ಬುಧವಾರ, ಮಾರ್ಚ್ 3, 2021
19 °C

PV Web Exclusive: ಸೊಂಪಾಗುವುದೇ ಭಾರತದ ಮಂಕುಬಡಿದ ಬ್ಯಾಡ್ಮಿಂಟನ್‌?

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

ಈ ಸಂಭ್ರಮ ಮತ್ತೆ ಯಾವಾಗ ಮರಳುವುದು? (ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ) –ಪಿಟಿಐ ಚಿತ್ರ

ಇದು, ಜನವರಿ 14ರಂದು ಹೊರಬಿದ್ದ ಸುದ್ದಿ. ಭಾರತದ ಯುವ ಬ್ಯಾಡ್ಮಿಂಟನ್ ಆಟಗಾರರಾದ ವರುಣ್ ಕಪೂರ್ ಮತ್ತು ಸಾಮಿಯಾ ಇಮದ್ ಫಾರೂಖಿ ಅವರು ಜೂನಿಯರ್ ವಿಭಾಗದ ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಗಳಿಸಿ ಗಮನ ಸೆಳೆದ ಸುದ್ದಿಯಾಗಿತ್ತು ಅದು. ಇಷ್ಟು ಮಾತ್ರವಲ್ಲ, ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್‌ ಪ್ರಕಟಿಸಿದ ಜೂನಿಯರ್ ರ‍್ಯಾಂಕಿಂಗ್ ಪಟ್ಟಿಯ ಅಗ್ರ ಹತ್ತರಲ್ಲಿ ಭಾರತದ ಇತರ ಆರು ಮಂದಿಯೂ ಸ್ಥಾನ ಗಳಿಸಿದ್ದರು.

ಬಾಲಕರ ಸಿಂಗಲ್ಸ್‌ ವಿಭಾಗದಲ್ಲಿ ವರುಣ್, ನಾಲ್ಕು ಸ್ಥಾನಗಳ ಜಿಗಿತ ಕಂಡಿದ್ದರೆ ಬಾಲಕಿಯರ ಸಿಂಗಲ್ಸ್‌ನಲ್ಲಿ ಸಾಮಿಯಾ ಆರು ಸ್ಥಾನಗಳ ಏರಿಕೆ ಕಂಡಿದ್ದರು. ಬಾಲಕರ ವಿಭಾಗದಲ್ಲಿ ಅಗ್ರ ಹತ್ತರಲ್ಲಿ ಇದ್ದ ಭಾರತದವರ ಪಟ್ಟಿಯಲ್ಲಿ ವರುಣ್ ಒಬ್ಬರೇ ಕಾಣಿಸಿಕೊಂಡಿದ್ದರೆ ಬಾಲಕಿಯರ ಸಿಂಗಲ್ಸ್‌ ವಿಭಾಗದಲ್ಲಿ ತಸ್ನಿಮ್ ಮೀರ್‌, ತ್ರೀಸಾ ಜಾಲಿ, ಅದಿತಿ ಭಟ್ ಇದ್ದರು. ಡಬಲ್ಸ್‌ನಲ್ಲಿ ತ್ರೀಸಾ, ತನಿಶಾ ಮತ್ತು ಅದಿತಿ ಸ್ಥಾನ ಗಳಿಸಿದ್ದರು.

ಇದೇ ಸಂದರ್ಭದಲ್ಲಿ ಥಾಯ್ಲೆಂಡ್‌ನಲ್ಲಿ ಈ ಬಾರಿಯ ಯೊನೆಕ್ಸ್‌ ಥಾಯ್ಲೆಂಡ್ ಓಪನ್‌ ಟೂರ್ನಿಯ ಪಂದ್ಯಗಳು ನಡೆಯುತ್ತಿದ್ದವು. ವಿಶೇಷವೆಂದರೆ, ಟೂರ್ನಿಯಲ್ಲಿ ಜನವರಿ 14ರಂದು ಭಾರತದ ಸವಾಲು ಕೊನೆಗೊಂಡಿತ್ತು. ಅಂದು ಪ್ರಿ ಕ್ವಾರ್ಟರ್ ಫೈನಲ್ ಹಂತದ ಪಂದ್ಯಗಳು ನಡೆದಿದ್ದವು. ಮಹಿಳೆಯರ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್, ಥಾಯ್ಲೆಂಡ್‌ನ ಬುಸನನ್ ಒಂಗ್‌ಬಂಗ್ರುಂಫನ್ ವಿರುದ್ಧ ಹೋರಾಡಿ ಸೋತಿದ್ದರೆ, ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್ ಎದುರಾಳಿಗೆ ವಾಕ್ ಓವರ್ ನೀಡಿದ್ದರು. ಬಲಗಾಲಿನ ಮೀನಖಂಡದಲ್ಲಿ ನೋವು ಕಾಣಿಸಿಕೊಂಡಿದ್ದ ಕಾರಣ ಅವರ ಎದುರಾಳಿ, ಮಲೇಷ್ಯಾದ ಲೀ ಜಿ ಜಿಯಾ ಅವರ ಹಾದಿ ಸುಗಮಗೊಂಡಿತ್ತು. ಭಾರತದ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ–ಚಿರಾಗ್ ಶೆಟ್ಟಿ ಮತ್ತು ಮಿಶ್ರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್–ಅಶ್ವಿನಿ ಪೊನ್ನಪ್ಪ ಜೋಡಿ ಹೊರಬಿದ್ದದ್ದು ಕೂಡ ಅದೇ ದಿನ. ಈ ಟೂರ್ನಿಯಲ್ಲಿ ಪಿ.ವಿ.ಸಿಂಧು ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರೆ ಎರಡನೇ ಸುತ್ತಿನಲ್ಲಿ ಪರುಪಳ್ಳಿ ಕಶ್ಯಪ್‌, ಸಮೀರ್ ವರ್ಮಾ, ಸೌರಭ್‌ ವರ್ಮಾ ಸೇರಿದಂತೆ ಭಾರತದ ಒಂಬತ್ತು ಆಟಗಾರರ ಅಭಿಯಾನ ಮುಗಿದಿತ್ತು.


ಕಿದಂಬಿ ಶ್ರೀಕಾಂತ್ –ಪಿಟಿಐ ಚಿತ್ರ

ಜೂನಿಯರ್ ವಿಭಾಗದಲ್ಲಿ ಹೊಸ ಪ್ರತಿಭೆಗಳು ಸಾಮರ್ಥ್ಯ ಮೆರೆಯುತ್ತಿದ್ದಾಗಲೇ ಅನುಭವಿ ಆಟಗಾರರು ನೀರಸ ಆಟವಾಡಿದ್ದು ಬ್ಯಾಡ್ಮಿಂಟನ್ ಪ್ರಿಯರ ಬೇಸರಕ್ಕೆ ಕಾರಣವಾಗಿತ್ತು. ಇರಲಿ, ಕೋವಿಡ್‌–19ರ ಕಾರಣದಿಂದ ಭಾರತದ ಕಿದಂಬಿ ಶ್ರೀಕಾಂತ್, ಲಕ್ಷ್ಯಸೇನ್‌, ಅಜಯ್ ಜಯರಾಮ್‌ ಮತ್ತು ಶುಭಂಕರ್ ಡೇ ಅವರನ್ನು ಬಿಟ್ಟರೆ ಉಳಿದ ಯಾರೂ 10 ತಿಂಗಳಿಂದ ಯಾವ ಟೂರ್ನಿಯಲ್ಲೂ ಆಡಿರಲಿಲ್ಲ, ಈ ನಾಲ್ವರು ಆಟಗಾರರು ಅಕ್ಟೋಬರ್‌ನಲ್ಲಿ ನಡೆದ ಡೆನ್ಮಾರ್ಕ್‌ ಓಪನ್‌ನಲ್ಲಿ ಕಣಕ್ಕೆ ಇಳಿದಿದ್ದರು. ಟೂರ್ನಿಗಳಲ್ಲಿ ಆಡದ್ದರಿಂದ ಎಲ್ಲ ಆಟಗಾರರಿಗೆ ಲಯಕ್ಕೆ ಮರಳುವುದು ಕಷ್ಟವಾಯಿತು ಎಂಬ ತರ್ಕವನ್ನು ಒಪ್ಪಿಕೊಂಡು ಈ ಟೂರ್ನಿಯ ವಿಷಯವನ್ನು ಬಿಟ್ಟರೆ, ನಾಲ್ಕು ದಿನಗಳ ನಂತರ ನಡೆದ ಟೊಯೊಟಾ ಥಾಯ್ಲೆಂಡ್ ಓಪನ್‌ ಟೂರ್ನಿಯಲ್ಲೂ ಭಾರತದ ಸಾಧನೆ ಹೇಳಿಕೊಳ್ಳುವ ರೀತಿ ಇರಲಿಲ್ಲ. ಮಿಶ್ರ ಡಬಲ್ಸ್ ಮತ್ತು ಪುರುಷರ ಡಬಲ್ಸ್ ಜೋಡಿ ಸೆಮಿಫೈನಲ್‌ ವರೆಗೆ ಸಾಗಿದ್ದರಷ್ಟೇ.

ಯೊನೆಕ್ಸ್ ಥಾಯ್ಲೆಂಡ್ ಓಪನ್‌ನಲ್ಲಿ ಸೈನಾ ಹೋರಾಡಿ ಸೋತಿದ್ದರೆ, ಟೊಯೊಟಾ ಥಾಯ್ಲೆಂಡ್ ಓಪನ್‌ನಲ್ಲಿ ನೀರಸ ಆಟವಾಡಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು. ಶ್ರೀಕಾಂತ್ ಮೊದಲ ಸುತ್ತಿನಲ್ಲಿ ಉತ್ತಮ ಆಟವಾಡಿ ಭರವಸೆ ಮೂಡಿಸಿದ್ದರೂ ಕೊಠಡಿ ಹಂಚಿಕೊಂಡಿದ್ದ ಆಟಗಾರನಲ್ಲಿ ಕೋವಿಡ್ ಕಾಣಿಸಿಕೊಂಡ ಕಾರಣ ಮುಂದಿನ ಸುತ್ತುಗಳಲ್ಲಿ ಆಡಲು ಅವಕಾಶ ಸಿಗಲಿಲ್ಲ. ಸಿಂಧು ಮೂರನೇ ಸುತ್ತು ಪ್ರವೇಶಿಸಿದರೂ ಮುಂದಿನ ಹಂತಕ್ಕೆ ಸಾಗಲು ಆಗಲಿಲ್ಲ. ಸಾತ್ವಿಕ್‌, ಚಿರಾಗ್ ಮತ್ತು ಅಶ್ವಿನಿ ಅವರನ್ನು ಬಿಟ್ಟರೆ ಉಳಿದ ಯಾರಿಗೂ ಕ್ವಾರ್ಟರ್ ಫೈನಲ್‌ ಹಂತಕ್ಕಿಂತ ಮುಂದೆ ಸಾಗುವಷ್ಟು ಕಸುವು ಇರಲಿಲ್ಲ.


ಪಿ.ವಿ.ಸಿಂಧು –ಎಎಫ್‌ಪಿ ಚಿತ್ರ

ಥಾಯ್ಲೆಂಡ್‌, ಇಂಡೊನೇಷ್ಯಾ, ಚೀನಾ, ಚೀನಾ ಥೈಪೆ ಮುಂತಾದ ಕಡೆಗಳ ಆಟಗಾರರ ಜೊತೆ ಏಷ್ಯಾದಲ್ಲಿ ಬ್ಯಾಡ್ಮಿಂಟನ್‌ನ ಪ್ರಬಲ ಶಕ್ತಿಯಾಗಿ ಹೊರಹೊಮ್ಮುವತ್ತ ದಾಪುಗಾಲು ಹಾಕುತ್ತಿದ್ದ ಭಾರತದ ಬ್ಯಾಡ್ಮಿಂಟನ್ ಪಟುಗಳಿಗೆ ಕೋವಿಡ್‌–19 ಅಷ್ಟೊಂದು ದೊಡ್ಡ ಹೊಡೆತ ನೀಡಿತೇ ಎಂಬ ಪ್ರಶ್ನೆ ಈಗ ಬ್ಯಾಡ್ಮಿಂಟನ್‌ ವಲಯದಲ್ಲಿ ಎದ್ದಿದೆ. ಮಹಾಮಾರಿ ದಾಳಿ ಇಟ್ಟ ಸಂದರ್ಭದಲ್ಲಿ ಮನೆಯಲ್ಲೇ ಕಳೆಯಬೇಕಾದ ಅನಿವಾರ್ಯ ಸ್ಥಿತಿಗೆ ಒಳಗಾದ ಆಟಗಾರರು ನಂತರ ಸಹಜ ಸ್ಥಿತಿಗೆ ಮರಳಲು ವಿಫಲರಾದರೇ…? ಡೆನ್ಮಾರ್ಕ್‌ ಓಪನ್‌ನಂಥ ಟೂರ್ನಿಗಳಲ್ಲಿ ಆಡುವ ದಿಟ್ಟತನ ಮೆರೆದಿದ್ದರೆ ತಮ್ಮ ಸಹಜ ಆಟ ಪ್ರದರ್ಶಿಸಲು ಆಗುತ್ತಿತ್ತೇ…? ಎಂಬಿತ್ಯಾದಿ ಪ್ರಶ್ನೆಗಳು ಈಗ ಎದ್ದಿವೆ.

ಕರೊಲಿನಾ ಮರಿನ್‌, ನೊಜೊಮಿ ಒಕುಹರ, ಆ್ಯಂಡೆರ್ಸ್ ಆ್ಯಂಟೊನ್ಸೆನ್‌, ಮಾರ್ಕಸ್ ಎಲಿಸ್‌, ಕ್ರಿಸ್ ಲ್ಯಾಂಗ್ರಿಜ್‌, ಇವಾನ್ ಜೊಸೊನೊವ್‌, ಯೂಕಿ ಫುಕುಶಿಮಾ, ಸಯಾಕ ಹಿರೋಟ, ಲೀ ಯಾಂಗ್‌, ವಾಂಗ್‌ ಚಿ ಲಿನ್‌, ತಾಯ್ ಜು ಯಿಂಗ್‌, ವಿಕ್ಟರ್ ಅಕ್ಸೆಲ್ಸನ್‌, ಕ್ರಿಸ್ಟಿಯನ್ ಸೋಬರ್ಗ್ ವಿಟಿಂಗಸ್, ದೆಚಪೊಲ್ ಪೌರಂಕುರೊ ಮುಂತಾದವರಿಗೆ ಸಾಧ್ಯವಾದದ್ದು ಭಾರತದವರಿಗೆ ಯಾಕೆ ಆಗಲಿಲ್ಲ ಎಂಬ ಪ್ರಶ್ನೆಯೂ ಕಾಡತೊಡಗಿದೆ.


ಸ್ಪೇನ್‌ನ ಕರೊಲಿನಾ ಮರಿನ್ –ಎಎಫ್‌ಪಿ ಚಿತ್ರ

ಬ್ಯಾಂಕಾಕ್‌ನಲ್ಲಿ ಇದೇ ತಿಂಗಳ 27ರಂದು ಆರಂಭವಾಗಲಿರುವ ವಿಶ್ವ ಟೂರ್ ಫೈನಲ್ಸ್‌ಗೆ ವೇದಿಕೆ ಎಂದೇ ಪರಿಗಣಿಸಲಾಗಿದ್ದ ಎರಡು ಥಾಯ್ಲೆಂಡ್ ಓಪನ್ ಟೂರ್ನಿಗಳಲ್ಲಿ ಸ್ಪೇನ್‌, ಚೀನಾ, ಥಾಯ್ಲೆಂಡ್, ಡೆನ್ಮಾರ್ಕ್‌ ಮತ್ತು ಇಂಡೊನೇಷ್ಯಾದ ಬ್ಯಾಡ್ನಿಂಟನ್ ಪಟುಗಳು ಪಾರಮ್ಯ ಮೆರೆದಿದ್ದಾರೆ. ಅವರನ್ನೆಲ್ಲ ಹಿಂದಿಕ್ಕಿ ಮುನ್ನುಗ್ಗುವ ಸವಾಲು ಭಾರತದ ಕ್ರೀಡಾಪಟುಗಳ ಮುಂದೆ ಇದೆ. ವಿಶ್ವ ಟೂರ್ ಫೈನಲ್ಸ್‌ನಲ್ಲಿಯೂ ಸಾಧನೆ ಮಂಕಾದರೆ ಮಾರ್ಚ್‌ನಲ್ಲಿ ನಡೆಯಲಿರುವ ಸ್ವಿಜ್ ಓಪನ್‌, ಜರ್ಮನ್ ಓಪನ್, ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ ಮತ್ತು ಮಲೇಷ್ಯಾ ಓಪನ್ ಟೂರ್ನಿಗಳ ವರೆಗೂ ಕಾಯಬೇಕಾಗುತ್ತದೆ. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಒಟ್ಟು ಆರು ಟೂರ್ನಿಗಳು ನಡೆಯಲಿದ್ದು ಸತತ ಪಂದ್ಯಗಳನ್ನು ಆಡುವ ಒತ್ತಡ ನಿಭಾಯಿಸುವ ಸವಾಲು ಕೂಡ ಭಾರತದ ಬ್ಯಾಡ್ಮಿಂಟನ್ ಪಟುಗಳ ಮೇಲೆ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು