ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಜಪಾನ್‌ ಮಣಿಸಿದ ಕೊರಿಯಾ ತಂಡ

Last Updated 17 ಜನವರಿ 2023, 16:09 IST
ಅಕ್ಷರ ಗಾತ್ರ

ಭುವನೇಶ್ವರ: ಯೂರೋಪಿನ ಎರಡು ಪ್ರಬಲ ತಂಡಗಳಾದ ಬೆಲ್ಜಿಯಂ ಮತ್ತು ಜರ್ಮನಿ, ಎಫ್‌ಐಎಚ್‌ ವಿಶ್ವಕಪ್‌ ಹಾಕಿ ಟೂರ್ನಿಯ ಪಂದ್ಯದಲ್ಲಿ 2–2 ಗೋಲುಗಳ ಡ್ರಾ ಸಾಧಿಸಿದವು.

ಕಳಿಂಗ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದ 9 ನಿಮಿಷದಲ್ಲಿ ಸೆಡ್ರಿಕ್‌ ಚಾರ್ಲಿಯೆರ್‌ ಅವರು ಬೆಲ್ಜಿಯಂ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು.

ಎರಡನೇ ಕ್ವಾರ್ಟರ್‌ನಲ್ಲಿ ಜರ್ಮನಿಯ ನಿಕ್ಲಾಸ್‌ ವೆಲೆನ್‌ (22ನೇ ನಿ.) ಅವರು ಚೆಂಡನ್ನು ಗುರಿ ಸೇರಿಸಿ ಪಂದ್ಯವನ್ನು ಸಮಸ್ಥಿತಿಗೆ ತಂದರು. ಮೂರನೇ ಕ್ವಾರ್ಟರ್‌ ಗೋಲುರಹಿತವಾಗಿತ್ತು.

ಕೊನೆಯ ಕ್ವಾರ್ಟರ್‌ನಲ್ಲಿ ಗೆಲುವಿನ ಗೋಲಿಗೆ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಟಾಮ್‌ ಗ್ರಾಂಬುಶ್‌ ಅವರು 52ನೇ ನಿಮಿಷದಲ್ಲಿ ಗೋಲು ಗಳಿಸಿ ಜರ್ಮನಿಗೆ 2–1 ಮೇಲುಗೈ ತಂದಿತ್ತರು. ಆದರೆ ಎರಡು ನಿಮಿಷಗಳ ಬಳಿಕ ಬೆಲ್ಜಿಯಂನ ವಿಕ್ಟರ್‌ ವೆಗ್ನೆಜ್‌ (54ನೇ ನಿ.) ಅವರು ಸಮಬಲಕ್ಕೆ ಕಾರಣರಾದರು.

ಬೆಲ್ಜಿಯಂ ಮತ್ತು ಜರ್ಮನಿ ತಲಾ ನಾಲ್ಕು ಪಾಯಿಂಟ್ಸ್‌ ಹೊಂದಿವೆ. ಉತ್ತಮ ಗೋಲು ಸರಾಸರಿಯಿಂದ ಬೆಲ್ಜಿಯಂ ಅಗ್ರಸ್ಥಾನದಲ್ಲಿದೆ.

ಜಪಾನ್‌ ಮಣಿಸಿದ ಕೊರಿಯಾ: ‘ಬಿ’ ಗುಂಪಿನ ಇನ್ನೊಂದು ಪಂದ್ಯದಲ್ಲಿ ಕೊರಿಯಾ 2–1 ಗೋಲುಗಳಿಂದ ಜಪಾನ್‌ ತಂಡವನ್ನು ಮಣಿಸಿತು.

ಎರಡೂ ಗೋಲುಗಳನ್ನು ಗಳಿಸಿದ ಜುಂಗ್‌ಜುನ್‌ ಲೀ, ಕೊರಿಯಾ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅವರು 8 ಹಾಗೂ 23ನೇ ನಿಮಿಷಗಳಲ್ಲಿ ಫೀಲ್ಡ್‌ ಗೋಲು ಗಳಿಸಿದರು.

ಜಪಾನ್‌ ತಂಡ ಮೊದಲ ನಿಮಿಷದಲ್ಲೇ ಮುನ್ನಡೆ ಗಳಿಸಿತ್ತು. ಕೆನ್ ನಗಯೊಶಿ ಅವರು ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿದ್ದರು. ಆ ಬಳಿಕ ಕೊರಿಯಾ ಮೇಲುಗೈ ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT