ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಆಂಪೈರಿಂಗ್‌ನಲ್ಲಿ ‘ಅನುಪಮ’ ಸಾಧನೆ...

ಕೊಡಗು ಕ್ರೀಡಾ ಶಾಲೆಯಿಂದ ಹಲವು ‘ಮೊದಲು’ಗಳ ಮೈಲುಗಲ್ಲು ಸ್ಥಾಪಿಸಿದ ಮಹಿಳಾ ತೀರ್ಪುಗಾರ್ತಿ
Last Updated 18 ಏಪ್ರಿಲ್ 2021, 14:07 IST
ಅಕ್ಷರ ಗಾತ್ರ

ಬೆಂಗಳೂರು: ಹಾಕಿ ನಾಡು ಕೊಡಗಿನಲ್ಲಿ ಜನಿಸಿ ಅಲ್ಲಿನ ಕ್ರೀಡಾಶಾಲೆಯಲ್ಲಿ ಆಡಿ ಬೆಳೆದ ಅನುಪಮಾ ಪುಚ್ಚಿಮಂಡ ಅವರು ಅಂತರರಾಷ್ಟ್ರೀಯ ಮಟ್ಟದ ಹಾಕಿ ಅಂಗಣದಲ್ಲಿ ಮಾಡಿದ ಸಾಧನೆಗಳು ವಿಶಿಷ್ಟ. ಮಹಿಳಾ ಅಂಪೈರಿಂಗ್ ಕ್ಷೇತ್ರದಲ್ಲಿ ಹಲವು ಮೊದಲುಗಳಿಗೆ ಕಾರಣರಾದ ಅನಪಮಾ ಅವರು ಕೋವಿಡ್‌ಗೆ ಬಲಿಯಾಗಿದ್ದಾರೆ ಎಂದು ಹಾಕಿ ಇಂಡಿಯಾ ತಿಳಿಸಿದೆ. ಅನುಪಮಾ ಇಲ್ಲವಾಗುವುದರ ಮೂಲಕ ಭಾರತ ಮಹಿಳಾ ಹಾಕಿಯ ಧ್ರುವನಕ್ಷತ್ರವೊಂದು ಮರೆಯಾದಂತಾಗಿದೆ.

ಅನುಪಮಾ ಅವರ ಜನನ 1980ರ ಜುಲೈ 8. ತಂದೆ ‍ಪುಚ್ಚಿಮಂಡ ಶಿವಪ್ಪ, ತಾಯಿ ಪಿಚ್ಚಿಮಂಡ ಶಾಂತಿ. ಪತಿ ಮುಂಡಂಡ ಮಂದಣ್ಣ. ವಿರಾಜಪೇಟೆಯ ಕಾವೇರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ನಂತರ ಕೊಡಗಿನ ಕ್ರೀಡಾಶಾಲೆಗೆ ಪ್ರವೇಶ. ಭಾರತ ಕ್ರೀಡಾ ಪ್ರಾಧಿಕಾರದಡಿ ಮಡಿಕೇರಿಯ ಜೂನಿಯರ್ ಕಾಲೇಜಿನಲ್ಲಿ ಎಸ್‌ಎಸ್ಎಲ್‌ಸಿ ಮಾಡಿದ ಅವರು ಮತ್ತೆ ವಿರಾಜಪೇಟೆಗೆ ತಲುಪಿದರು. ಅಲ್ಲಿ ಕಾವೇರಿ ಕಾಲೇಜಿನಲ್ಲಿ ಪಿಯುಸಿ ಮಾಡಿದರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಪೂರೈಸಿದ ಅನುಪಮಾ ಬೆಂಗಳೂರಿನ ಶೇಷಾದ್ರಿಪುರ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿ ಮಾಡಿದರು.

ಕಾಲೇಜು ದಿನಗಳಲ್ಲಿ ಹಾಕಿ ಜೊತೆಯಲ್ಲಿ ಎನ್‌ಸಿಸಿಯಲ್ಲೂ ಹೆಸರು ಮಾಡಿದ ಅನುಪಮಾ, ಜೂನಿಯರ್ ಅಂಡರ್ ಆಫೀಸರ್ ಆಗಿ ದೆಹಲಿಯಲ್ಲಿ ಎಸ್‌ಎಸ್‌ಬಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. 2002–03ರ ಶೈಕ್ಷಣಿಕ ವರ್ಷದಲ್ಲಿ ಅತ್ಯುತ್ತಮ ಆಲ್‌ರೌಂಡರ್ ಎಂದೆನಿಸಿಕೊಂಡಿದ್ದ ಅವರು ಎಸ್‌ಎಸ್‌ಬಿಯ ಶಾರ್ಟ್‌ ಸರ್ವಿಸ್‌ ಕಮಿಷನ್‌ನ ತಾಂತ್ರಿಕೇತರ ವಿಭಾಗದ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆ ಹೊಂದಿದ್ದರು.

ಹಾಕಿ ಆಟಗಾರ್ತಿಯಾಗಿ ಅಂಗಣದಲ್ಲಿ ಮಿಂಚು ಹರಿಸಿದ್ದ ಅನುಪಮಾ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಸತತ ಎರಡು ವರ್ಷ ಪ್ರತಿನಿಧಿಸಿದ್ದರು. ಸಬ್‌ ಜೂನಿಯರ್ ಮತ್ತು ಸೀನಿಯರ್ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ.

ಅಂಪೈರಿಂಗ್ ಕ್ಷೇತ್ರಕ್ಕೆ ಕಾಲಿರಿಸಿದ ನಂತರ ಅನೇಕ ಮೈಲುಗಲ್ಲುಗಳನ್ನು ಸ್ಥಾಪಿಸಿದ್ದಾರೆ. 88 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ ಭಾರತದ ಮೊದಲ ಮಹಿಳಾ ಅಂಪೈರ್, ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ ಕರ್ನಾಟಕದ ಮೊದಲ ಮಹಿಳಾ ಅಂಪೈರ್, ಜೂನಿಯರ್ ಹಾಕಿ ವಿಶ್ವಕಪ್‌ ಮತ್ತು ಮೂರು ಕಾಮನ್ವೆಲ್ತ್ ಗೇಮ್ಸ್‌ಗಳಲ್ಲಿ ಪಾಲ್ಗೊಂಡ ಭಾರತದ ಮೊದಲ ಮಹಿಳಾ ಅಂಪೈರ್ ಮುಂತಾದ ದಾಖಲೆ ಅವರ ಹೆಸರಿನಲ್ಲಿದೆ. ಅಂಪೈರ್‌ಗಳ ಅನೇಕ ಅಂತತರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಪಾಲ್ಗೊಂಡ ಅನುಭವವೂ ಅವರಿಗಿತ್ತು.

ಅಂಪೈರಿಂಗ್‌ನಲ್ಲಿ ಅನುಪಮಾ ಅವರ ಹೆಜ್ಜೆ ಗುರುತು...

* 2004ರಲ್ಲಿ ಜಪಾನ್‌ನಲ್ಲಿ ನಡೆದ ಮೊದಲ ತಕಮಂಡೊನೊಮಿಯಾ ನಾಲ್ಕು ರಾಷ್ಟ್ರಗಳ ಟೂರ್ನಿ.

* 2004ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಜೂನಿಯರ್ ಏಷ್ಯಾ ಕಪ್‌ ಟೂರ್ನಿ; ಚೀನಾ ಮತ್ತು ಕೊರಿಯಾ ನಡುವಿನ ಫೈನಲ್‌.

* 2005ರಲ್ಲಿ ಕೊರಿಯಾದಲ್ಲಿ ನಡೆದ ಕೊರಿಯನ್ ಟೆಲಿವಿಷನ್ ಆರು ರಾಷ್ಟ್ರಗಳ ಟೂರ್ನಿ.

* 2005ರಲ್ಲಿ ಚಿಲಿಯ ಸಾಂಟಿಯಾಗೊದಲ್ಲಿ ನಡೆದ ಜೂನಿಯರ್ ವಿಶ್ವಕಪ್‌. ‌‌

* 2005ರಲ್ಲಿ ಮಕಾವೊದಲ್ಲಿ ನಡೆದ ಈಸ್ಟ್ ಏಷ್ಯನ್ ಗೇಮ್ಸ್‌ನ ಜಪಾನ್‌ ಮತ್ತು ಕೊರಿಯಾ ನಡುವಿನ ಫೈನಲ್‌.

* 2006ರಲ್ಲಿ ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್‌.

* 2006ರಲ್ಲಿ ಸ್ಯಾಂಟೊ ಡೊಮಿಂಗೊದಲ್ಲಿ ನಡೆದ ಸೆಂಟ್ರಲ್ ಅಮೆರಿಕನ್ ಮತ್ತು ಕೆರಿಬಿಯನ್ ಗೇಮ್ಸ್‌.

* 2007ರಲ್ಲಿ ಇಟಲಿಯಲ್ಲಿ ನಡೆದ ಮೂರು ರಾಷ್ಟ್ರಗಳ ಟೂರ್ನಿ, ಸಿಂಗಪುರದಲ್ಲಿ ನಡೆದ 4 ರಾಷ್ಟ್ರಗಳ ಟೂರ್ನಿ.

* 2008ರಲ್ಲಿ ಹಾಲೆಂಡ್‌ ಮತ್ತು ಜರ್ಮನಿಯಲ್ಲಿ ನಡೆದ ನಾಲ್ಕು ರಾಷ್ಟ್ರಗಳ ಟೂರ್ನಿ.‌‌

* 2008ರಲ್ಲಿ ಮಲೇಷ್ಯಾದಲ್ಲಿ ನಡೆದ ಜೂನಿಯರ್ ಏಷ್ಯಾಕಪ್‌; ಕೊರಿಯಾ ಮತ್ತು ಚೀನಾ ನಡುವಿನ ಫೈನಲ್.‌

* 2009ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಯೂತ್ ಒಲಿಂಪಿಕ್ಸ್‌ನ ಹಾಕಿ; ಆಸ್ಟ್ರೇಲಿಯಾ–ಇಂಗ್ಲೆಂಡ್ ಫೈನಲ್‌.

* 2009ರಲ್ಲಿ ಡರ್ಬನ್‌ನಲ್ಲಿ ನಡೆದ ಸ್ಪಾರ್ 4 ರಾಷ್ಟ್ರಗಳ ಟೂರ್ನಿ; ಅರ್ಜೆಂಟೀನಾ–ಆಸ್ಟ್ರೇಲಿಯಾ ನಡುವಿನ ಫೈನಲ್.

* 2009ರಲ್ಲಿ ಥಾಯ್ಲೆಂಡ್‌ನಲ್ಲಿ ನಡೆದ ಏಷ್ಯಾಕಪ್; 2010ರಲ್ಲಿ ಇಲ್ಲೇ ನಡೆದ ಏಷ್ಯನ್ ಗೇಮ್ಸ್‌ ಅರ್ಹತಾ ಸುತ್ತಿನ ಟೂರ್ನಿ.

* 2010ರಲ್ಲಿ ನವದೆಹಲಿಯಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್; ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್.‌

* 2011ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಅಂತರರಾಷ್ಟ್ರೀಯ ಸೂಪರ್ ಸೀರಿಸ್.

* 2013ರಲ್ಲಿ ನವದೆಹಲಿಯಲ್ಲಿ ನಡೆದ ವಿಶ್ವ ಲೀಗ್ ಎರಡನೇ ಸುತ್ತಿನ ಪಂದ್ಯಗಳು; ಮಲೇಷ್ಯಾದಲ್ಲಿ ನಡೆದ ಏಷ್ಯಾಕಪ್‌.

ಪ್ರಮುಖ ಟೂರ್ನಿಗಳಲ್ಲಿ ಅಂಪೈರಿಂಗ್ ಮಾಡಿದ ಮೊದಲ ಘಟ್ಟದ ಮಹಿಳೆಯರಲ್ಲಿ ಅನುಪಮಾ ಒಬ್ಬರು. ಅವರು ಇಲ್ಲವಾದ ವಿಷಯ ತಿಳಿದು ಅತೀವ ಬೇಸರ ಆಗಿದೆ. ಅವರ ಕುಟುಂಬದ ಸದಸ್ಯರ ದುಃಖದಲ್ಲಿ ಹಾಕಿ ಇಂಡಿಯಾ ಪಾಲ್ಗೊಳ್ಳುತ್ತದೆ.

-ಗ್ಯಾನೇಂದ್ರೋ ನಿಂಗೊಂಬಮ್ ಹಾಕಿ ಇಂಡಿಯಾ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT