ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಲ್‌ಸನ್‌ಗೆ ಆಘಾತ ನೀಡಿದ ಹರಿಕೃಷ್ಣ

ಸೇಂಟ್‌ ಲೂಯಿಸ್‌ ಆನ್‌ಲೈನ್‌ ಚೆಸ್ ಟೂರ್ನಿ ‌: ಆರನೇ ಸ್ಥಾನದಲ್ಲಿ ಭಾರತದ ಆಟಗಾರ
Last Updated 19 ಸೆಪ್ಟೆಂಬರ್ 2020, 12:59 IST
ಅಕ್ಷರ ಗಾತ್ರ

ಚೆನ್ನೈ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಪೆಂಟಾಲ ಹರಿಕೃಷ್ಣ ಅವರು ಸೇಂಟ್‌ ಲೂಯಿಸ್‌ ಆನ್‌ಲೈನ್‌ ಚೆಸ್‌ ಟೂರ್ನಿಯಲ್ಲಿ ಶುಕ್ರವಾರ ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರಿಗೆ ಆಘಾತ ನೀಡಿದರು. ಆದರೆ ಬಳಿಕ ನಾಲ್ಕು ಸುತ್ತಿನಲ್ಲಿ ಸೋಲು ಕಂಡು ಒಟ್ಟಾರೆ ಆರನೇ ಸ್ಥಾನಕ್ಕೆ ಜಾರಿದ್ದಾರೆ.

ಬ್ಲಿಟ್ಜ್‌ 1 ವಿಭಾಗದ ಮೂರನೇ ಸುತ್ತಿನಲ್ಲಿ ನಾರ್ವೆಯ ಕಾರ್ಲ್‌ಸನ್‌ ಎದುರು ಕಣಕ್ಕಿಳಿದಿದ್ದ ಹರಿಕೃಷ್ಣ 63 ನಡೆಗಳಲ್ಲಿ ಗೆಲುವು ಸಾಧಿಸಿದರು. ಭಾರತದ ಆಟಗಾರ ಈ ವಿಭಾಗದ ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಕೆಳಕ್ರಮಾಂಕದ ಜೆಫರಿ ಕ್ಸಿಯಾಂಗ್‌ ಎದುರೂ ಜಯದ ನಗೆ ಬೀರಿದರು. ಇವೆರಡೂ ಗೆಲುವು ಹೊರತುಪಡಿಸಿ ಶುಕ್ರವಾರ ಅವರು ನಾಲ್ಕು ಸುತ್ತುಗಳಲ್ಲಿ ಸೋಲು ಹಾಗೂ ಮೂರು ಸುತ್ತುಗಳಲ್ಲಿ ಡ್ರಾ ಸಾಧಿಸಿದರು.

ಹರಿಕೃಷ್ಣ ಅವರು ಅಮೆರಿಕದ ಲೀನಿಯರ್‌ ಡೊಮಿಂಗ್ವೆಜ್‌ ಹಾಗೂ ವೆಸ್ಲಿ ಸೊ, ರಷ್ಯಾದ ಅಲೆಕ್ಸಾಂಡರ್‌ ಗ್ರಿಶ್ಚುಕ್‌ ಹಾಗೂ ಇರಾನ್‌ನ ಅಲಿರೇಜಾ ಫಿರೌಜಾ ಎದುರು ಪರಾಭವಗೊಂಡರು.

ಬ್ಲಿಟ್ಜ್‌ 1 ವಿಭಾಗದ ಒಂಬತ್ತು ಸುತ್ತುಗಳ ಬಳಿಕ ಹರಿಕೃಷ್ಣ, ಆರ್ಮೇನಿಯಾದ ಗ್ರ್ಯಾಂಡ್‌ ಮಾಸ್ಟರ್ ಲೆವೊನ್ ಅರೋನಿಯನ್‌ ಜೊತೆ ಆರನೇ ಸ್ಥಾನ ಹಂಚಿಕೊಂಡರು. ಅವರ ಬಳಿ ಒಟ್ಟಾರೆ 12.5 ಪಾಯಿಂಟ್‌ಗಳಿವೆ.

ರ‍್ಯಾಪಿಡ್‌ ಸುತ್ತುಗಳ ಬಳಿಕ ಎರಡನೇ ಸ್ಥಾನದಲ್ಲಿದ್ದ ಕಾರ್ಲ್‌ಸನ್‌ ಅವರು ಸದ್ಯ 18.5 ಪಾಯಿಂಟ್ಸ್‌ನೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದ್ದಾರೆ. ಅಮೆರಿಕದ ವೆಸ್ಲಿ (18) ಎರಡನೇ ಸ್ಥಾನದಲ್ಲಿದ್ದಾರೆ. ಬ್ಲಿಟ್ಜ್‌ 1 ವಿಭಾಗದಲ್ಲಿ ಕಾರ್ಲ್‌ಸನ್ ಅವರು ಎರಡು ಸುತ್ತುಗಳ ಸೋಲಿನ ಹೊರತಾಗಿಯೂ 6.5 ಪಾಯಿಂಟ್ಸ್‌ ಕಲೆಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT