ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಕ ಕ್ರೀಡಾಪಟುಗಳಿಗೆ ಜಿಮ್ ಪರಿಕರ ವಿತರಣೆ

Last Updated 21 ಆಗಸ್ಟ್ 2020, 8:54 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕ್ರೀಡಾಪಟುಗಳಿಗೆ ಜಿಮ್ ಸ್ಥಾಪನೆಗಾಗಿ ಪರಿಕರಗಳನ್ನು ಗುರುವಾರ ವಿತರಿಸಲಾಯಿತು.

ನಗರದ ‘ಯವನಿಕಾ’ದಲ್ಲಿ ನಡೆದ ಕಾರ್ಯಕ್ರಮದಲ್ಲಿಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಸಿ.ಟಿ.ರವಿ ಪರಿಕರಗಳನ್ನು ಹಸ್ತಾಂತರಿಸಿದರು. ರಾಜ್ಯದ ಕ್ರೀಡಾಶಾಲೆಗಳಲ್ಲಿ ಅಳವಡಿಸಿರುವ ಇಂಟರ‍್ಯಾಕ್ಟಿವ್ ಸೌಲಭ್ಯ ಮತ್ತು ಕಂಪ್ಯೂಟರ್ ಲ್ಯಾಬ್‌ಗಳನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.

ವಿಶೇಷ ಘಟಕ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಸ್ವಯಂ ಉದ್ಯೋಗ ಸ್ಥಾಪನೆಗಾಗಿ ಪರಿಕರಗಳನ್ನು ನೀಡಲಾಗಿದೆ. ಪರಿಶಿಷ್ಟ ಜಾತಿಯ ಏಳು ಮಂದಿ ಮತ್ತು ಪರಿಶಿಷ್ಟ ಪಂಗಡದ ಮೂವರಿಗೆ ಟ್ರೆಡ್ ಮಿಲ್, ಎಲಿಪ್ಟಿಕಲ್ ಕ್ರಾಸ್ ಟ್ರೇನರ್, ಅಪ್‌ರೈಟ್ ಬೈಕ್, ಫೋರ್ ಸ್ಟೇಷನ್ ಮಲ್ಟಿ ಜಿಮ್, ಸ್ಮಿಚ್ ಮಷಿನ್ ಸೇರಿದಂತೆ 27 ಪರಿಕರಗಳನ್ನು ನೀಡಲಾಯಿತು.

2019 ಮತ್ತು 20ನೇ ಸಾಲಿನಲ್ಲಿ ಪದಕಗಳನ್ನು ಗೆದ್ದ 45 ಮಂದಿ ಅರ್ಜಿ ಸಲ್ಲಿಸಿದ್ದರು. ಅರ್ಹತೆಯ ಆಧಾರದಲ್ಲಿ ಅವರ ಪೈಕಿ 10 ಮಂದಿಯನ್ನು ಆರಿಸಲಾಯಿತು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ. ಯೋಜನೆ ಈ ವರ್ಷವೂ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.

ಮಣಿಕಂಠನ್ (ಸ್ಪೋರ್ಟ್ಸ್ ಕ್ಲೈಂಬಿಂಗ್‌–ಬೆಂಗಳೂರು), ತೇಜಸ್ವಿನಿ ಎಚ್‌.ಬಿ (ಟೇಕ್ವಾಂಡೊ–ಶಿವಮೊಗ್ಗ), ಬಿಂದು ಎನ್‌ (ಫೆನ್ಸಿಂಗ್–ಬೆಂಗಳೂರು ಗ್ರಾಮಾಂತರ), ಯಲ್ಲಪ್ಪ ಎಸ್‌.ಗೊರವ (ಜೂಡೊ–ಬೆಳಗಾವಿ), ಅವಿನಾಶ್‌ ವಿ (ಜೂಡೊ–ಶಿವಮೊಗ್ಗ), ಸಂಪತ್ ಕುಮಾರ್ (ಕೊಕ್ಕೊ–ತುಮಕೂರು), ವಿಶಾಲ್ (ಸೈಕ್ಲಿಂಗ್‌–ಬೀದರ್), ಮಂಜುನಾಥ್ ಎಸ್‌.ಕೆ (ಜೂಡೊ–ಮಂಡ್ಯ), ಲಕ್ಷ್ಮಣ ಸೊನ್ನದ (ಮಲ್ಲಕಂಬ–ಬಾಗಲಕೋಟೆ) ಮತ್ತು ಕೆ.ವಿಜಯಕುಮಾರ್ (ವುಷು–ಚಿತ್ರದುರ್ಗ) ಆಯ್ಕೆಯಾದವರು.

ಕ್ರೀಡಾಸಾಮರ್ಥ್ಯದೊಂದಿಗೆ ಬೌದ್ಧಿಕ ಬೆಳವಣಿಗೆಯನ್ನೂ ಗಮನದಲ್ಲಿರಿಸಿಕೊಂಡು ರಾಜ್ಯದ 34 ಕ್ರೀಡಾಶಾಲೆಗಳಲ್ಲಿ ಶೈಕ್ಷಣಿಕ ತರಬೇತಿ ನೀಡುವದಕ್ಕಾಗಿ ಮತ್ತು ಮಾಹಿತಿ–ಸಂವಹನವನ್ನು ಉತ್ತೇಜಿಸುವುದಕ್ಕಾಗಿ ಇಂಟರ‍್ಯಾಕ್ಟಿವ್ ಸೌಲಭ್ಯ ಮತ್ತು ಕಂಪ್ಯೂಟರ್ ಲ್ಯಾಬ್‌ ತೆರೆಯಲಾಗಿದೆ. ಲ್ಯಾಬ್‌ನಲ್ಲಿ 65 ಇಂಚು ಅಳತೆಯ ಎಲ್‌ಇಡಿ ಪರದೆಯನ್ನು ಅಳವಡಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಗ್ರಂಥಾಲಯ ಗಣಕೀಕರಣ

ಇಲಾಖೆಯ ಅಡಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಯುವಕೇಂದ್ರದ ಗ್ರಂಥಾಲಯವನ್ನು ಗಣಕೀಕರಣಗೊಳಿಸಲಾಗುತ್ತಿದೆ. ಏಕಲವ್ಯ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾ ವಸತಿಶಾಲೆಗಳಲ್ಲಿ ಹೊರಾಂಗಣ ಜಿಮ್ ಅಳವಡಿಸುವ ಕಾರ್ಯವೂ ನಡೆಯಲಿದೆ. ಏಳನೇ ತರಗಿಯಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಕ್ರೀಡಾ ಸಾಮರ್ಥ್ಯಕ್ಕೆ ಸಾಣೆ ಹಿಡಿಯಲು ಪ್ರತಿಭಾಶೋಧ ಕಾರ್ಯ ನಡೆಯಲಿದೆ. ಇದಕ್ಕಾಗಿ ವಿಶೇಷ ಶಿಬಿರಗಳು ನಡೆಯಲಿವೆ ಎಂದು ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT