ಮಂಗಳವಾರ, ಡಿಸೆಂಬರ್ 10, 2019
26 °C

ವಿಶ್ವಕಪ್‌ ಹಾಕಿ: ಫ್ರಾನ್ಸ್‌ ತಂಡದ ಜಯಭೇರಿ

Published:
Updated:
Deccan Herald

ಭುವನೇಶ್ವರ: ಐದು ಫೀಲ್ಡ್‌ ಗೋಲುಗಳನ್ನು ದಾಖಲಿಸಿದ ಫ್ರಾನ್ಸ್‌ ತಂಡ ಹಾಕಿ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ.

ಕಳಿಂಗ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಹಣಾಹಣಿಯಲ್ಲಿ ಫ್ರಾನ್ಸ್‌ 5–3 ಗೋಲುಗಳಿಂದ ಅರ್ಜೆಂಟೀನಾ ತಂಡವನ್ನು ಸೋಲಿಸಿತು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಫ್ರಾನ್ಸ್‌ ತಂಡ 18ನೇ ನಿಮಿಷದಲ್ಲಿ ಖಾತೆ ತೆರೆಯಿತು. ಹ್ಯೂಗೊ ಜೆನೆಸ್ಟೆಟ್‌ ಚೆಂಡನ್ನು ಗುರಿ ಮುಟ್ಟಿಸಿದರು.

23ನೇ ನಿಮಿಷದಲ್ಲಿ ಕೈಚಳಕ ತೋರಿದ ವಿಕ್ಟರ್‌ ಚಾರ್ಲೆಟ್‌ 2–0 ಮುನ್ನಡೆಗೆ ಕಾರಣರಾದರು. 26ನೇ ನಿಮಿಷದಲ್ಲಿ ಅರಿಸ್ಟಿಡೆ ಕೊರಿಸ್ನೆ ಗೋಲು ಬಾರಿಸಿ ಮುನ್ನಡೆಯನ್ನು 3–0ಗೆ ಹೆಚ್ಚಿಸಿದರು. 28ನೇ ನಿಮಿಷದಲ್ಲಿ ಅರ್ಜೆಂಟೀನಾ ತಂಡದ ಲುಕಾಸ್‌ ಮಾರ್ಟಿನೆಜ್‌ ಫೀಲ್ಡ್‌ ಗೋಲು ಗಳಿಸಿದರು. 30ನೇ ನಿಮಿಷದಲ್ಲಿ ಫೀಲ್ಡ್‌ ಗೋಲು ದಾಖಲಿಸಿದ ಗ್ಯಾಸ್ಪರ್ಡ್‌ ಬೌಮಾಗಾರ್ಟೆನ್‌ ಫ್ರಾನ್ಸ್‌ ತಂಡಕ್ಕೆ 4–1ರ ಮುನ್ನಡೆ ತಂದುಕೊಟ್ಟರು. 44 ಮತ್ತು 48ನೇ ನಿಮಿಷಗಳಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಅರ್ಜೆಂಟೀನಾ ತಂಡದ ಗೊಂಜಾಲೊ ಪೀಲಟ್‌ ಚೆಂಡನ್ನು ಗುರಿ ಮುಟ್ಟಿಸಿದರು. 54ನೇ ನಿಮಿಷದಲ್ಲಿ ಫ್ರಾಂಕೊಯಿಸ್‌ ಗೋಯೆತ್‌ ಗೋಲು ಗಳಿಸಿ ಫ್ರಾನ್ಸ್‌ ತಂಡದ ಸಂಭ್ರಮಕ್ಕೆ ಕಾರಣರಾದರು.

ನ್ಯೂಜಿಲೆಂಡ್‌ ಮತ್ತು ಸ್ಪೇನ್‌ನ ನಡುವಣ ದಿನದ ಇನ್ನೊಂದು ಪಂದ್ಯ 2–2 ಗೋಲುಗಳಿಂದ ಸಮಬಲವಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು