ರೂರ್ಕೆಲಾ: ಹರ್ಮನ್‌ಪ್ರೀತ್ ಸಿಂಗ್ ಅವರ ಅಮೋಘ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತ ತಂಡ ಎಫ್‌ಐಎಚ್ ಪ್ರೊ ಹಾಕಿ ಲೀಗ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಆಘಾತ ನೀಡಿತು.
ಭಾನುವಾರ ನಡೆದ ಪಂದ್ಯದಲ್ಲಿ ಹೊಂದಾಣಿಕೆಯ ಆಟವಾಡಿದ ಭಾರತ 5–4 ಗೋಲುಗಳಿಂದ ಗೆದ್ದಿತು. ಒಂಬತ್ತು ಗೋಲುಗಳು ದಾಖಲಾದ ಪಂದ್ಯದಲ್ಲಿ ಭಾರತ ತಂಡದವರು ಕೊನೆಯಲ್ಲಿ ಎದುರಾದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದರು. ಲೀಗ್‌ನಲ್ಲಿ ಆತಿಥೇಯ ತಂಡಕ್ಕೆ ದೊರೆತ ಸತತ ಎರಡನೇ ಗೆಲುವು ಇದು.
ಹರ್ಮನ್‌ಪ್ರೀತ್ ಅವರು 13, 14 ಮತ್ತು 55ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ಮೂರೂ ಗೋಲುಗಳು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಬಂದವು. ಇತರ ಗೋಲುಗಳನ್ನು ಜುಗ್ರಾಜ್ ಸಿಂಗ್ (17 ನೇ ನಿ.) ಮತ್ತು ಕಾರ್ತಿ ಸೆಲ್ವಂ (25) ಗಳಿಸಿದರು.
ಆಸ್ಟ್ರೇಲಿಯಾ ತಂಡದ ಪರ ಜೋಶುವಾ ಬೆಟ್ಜ್ (2), ಕಿ ವಿಲಾಟ್ (42), ಬೆನ್ ಸ್ಟೈನ್ಸ್ (52) ಮತ್ತು ಅರಾನ್ ಜಲೆವ್‌ಸ್ಕಿ (56) ಚೆಂಡನ್ನು ಗುರಿ ಸೇರಿಸಿದರು.
ಜಿದ್ದಾಜಿದ್ದಿನ ಸೆಣಸಾಟ ನಡೆದ ಪಂದ್ಯದ ಎರಡನೇ ನಿಮಿಷದಲ್ಲಿ ಜೋಶುವಾ ಅವರು ಆಸ್ಟ್ರೇಲಿಯಾಕ್ಕೆ ಮುನ್ನಡೆ ತಂದಿತ್ತರು. 13ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಗೋಲಿನಿಂದ ಭಾರತ ಸಮಬಲ ಸಾಧಿಸಿತು. ಮುಂದಿನ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ 2–1 ರಲ್ಲಿ ಮುನ್ನಡೆ ತಂದಿತ್ತರು.
ಎರಡನೇ ಕ್ವಾರ್ಟರ್‌ನಲ್ಲಿ ಪೂರ್ಣ ಪ್ರಭುತ್ವ ಸಾಧಿಸಿದ ಭಾರತ ಮತ್ತೆರಡು ಗೋಲು ಗಳಿಸಿ 4–1 ರಲ್ಲಿ ಮುನ್ನಡೆ ಗಳಿಸಿತು. ಒತ್ತಡಕ್ಕೆ ಒಳಗಾದರೂ ಆಸ್ಟ್ರೇಲಿಯಾ ಆಟಗಾರರು ಮರು ಹೋರಾಟ ನಡೆಸಿದರು. ಮೂರನೇ ಕ್ವಾರ್ಟರ್‌ನಲ್ಲಿ ಒಂದು ಗೋಲು ಗಳಿಸಿ ಹಿನ್ನಡೆಯನ್ನು 2–4ಕ್ಕೆ ತಗ್ಗಿಸಿದರು.
ಕೊನೆಯ ಕ್ವಾರ್ಟರ್‌ನಲ್ಲಿ ಎರಡು ಗೋಲುಗಳನ್ನು ಗಳಿಸಿದ ಆಸ್ಟ್ರೇಲಿಯಾ ತಂಡ, ಸಮಬಲ ಸಾಧಿಸಲು ಇನ್ನಿಲ್ಲದ ಪ್ರಯತ್ನ ನಡೆಸಿತು. ಆದರೆ ಹರ್ಮನ್‌ಪ್ರೀತ್ ಗಳಿಸಿದ ಗೋಲಿನ ನೆರವಿನಿಂದ ಮುನ್ನಡೆ ಕಾಯ್ದುಕೊಂಡ ಭಾರತ, ಸ್ಮರಣೀಯ ಗೆಲುವು ಒಲಿಸಿಕೊಂಡಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.