ಕೊರೊನಾ ಸೋಂಕಿನ ಹಾವಳಿಯ ಮಧ್ಯೆ ಆಕಸ್ಮಿಕ ಹಾಗೂ ಸಂಭಾವ್ಯ ರದ್ದಾಗುವ ಟೂರ್ನಿಗಳ ಕುರಿತು ಮುಂಚಿತವಾಗಿ ಕರಡು ಸಿದ್ಧಪಡಿಸಲು ಇದರಿಂದ ಅನುಕೂಲವಾಗಲಿದೆ ಎಂದು ಐಒಸಿ ಹೇಳಿದೆ.

‘ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವ ಟೋಕಿಯೊ ಕೂಟಕ್ಕೆ ಅರ್ಹತೆ ಗಳಿಸಲು 2021ರ ಜೂನ್‌ 29 ಅಂತಿಮ ಗಡುವು’ ಎಂದು ಹೋದ ತಿಂಗಳು ಐಒಸಿ ತಿಳಿಸಿತ್ತು.

‘ಇನ್ನೂ ಕೆಲವು ಟೂರ್ನಿಗಳ ದಿನಾಂಕ ಹಾಗೂ ಸ್ಥಳಗಳನ್ನು ನಿರ್ಧರಿಸಬೇಕಾಗಿದೆ. ಹಾಗಾಗಿ ಒಂದೊಮ್ಮೆ ಟೂರ್ನಿಗಳು ನಡೆಯುವ ದಿನಾಂಕ ಮತ್ತು ಸ್ಥಳಗಳನ್ನು ಖಚಿತಪಡಿಸಲು ಪ್ರಾರಂಭಿಸಿದ ಬಳಿಕ ನಮಗೆ ಮಾಹಿತಿ ನೀಡಿದರೆ ಸಾಧ್ಯವಾದಷ್ಟು ಶೀಘ್ರ ಅದನ್ನು ಅರ್ಹತಾ ಟೂರ್ನಿಗಳ ಪರಿಧಿಯೊಳಗೆ ತರಲು ಹಾಗೂ ಕರಡು ಯೋಜನೆ ಸಿದ್ಧಪಡಿಸಲು ಅನುಕೂಲವಾಗಲಿದೆ’ ಎಂದು ಐಒಸಿ ಪ್ರಕಟಣೆಯಲ್ಲಿ ಹೇಳಿದೆ.

ಜುಲೈಯೊಳಗೆ ಈ ಕುರಿತು ಯೋಜನೆ ರೂಪಿಸುವ ವಿಶ್ವಾಸವನ್ನು ಐಒಸಿ ವ್ಯಕ್ತಪಡಿಸಿದೆ.

‘ಜುಲೈನಲ್ಲಿ ಈ ಯೋಜನೆ ಸಿದ್ಧಪಡಿಸಲಾಗುವುದು. ಕೋವಿಡ್‌–19 ಪಿಡುಗಿನಿಂದ ಉಂಟಾದ ಜಾಗತಿಕ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಅವಲೋಕಿಸಿ,  ಈ ಯೋಜನೆಗಳನ್ನು ಜಾರಿಗೊಳಿಸುವುದು ಅಗತ್ಯವೇ ಎಂಬುದನ್ನು ಫೆಡರೇಷನ್‌ಗಳೊಂದಿಗೆ ಚರ್ಚಿಸಲಾಗುವುದು. ಎಲ್ಲರ ಸಮ್ಮತಿಯ ಮೇರೆಗೆ ಒಲಿಂಪಿಕ್ಸ್‌ನ ಅರ್ಹತಾ ವ್ಯವಸ್ಥೆಗೆ ಸೇರಿಸಲಾಗುವುದು’ ಎಂದು ಐಒಸಿ ತಿಳಿಸಿದೆ.

ಅರ್ಹತಾ ವ್ಯವಸ್ಥೆಯಗಳ ಅಗತ್ಯ ಬದಲಾವಣೆಗಳನ್ನು ಅಂತಿಮಗೊಳಿಸಲು ಐಒಸಿಯ ಕ್ರೀಡಾ ಇಲಾಖೆ ಹಾಗೂ ಅಂತರರಾಷ್ಟ್ರೀಯ ಫೆಡರೇಷನ್‌ಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. 2018ರ ಫೆಬ್ರುವರಿಯಲ್ಲಿ ಐಒಸಿಯ ಕಾರ್ಯಕಾರಿ ಮಂಡಳಿಯು ಅನುಮೋದಿಸಿದ ಅರ್ಹತಾ ವ್ಯವಸ್ಥೆಗೆ ಸಾಧ್ಯವಾದಷ್ಟು ಹತ್ತಿರವಿರುವ ವ್ಯವಸ್ಥೆಯನ್ನು ರಚಿಸುವ ಉದ್ದೇಶವನ್ನು ಅವು ಹೊಂದಿವೆ.

 

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು