ಸೋಮವಾರ, ಅಕ್ಟೋಬರ್ 18, 2021
25 °C
ಬಳ್ಳಾರಿಯಲ್ಲಿ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್: ಎಂಟರಘಟ್ಟಕ್ಕೆ ಅಂಕಿತ್‌

ಬಾಕ್ಸಿಂಗ್: ಕ್ವಾರ್ಟರ್‌ಫೈನಲ್‌ಗೆ ಶಿವ ಥಾಪಾ; ಗೌರವ್ ಪರಾಭವ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ಐದು ಬಾರಿಯ ಏಷ್ಯನ್ ಪದಕ ವಿಜೇತ ಶಿವ ಥಾಪಾ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಆದರೆ ಗೌರವ್ ಬಿಧುರಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.

ಇಲ್ಲಿಯ ಇನ್ಸ್ಪಾಯರ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಮೂರನೇ ದಿನವಾದ ಶುಕ್ರವಾರ ಅಸ್ಸಾಂ ತಂಡವನ್ನು ಪ್ರತಿನಿಧಿಸುವ ಶಿವ, 63.5 ಕೆಜಿ ವಿಭಾಗದ ಮೊದಲ ಸುತ್ತಿನ ಬೌಟ್‌ನಲ್ಲಿ ಎಸ್‌ಪಿಎಸ್‌ಬಿಯ ಶುಭಂ ಮಮ್ತಾ ಅವರನ್ನು ಪರಾಭವಗೊಳಿಸಿದರು. ರಿಂಗ್‌ನಲ್ಲಿ ಸಮತೋಲನ ತಪ್ಪಿ ಬಿದ್ದ ಶುಭಂ ಅವರು ವೈದ್ಯರಿಂದ ಚಿಕಿತ್ಸೆ ಪಡೆದರು.

‘ಶುಭಂ ಅವರಿಗೆ ನೋವಿದೆ. ಆದರೂ ಆರೋಗ್ಯವಾಗಿದ್ದಾರೆ. ನಾಳೆ ಮತ್ತೊಮ್ಮೆ ಅವರನ್ನು ಪರೀಕ್ಷಿಸಲಾಗುವುದು‘ ಎಂದು ಟೂರ್ನಿ ಆಯೋಜನೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಈ ಹಿಂದೆ ಕಂಚಿನ ಪದಕ ಗೆದ್ದಿದ್ದ ಗೌರವ್ ಬಿಧುರಿ, ಹರಿಯಾಣದ ಸಚಿನ್ ಎದುರು 1–4ರಿಂದ ಸೋಲು ಅನುಭವಿಸಿದರು. ಸಚಿನ್‌ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಗೌರವ್‌ ಪ್ರಶಸ್ತಿ ಜಯಿಸುವ ಪ್ರಬಲ ಬಾಕ್ಸರ್‌ ಎನಿಸಿಕೊಂಡಿದ್ದರು. ರೈಲ್ವೆ ತಂಡವನ್ನು ಅವರು ಪ್ರತಿನಿಧಿಸಿದ್ದರು.

ಹರಿಯಾಣದ ಇನ್ನೊಬ್ಬ ಬಾಕ್ಸರ್‌, ದಕ್ಷಿಣ ಏಷ್ಯನ್ ಗೇಮ್ಸ್ ಚಾಂಪಿಯನ್‌ ಅಂಕಿತ್‌ ಖತಾನ (75 ಕೆಜಿ ವಿಭಾಗ) ಎಂಟರಘಟ್ಟ ಪ್ರವೇಶಿಸಿದರು. ಹಿಮಾಚಲ ಪ್ರದೇಶದ ಧರ್ಮ ಪಾಲ್ ಎದುರು ಅವರು ಏಕಪಕ್ಷೀಯ ಜಯ ದಾಖಲಿಸಿದರು.

ತೆಲಂಗಾಣದ ಸವಿಯೊ ಡಾಮಿನಿಕ್‌ ಮೈಕೆಲ್‌ (54 ಕೆಜಿ), ಗೋವಾದ ಅಶೋಕ್ ಪಾಟೀಲ್‌ (67 ಕೆಜಿ), ಚಂಡೀಗಡದ ಕುಲದೀಪ್ ಕುಮಾರ್‌ (48 ಕೆಜಿ) ಮತ್ತು ಮಹಾರಾಷ್ಟ್ರದ ನಿಖಿಲ್ ದುಬೆ (75 ಕೆಜಿ) ಕ್ವಾರ್ಟರ್‌ಫೈನಲ್ ಪ್ರವೇಶಿಸಿದ ಇನ್ನುಳಿದ ಬಾಕ್ಸರ್‌ಗಳು.

ಪ್ರೀಕ್ವಾ‌ರ್ಟರ್‌ಫೈನಲ್‌ ಬೌಟ್‌ನಲ್ಲಿ ಸವಿಯೊ ಅವರು ಜಾರ್ಖಂಡ್‌ನ ಕೃಷ್ಣ ಜೋರಾ ಎದುರು, ಅಶೋಕ್‌ ಅವರು ಹಿಮಾಚಲ ಪ್ರದೇಶದ ಮೋಹನ್ ಚಾಂಡೆರ್ ಎದುರು ಗೆಲುವು ಸಾಧಿಸಿದರು.

ಕುಲದೀಪ್ ಕುಮಾರ್‌ 4–0ಯಿಂದ ರಾಜಸ್ಥಾನದ ಸುಶೀಲ್ ಶರಣ್ ಅವರ ಸವಾಲು ಮೀರಿದರೆ, ನಿಖಿಲ್ ದುಬೆ ಅವರು ತೆಲಂಗಾಣದ ವೇಣು ಮಂಡಲ ಅವರನ್ನು ಆರ್‌ಎಸ್‌ಸಿ (ರೆಫರಿಯಿಂದ ಸ್ಪರ್ಧೆಗೆ ತಡೆ) ಆಧಾರದಲ್ಲಿ ಪರಾಭವಗೊಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.