ಭಾನುವಾರ, ಡಿಸೆಂಬರ್ 15, 2019
18 °C
ಈ ಬಾರಿಯ ಟೂರ್ನಿಯಲ್ಲಿ ‘ಹ್ಯಾಟ್ರಿಕ್‌’ ಗೆಲುವು ದಾಖಲಿಸಿದ ಮಾರ್ಟಿನ್‌ ಹನೆರ್‌ ಬಳಗ

ಕ್ವಾರ್ಟರ್‌ ಫೈನಲ್‌ಗೆ ಜರ್ಮನಿ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಭುವನೇಶ್ವರ: ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಜರ್ಮನಿ ತಂಡ ಈ ಬಾರಿಯ ಹಾಕಿ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಕಳಿಂಗ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ‘ಡಿ’ ಗುಂಪಿನ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಮಾರ್ಟಿನ್‌ ಹನೆರ್‌ ಬಳಗ 5–3 ಗೋಲುಗಳಿಂದ ಮಲೇಷ್ಯಾ ತಂಡವನ್ನು ಸೋಲಿಸಿತು. ಇದರೊಂದಿಗೆ ಈ ಬಾರಿ ‘ಹ್ಯಾಟ್ರಿಕ್‌’ ಗೆಲುವು ಪಡೆದ ಹಿರಿಮೆಗೆ ಪಾತ್ರವಾಯಿತು.

ಮೊದಲ ಪಂದ್ಯದಲ್ಲಿ 1–0 ಗೋಲಿನಿಂದ ಪಾಕಿಸ್ತಾನಕ್ಕೆ ಸೋಲುಣಿಸಿದ್ದ ಈ ತಂಡ ನಂತರದ ಹೋರಾಟದಲ್ಲಿ 4–1 ಗೋಲುಗಳಿಂದ ನೆದರ್ಲೆಂಡ್ಸ್‌ ಎದುರು ಗೆದ್ದಿತ್ತು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಜರ್ಮನಿ ಎರಡನೇ ನಿಮಿಷದಲ್ಲೇ ಖಾತೆ ತೆರೆಯಿತು. ಟಿಮ್‌ ಹರ್ಜ್‌ಬ್ರಕ್‌ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ಸಂಭ್ರಮಿಸಿದರು.

ಈ ಬಾರಿಯ ಏಷ್ಯನ್‌ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ ಜಯಿಸಿದ್ದ ಮಲೇಷ್ಯಾ, ನಂತರ ಪರಿಣಾಮಕಾರಿ ಆಟ ಆಡಿತು. ಹೀಗಾಗಿ 13ನೇ ನಿಮಿಷದವರೆಗೂ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. 14ನೇ ನಿಮಿಷದಲ್ಲಿ ಕ್ರಿಸ್ಟೋಫರ್‌ ರುಹ್ರ್‌ ಕೈಚಳಕ ತೋರಿದರು. ಫೀಲ್ಡ್‌ ಗೋಲು ಗಳಿಸಿದ ಅವರು ಜರ್ಮನಿ ತಂಡಕ್ಕೆ 2–0 ಮುನ್ನಡೆ ತಂದುಕೊಟ್ಟರು. 18ನೇ ನಿಮಿಷದಲ್ಲಿ ಕ್ರಿಸ್ಟೋಫರ್‌ ಮತ್ತೊಮ್ಮೆ ಮೋಡಿ ಮಾಡಿದರು. ವೈಯಕ್ತಿಕ ಎರಡನೇ ಗೋಲು ಗಳಿಸಿದ ಅವರು ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಿದರು.

ಎರಡನೇ ಕ್ವಾರ್ಟರ್‌ನಲ್ಲಿ ಮಲೇಷ್ಯಾ ಪಾರಮ್ಯ ಮೆರೆಯಿತು. 26ನೇ ನಿಮಿಷದಲ್ಲಿ ಈ ತಂಡಕ್ಕೆ ಪೆನಾಲ್ಟಿ ಕಾರ್ನರ್‌ ಸಿಕ್ಕಿತು. ಈ ಅವಕಾಶವನ್ನು ರೇಜಿ ರಹೀಮ್‌ ಸದುಪಯೋಗಪಡಿಸಿಕೊಂಡರು. ಇದರ ಬೆನ್ನಲ್ಲೇ (28ನೇ ನಿಮಿಷ) ತಂಡಕ್ಕೆ ಮತ್ತೊಂದು ಪೆನಾಲ್ಟಿ ಕಾರ್ನರ್‌ ಲಭ್ಯವಾಯಿತು. ಇದನ್ನು ಗೋಲಾಗಿ ಪರಿವರ್ತಿಸಿದ ನೂರ್‌ ನಬಿಲ್‌ ಹಿನ್ನಡೆಯನ್ನು 2–3ಕ್ಕೆ ತಗ್ಗಿಸಿದರು.

ಮೂರನೇ ಕ್ವಾರ್ಟರ್‌ನಲ್ಲಿ ತುರುಸಿನ ಪೈಪೋಟಿ ಕಂಡುಬಂತು. 39ನೇ ನಿಮಿಷದಲ್ಲಿ ಮಾರ್ಕೊ ಮಿಲ್‌ಟಾಕು ಫೀಲ್ಡ್‌ ಗೋಲು ಹೊಡೆದು ಜರ್ಮನಿ ತಂಡದ ಜಯದ ಹಾದಿ ಸುಗಮ ಮಾಡಿದರು.

ಈ ಖುಷಿ ಎದುರಾಳಿ ಪಾಳಯದಲ್ಲಿ ಹೆಚ್ಚು ಕಾಲ ಉಳಿಯಲು ಮಲೇಷ್ಯಾ ತಂಡ ಅವಕಾಶ ನೀಡಲಿಲ್ಲ. 42ನೇ ನಿಮಿಷದಲ್ಲಿ ಲಭಿಸಿದ ‍ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಚಾಕಚಕ್ಯತೆಯಿಂದ ಚೆಂಡನ್ನು ಗುರಿ ಮುಟ್ಟಿಸಿದ ರೇಜಿ ರಹೀಮ್‌ ಸಂಭ್ರಮಿಸಿದರು.

ಹೀಗಾಗಿ ಅಂತಿಮ ಕ್ವಾರ್ಟರ್‌ನ ಹಣಾಹಣಿ ಕುತೂಹಲದ ಗಣಿಯಾಗಿತ್ತು. ಮಲೇಷ್ಯಾ ತಂಡ ಎದುರಾಳಿಗಳ ರಕ್ಷಣಾ ಕೋಟೆಯನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ದಾಳಿ ನಡೆಸಿತು. ಆದರೆ ಚೆಂಡನ್ನು ಗುರಿ ಸೇರಿಸಲು ಮಾತ್ರ ಆಗಲಿಲ್ಲ. 59ನೇ ನಿಮಿಷದಲ್ಲಿ ಟಿಮ್‌ ಹರ್ಜ್‌ಬ್ರಕ್‌ ಮಿಂಚಿದರು. ಫೀಲ್ಡ್‌ ಗೋಲು ಬಾರಿಸಿದ ಅವರು ಜರ್ಮನಿ ತಂಡದ ಗೆಲುವಿನ ಅಂತರ ಹೆಚ್ಚಿಸಿದರು.

ಇಂದಿನ ಪಂದ್ಯಗಳು (ಕ್ರಾಸ್‌ ಓವರ್‌)

ಇಂಗ್ಲೆಂಡ್‌–ನ್ಯೂಜಿಲೆಂಡ್‌

ಆರಂಭ: ಸಂಜೆ 4.45

ಚೀನಾ–ಫ್ರಾನ್ಸ್‌

ಆರಂಭ: ಸಂಜೆ 7

(ನೇರಪ್ರಸಾರ: ಸ್ಟಾರ್‌ ನೆಟ್‌ವರ್ಕ್‌/ದೂರದರ್ಶನ)

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು