ಗುರುವಾರ , ಏಪ್ರಿಲ್ 9, 2020
19 °C

ಹಾಕಿ ವಿಶ್ವಕಪ್ ವಿಜಯಕ್ಕೆ 45ರ ಹೊಳಪು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಜಿತ್ ಪಾಲ್ ಸಿಂಗ್ ನಾಯಕತ್ವದ ಹಾಕಿ ತಂಡವು ಭಾರತಕ್ಕೆ ಹಾಕಿ ವಿಶ್ವಕಪ್ ಗೆದ್ದುಕೊಟ್ಟ ಆ ಸುವರ್ಣ ಗಳಿಗೆಗೆ ಈಗ 45 ವರ್ಷ ತುಂಬಿದೆ.

1975ರಲ್ಲಿ ಕ್ವಾಲಾಲಂಪುರದಲ್ಲಿ ಭಾರತ ತಂಡವು ವಿಶ್ವಕಪ್ ಹಾಕಿ ಫೈನಲ್‌ನಲ್ಲಿ 2–1ರಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು ಜಯಿಸಿತ್ತು. ಅದಕ್ಕೂ ಎರಡು ವರ್ಷಗಳ ಮುನ್ನ 1973ರಲ್ಲಿ ಸೋತಿದ್ದ ದುಃಖವನ್ನು ಭಾರತ ಮರೆತಿತ್ತು. ಅಸ್ಲಂ ಶೇರ್ ಖಾನ್ ಮತ್ತು  ಅಶೋಕಕುಮಾರ್ ಧ್ಯಾನಚಂದ್ ಅವರು ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯಗಳ ಜಯದ ರೂವಾರಿಗಳಾಗಿದ್ದರು.

‘1973ರಲ್ಲಿ ಗೆಲುವಿನ ಸನಿಹ ಬಂದು ಸೋತಿದ್ದೆವು. ಹೆಚ್ಚುವರಿ ಸಮಯದಲ್ಲಿ ಒಂದು ಗೋಲು ಹೊಡೆಯುವ ಅವಕಾಶವನ್ನು ನಾನು ಕೈಚೆಲ್ಲಿದ್ದೆ. ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಹೊಡೆಯುವ ಅವಕಾಶವನ್ನೂ ನಾವು ಕಳೆದುಕೊಂಡಿದ್ದೆವು. ಆದರೆ 1975ರಲ್ಲಿ ಜಯಿಸಲೇಬೇಕೆಂಬ ಛಲದಲ್ಲಿ ಆಡಿದ್ದು ಫಲ ನೀಡಿತ್ತು’ ಎಂದು ಅಶೋಕಕುಮಾರ್  ನೆನಪಿಸಿಕೊಳ್ಳುತ್ತಾರೆ. ಅವರು ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಮಗ.

‘ಆ ಟೂರ್ನಿಗಿಂತ ಮುನ್ನ ಚಂಡೀಗಡದಲ್ಲಿ ತರಬೇತಿ ಶಿಬಿರ ಇತ್ತು. ಅಲ್ಲಿ ನಮ್ಮ ಅಭ್ಯಾಸವನ್ನು ನೋಡಲು ದೊಡ್ಡ ಪ್ರಮಾಣದಲ್ಲಿ ಜನರು ಸೇರುತ್ತಿದ್ದರು. ಆ ಸಂದರ್ಭದಲ್ಲಿ ಗ್ಯಾನಿ ಜೇಲ್‌ ಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದರು. ಅವರು ಮತ್ತು ಕ್ರೀಡಾ ಸಚಿವ ಉಮ್ರಾವ್ ಸಿಂಗ್ ಅವರು ವಾರದಲ್ಲಿ ಎರಡು ಬಾರಿ ಶಿಬಿರಕ್ಕೆ ಭೇಟಿ ನೀಡುತ್ತಿದ್ದರು. ನಮ್ಮನ್ನು ಪ್ರೋತ್ಸಾಹಿಸುತ್ತಿದ್ದರು’ ಎಂದು ಅಶೋಕಕುಮಾರ್ ಹೇಳುತ್ತಾರೆ.

ಆ ಟೂರ್ನಿಯ ಸೆಮಿಫೈನಲ್‌ನಲ್ಲಿ ಆತಿಥೇಯ ಮಲೇಷ್ಯಾ ಎದುರು ಭಾರತ ತಂಡವು ಹಣಾಹಣಿ ನಡೆಸಿತ್ತು. ತಂಡದ ಮ್ಯಾನೇಜರ್ ಬಲಬೀರ್ ಸಿಂಗ್ ಸೀನಿಯರ್  ಆ ಸಂದರ್ಭದಲ್ಲಿ ಅಸ್ಲಂ ಶೇರ್ ಖಾನ್ ಅವರನ್ನು ಕಣಕ್ಕಿಳಿಸಿದ್ದು ಫಲ ನೀಡಿತ್ತು. ಸ್ಕೋರ್ ಸಮಬಲಗೊಳಿಸುವಲ್ಲಿ ಅಸ್ಲಂ ಯಶಸ್ವಿಯಾಗಿದ್ದರು. ಇದರಿಂದ ಹೆಚ್ಚುವರಿ ಸಮಯಕ್ಕೆ ಪಂದ್ಯ ಲಂಬಿಸಿತ್ತು. ಭಾರತ 3–2ರಲ್ಲಿ ಜಯಿಸಿತ್ತು.

‘ಆ ಗೋಲು ಗಳಿಸಿದ ಕ್ಷಣವನ್ನು ನನ್ನ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ. ನಾವು ಟೂರ್ನಿಗೆ ಹೋಗಿದ್ದೇ ಕಪ್ ಗೆಲ್ಲಲು. ಆ ಉದ್ದೇಶಕ್ಕೆ ನನ್ನ ಗೋಲು ನೆರವಾಗಿತ್ತು. ಸೆಮಿಫೈನಲ್‌ನಲ್ಲಿ ಗಳಿಸಿದ ಜಯವು ನಮ್ಮ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತ್ತು. ಪಾಕ್ ತಂಡವು ಬಲಿಷ್ಠವಾಗಿತ್ತು. ಆದರೆ ಫೈನಲ್‌ನಲ್ಲಿ ಆ ತಂಡವನ್ನು ನಾವು ಮಣಿಸಿ ಇತಿಹಾಸ ಬರೆದೆವು’ ಎಂದು ಅಸ್ಲಂ ಶೇರ್ ಖಾನ್ ನೆನಪಿಸಿಕೊಳ್ಳುತ್ತಾರೆ.

‘ಅಂದು ನಾವು ಗೆದ್ದು ಬಂದಾಗ ಯಾರೂ ಕರೆದು ಅಭಿನಂದಿಸಲಿಲ್ಲ. ವಿಜಯೋತ್ಸವ ದೂರದ ಮಾತು. ಇವತ್ತು ಬಹಳಷ್ಟು ಜನರಿಗೆ ಆ ಸಾಧನೆಯ ನೆನಪು ಕೂಡ ಇಲ್ಲ. ಕ್ರಿಕೆಟ್‌ ಕ್ರೇಜ್‌ ತುಂಬಿ ತುಳುಕುವ ಈ ದೇಶದಲ್ಲಿ ಹಾಕಿ ಹೀರೊಗಳನ್ನು ಯಾರು ನೆನಪಿಡುತ್ತಾರೆ?’ ಎಂದು ಅಶೋಕಕುಮಾರ್ ಬೇಸರ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು