ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕ್ಟರ್ ಚಾರ್ಲೆಟ್‌ ಬಳಗಕ್ಕೆ ಮಣಿದ ಚೀನಾ

Last Updated 10 ಡಿಸೆಂಬರ್ 2018, 20:30 IST
ಅಕ್ಷರ ಗಾತ್ರ

ಭುವನೇಶ್ವರ: ಛಲದಿಂದ ಹೋರಾಡಿದರೂ ಫಲ ಕಾಣದ ಚೀನಾ ತಂಡ ಹಾಕಿ ವಿಶ್ವಕಪ್‌ ಟೂರ್ನಿಯ ಕ್ರಾಸ್ ಓವರ್ ಪಂದ್ಯದಲ್ಲಿ ಫ್ರಾನ್ಸ್‌ಗೆ ಮಣಿಯಿತು.

ಕಳಿಂಗ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಫ್ರಾನ್ಸ್‌ 1–0ಯಿಂದ ಗೆದ್ದಿತು. ಮೂರನೇ ಕ್ವಾರ್ಟರ್‌ನಲ್ಲಿ ತಿಮೋತಿ ಕ್ಲೆಮೆಂಟ್ ಗಳಿಸಿದ ಗೋಲು ಫ್ರಾನ್ಸ್‌ ತಂಡಕ್ಕೆ ಜಯ ತಂದುಕೊಟ್ಟಿತು.

ವಿಶ್ವಕಪ್‌ ಟೂರ್ನಿಯಲ್ಲಿ ಉಭಯ ತಂಡಗಳು ಇದೇ ಮೊದಲ ಬಾರಿ ಮುಖಾಮುಖಿಯಾಗಿದ್ದವು. ಎಫ್‌ಐಎಚ್ ರ‍್ಯಾಂಕಿಂಗ್‌ನಲ್ಲಿ 20ನೇ ಸ್ಥಾನದಲ್ಲಿರುವ ಫ್ರಾನ್ಸ್‌ ತಂಡ 17ನೇ ಸ್ಥಾನದ ಚೀನಾ ತಂಡವನ್ನು ಆರಂಭದಲ್ಲೇ ದಂಗುಬಡಿಸಿತು. ಮೊದಲ ಕ್ವಾರ್ಟರ್‌ನಲ್ಲಿ ಫ್ರಾನ್ಸ್‌ ಒಂಬತ್ತು ಬಾರಿ ಎದುರಾಳಿಗಳ ಆವರಣಕ್ಕೆ ನುಗ್ಗಿತು. ನಾಲ್ಕು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನೂ ಗಳಿಸಿತು. ಆದರೆ ಗೋಲ್‌ಕೀಪರ್‌ ವಾಂಗ್ ಕಯೂ ಮತ್ತು ರಕ್ಷಣಾ ವಿಭಾಗದ ಆಟಗಾರರನ್ನು ವಂಚಿಸಿ ಗೋಲು ಗಳಿಸಲು ವಿಕ್ಟರ್ ಚಾರ್ಲೆಟ್ ನೇತೃತ್ವದ ತಂಡಕ್ಕೆ ಸಾಧ್ಯವಾಲಿಲ್ಲ.

ಎರಡನೇ ಕ್ವಾರ್ಟರ್‌ನಲ್ಲೂ ಫ್ರಾನ್ಸ್‌ನ ಪ್ರಾಬಲ್ಯ ಮುಂದುವರಿಯಿತು. ಚೆಂಡಿನ ಮೇಲೆ ಸತತವಾಗಿ ಆಧಿಪತ್ಯ ಸ್ಥಾಪಿಸಿದ ತಂಡ ಈ ಹಂತದಲ್ಲೂ ಗೋಲು ಗಳಿಸಲು ವಿಫಲವಾಯಿತು. ಫ್ರಾನ್ಸ್ ಎಂಟು ಬಾರಿ ಚೀನಾದ ಆವರಣಕ್ಕೆ ನುಗ್ಗಿದರೆ, ಚೀನಾ ಎರಡು ಬಾರಿ ಫ್ರಾನ್ಸ್ ಆವರಣದಲ್ಲಿ ಆತಂಕ ಮೂಡಿಸಿತು.

ಗೋಲು ತಂದಿತ್ತ ತಿಮೋತಿ: ಮೂರನೇ ಕ್ವಾರ್ಟರ್‌ನಲ್ಲಿ ಫ್ರಾನ್ಸ್ ಫಲ ಕಂಡಿತು. 36ನೇ ನಿಮಿಷದಲ್ಲಿ ತಿಮೋತಿ ಕ್ಲೆಮೆಂಟ್ ಗೋಲು ಗಳಿಸಿ ಸಂಭ್ರಮಿಸಿದರು. ಈ ಮುನ್ನಡೆಯ ಬಲದೊಂದಿಗೆ ನಾಲ್ಕನೇ ಕ್ವಾರ್ಟರ್‌ನಲ್ಲಿ ವಿಶ್ವಾಸದಿಂದ ಆಡಿದ ತಂಡ ಎದುರಾಳಿಗಳ ಮುನ್ನಡೆಯನ್ನು ತಡೆಯುವಲ್ಲಿ ಯಶಸ್ವಿಯಾಯಿತು.

ಕೊನೆಯ ಕ್ವಾರ್ಟರ್‌ನಲ್ಲಿ ಭಾರಿ ಪೈಪೋಟಿ ಕಂಡುಬಂತು. ಫ್ರಾನ್ಸ್ ಎಂಟು ಬಾರಿ ಚೀನಾ ಆವರಣಕ್ಕೆ ನುಗ್ಗಿದರೆ, ಚೀನಾ ನಾಲ್ಕು ಬಾರಿ ಆಕ್ರಮಣ ನಡೆಸಿತು. ಎರಡೂ ತಂಡಗಳಿಗೆ ತಲಾ ಎರಡು ಪೆನಾಲ್ಟಿ ಕಾರ್ನರ್‌ ಅವಕಾಶಗಳೂ ಲಭಿಸಿದ್ದವು. ಆದರೆ ಅವುಗಳನ್ನು ಸದುಪಯೋಗಪಡಿಸಿಕೊಳ್ಳಲು ಆಗಲಿಲ್ಲ. ಸಮಬಲಕ್ಕೆ ಪ್ರಯತ್ನಿಸಿದ ಚೀನಾ ಸೋಲಿಗೆ ಶರಣಾಗಿ ನಿರಾಸೆ ಅನುಭವಿಸಿತು.

ಇಂದಿನ ಪಂದ್ಯಗಳು (ಕ್ರಾಸ್ ಓವರ್‌)
ಬೆಲ್ಜಿಯಂ – ‍ಪಾಕಿಸ್ತಾನ
ಆರಂಭ: ಸಂಜೆ 4.45
*
ನೆದರ್ಲೆಂಡ್ಸ್‌ – ಕೆನಡಾ
ಆರಂಭ: ಸಂಜೆ 7.00
ಸ್ಥಳ: ಕಳಿಂಗ ಕ್ರೀಡಾಂಗಣ, ಭುವನೇಶ್ವರ
ನೇರ ಪ್ರಸಾರ: ಸ್ಟಾರ್ ನೆಟ್‌ವರ್ಕ್‌/ದೂರದರ್ಶನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT