ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಕಲಿ ಪುಲಿಂದ ತಿಮ್ಮಣ್ಣ

Last Updated 20 ನವೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
"ಪುಲಿಂದ ತಿಮ್ಮಣ್ಣ"

ಭಾರತ ಹಾಗೂ ಕರ್ನಾಟಕ ಹಾಕಿಗೆ ಕೊಡವ ನಾಡಿನ ಕೊಡುಗೆ ಅಪಾರ. ಅದೇ ನಾಡಿನಿಂದ ಹೊರಹೊಮ್ಮಿದ ಪ್ರತಿಭೆ ಪುಲಿಂದ ಲೋಕೇಶ್‌ ತಿಮ್ಮಣ್ಣ. 13ನೇ ವರ್ಷದಿಂದ ಹಾಕಿ ಕ್ರೀಡೆಯತ್ತ ಚಿತ್ತ ನೆಟ್ಟ ತಿಮ್ಮಣ್ಣ ಅವರು ಸದ್ಯ ಕರ್ನಾಟಕ ತಂಡದ ಸಾರಥ್ಯ ವಹಿಸಿಕೊಂಡಿದ್ದಾರೆ. 2019ನೇ ಸಾಲಿನ ಏಕಲವ್ಯ ಪುರಸ್ಕಾರ ಒಲಿಯುವ ಮೂಲಕ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಮೂಡಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಲೋಕೇಶ್‌ ಹಾಗೂ ಲೀಲಾವತಿ ದಂಪತಿಯ ಪುತ್ರ ತಿಮ್ಮಣ್ಣ, ಪ್ರೌಢ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದು ನೆಲೆಸಿದವರು. ಆಗಿನಿಂದಲೇ ಹಾಕಿಯತ್ತ ಆಸಕ್ತಿ ಬೆಳೆಸಿಕೊಂಡು, ತರಬೇತುದಾರರಾದ ಮನೋಹರ್ ಕಟಕೆ, ಸಿ.ಯು.ಅಶ್ವತ್ಥ ಹಾಗೂ ಐ.ಡಿ.ಪ್ರಭಾಕರ್‌ ಅವರ ಗರಡಿಯಲ್ಲಿ ಪಳಗಿದರು.

28 ವರ್ಷದ ತಿಮ್ಮಣ್ಣ, 2011ರಲ್ಲಿ ಕರ್ನಾಟಕ ಜೂನಿಯರ್‌ ತಂಡದ ಮೂಲಕ ಪದಾರ್ಪಣೆ ಮಾಡಿ, ತಂಡದ ಸಾರಥ್ಯವನ್ನೂ ವಹಿಸಿಕೊಂಡಿದ್ದರು.

2012ರಿಂದ ಭಾರತ ತಂಡವು ಬೆಂಗಳೂರು, ಪಟಿಯಾಲ, ಪುಣೆ ಹಾಗೂ ಭೋಪಾಲ್‌ಗಳಲ್ಲಿ ನಡೆಸಿದ ಶಿಬಿರಗಳಲ್ಲಿ ಭಾಗವಹಿಸಿದ್ದರು. 2012ರ ಲಂಡನ್‌ ಒಲಿಂಪಿಕ್ಸ್‌ಗಾಗಿ ತಂಡವು ಪುಣೆಯಲ್ಲಿ ಆಯೋಜಿಸಿದ್ದ ಶಿಬಿರದಲ್ಲೂ ಅವರಿಗೆ ಸ್ಥಾನ ಸಿಕ್ಕಿತ್ತು.

2016ರಲ್ಲಿ ಗುವಾಹಟಿಯಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತ ತಂಡ ಬೆಳ್ಳಿ ಪದಕ ಗೆದ್ದುಕೊಂಡಿತ್ತು. ಆ ಸಂದರ್ಭದಲ್ಲೂ ತಿಮ್ಮಣ್ಣ ತಂಡದ ಸಾಧನೆಗೆ ಕೊಡುಗೆ ನೀಡಿದ್ದರು. 2012ರಲ್ಲಿ ಮಲೇಷ್ಯಾದಲ್ಲಿ ನಡೆದ ಸುಲ್ತಾನ್‌ ಜೋಹರ್‌ ಕಪ್‌ ಟೂರ್ನಿಯಲ್ಲಿ ಭಾರತ ತಂಡವನ್ನು ತಿಮ್ಮಣ್ಣ ಪ್ರತಿನಿಧಿಸಿದ್ದರು. ಈ ಟೂರ್ನಿಯಲ್ಲಿ ತಂಡವು ‘ಬೆಳ್ಳಿ‘ ನಗೆ ಮೂಡಿಸಿತ್ತು. ಅದೇ ವರ್ಷ ನಡೆದಜೂನಿಯರ್‌ ಏಷ್ಯಾ ಕಪ್‌ ಟೂರ್ನಿಯಲ್ಲಿ ಕಂಚಿದ ಪದಕವು ಭಾರತಕ್ಕೆ ಒಲಿದಿತ್ತು.

ಪುಲಿಂದ ತಿಮ್ಮಣ್ಣ

2012ರಿಂದ ಅವರು ಕರ್ನಾಟಕ ರಾಜ್ಯ ಹಾಕಿ ತಂಡದಲ್ಲಿ ಆಡುತ್ತಿದ್ದಾರೆ. ಕೇಂದ್ರ ಸರ್ಕಾರದ ತೆರಿಗೆ ಮತ್ತು ಕಸ್ಟ್‌ಮ್ಸ್‌ ಇಲಾಖೆಯ ಜಿಎಸ್‌ಟಿ ವಿಭಾಗದಲ್ಲಿ ಸಹಾಯಕ ಅಧಿಕಾರಿಯಾಗಿ ಅವರು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಕೋವಿಡ್‌–19 ಪಿಡುಗಿನಿಂದ ಎಲ್ಲ ಕ್ರೀಡಾಪಟುಗಳಿಗೆ ಸಮಸ್ಯೆಯಾಗಿದೆ. ಕ್ರೀಡಾಂಗಣಗಳು ಮುಕ್ತವಾಗದೇ ಸ್ವಲ್ಪ ತೊಂದರೆ ಎದುರಿಸಬೇಕಾಯಿತು. ಮನೆಯಲ್ಲೇ ವ್ಯಾಯಾಮಗಳನ್ನು ನಿರ್ವಹಿಸುತ್ತಿದ್ದರಿಂದ ಫಿಟ್‌ನೆಸ್‌ ಕಾಪಾಡಿಕೊಂಡಿದ್ದೇನೆ‘ ಎಂದು ತಿಮ್ಮಣ್ಣ ನುಡಿದರು.

‘ಜನವರಿಯಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಆಯೋಜನೆಯಾಗಲಿದ್ದು, ಸಿದ್ಧತೆ ಮಾಡಿಕೊಳ್ಳಬೇಕಿದೆ. ಭಾರತ ತಂಡಕ್ಕೆ ನಿಯಮಿತವಾಗಿ ಆಡಬೇಕೆಂಬ ಮಹದಾಸೆಯೂ ಇದೆ‘ ಎಂದು ತಮ್ಮ ಆಶಯ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT