ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್ ಫೈನಲ್‌ಗೆ ಭಾರತ: ಮನ್‌ಪ್ರೀತ್‌ ಸಿಂಗ್‌ ವಿಶ್ವಾಸ

Last Updated 1 ಜನವರಿ 2020, 20:01 IST
ಅಕ್ಷರ ಗಾತ್ರ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ ಫೈನಲ್‌ ತಲುಪುವ ಸಾಮರ್ಥ್ಯ ಭಾರತ ತಂಡಕ್ಕಿದೆ ಎಂದು ರಾಷ್ಟ್ರೀಯ ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹಂತ ತಲುಪಲು ಶಿಸ್ತು ಹಾಗೂ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ತವರಿನಲ್ಲಿ ನಡೆದ 2018ರ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿತ್ತು. ಸದ್ಯ ಗ್ರಹಾಂ ರೀಡ್‌ ತರಬೇತಿಯಲ್ಲಿ ಪಳಗಿರುವ ಮನ್‌ಪ್ರೀತ್‌ ಬಳಗ, ಸ್ಥಿರತೆಯನ್ನು ಕಾಯ್ದುಕೊಂಡು 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದೆ.

‘ಭಾರತ2019ರಲ್ಲಿ ಪ್ರಮುಖ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯದಿದ್ದರೂ ಸಾಮರ್ಥ್ಯ ವೃದ್ಧಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿಲ್ಲ. ವರ್ಷದ ಆರಂಭದಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ನಾವು ಐದನೇ ಕ್ರಮಾಂಕದಲ್ಲಿದ್ದೆವು. ಅದೇ ಸ್ಥಾನವನ್ನು ಕಾಯ್ದುಕೊಂಡಿದ್ದೇವೆ. ಒಲಿಂಪಿಕ್ಸ್‌ ಟಿಕೆಟ್‌ ಗಿಟ್ಟಿಸುವುದು 2019ರ ಪ್ರಮುಖ ಗುರಿಯಾಗಿತ್ತು. ಅದನ್ನು ನಾವು ಸಾಧಿಸಿದ್ದೇವೆ’ ಎಂದು ಮನಪ್ರೀತ್‌ ಹೇಳಿದ್ದಾರೆ.

‘2019ರಲ್ಲಿ ತೋರಿದ ಸ್ಥಿರತೆಯನ್ನು ಮುಂದುವರಿಸಬೇಕಾಗಿದೆ. ಒಲಿಂಪಿಕ್ಸ್‌ ಫೈನಲ್‌ ತಲುಪುವುದು ಪ್ರಮುಖ ಗುರಿಯಾಗಿದ್ದು ಅದು ಅಸಾಧ್ಯವೇನಲ್ಲ’ ಎಂಬುದು ಮನ್‌ಪ್ರೀತ್‌ ನುಡಿ.

‘ಮುಂಬರುವ ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ವಿಶ್ವ ಚಾಂಪಿಯನ್‌ ಬೆಲ್ಜಿಯಂ, ನೆದರ್ಲೆಂಡ್ಸ್ ಹಾಗೂ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳನ್ನು ಎದುರಿಸಲಿದ್ದೇವೆ. ಇಲ್ಲಿಯ ಸ್ಪರ್ಧೆಯು ನಮ್ಮ ಆಟದ ಸಾಮರ್ಥ್ಯವನ್ನು ಒರೆಗೆ ಹಚ್ಚಲಿದೆ’ ಎಂದು 2019ರ ಎಫ್‌ಐಎಚ್‌ ವರ್ಷದ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಮನ್‌ಪ್ರೀತ್‌ ಹೇಳುತ್ತಾರೆ.

ಪ್ರೊ ಲೀಗ್‌ ಮೊದಲ ಆವೃತ್ತಿಯಲ್ಲಿ ಭಾರತ ಆಡಿರಲಿಲ್ಲ. ಈ ಬಾರಿಯ ಲೀಗ್‌ನಲ್ಲಿ ಜನವರಿ 18 ಹಾಗೂ 19ರಂದು ನೆದರ್ಲೆಂಡ್ಸ್‌ ಎದುರು, ಫೆಬ್ರುವರಿ 8 ಹಾಗೂ 9ರಂದು ಬೆಲ್ಜಿಯಂ ವಿರುದ್ಧ ಬಳಿಕ ಅದೇ ತಿಂಗಳ 22 ಹಾಗೂ 23ರಂದು ಆಸ್ಟ್ರೇಲಿಯಾ ತಂಡದ ಮೇಲೆ ಭಾರತ ಆಡಲಿದೆ.

2019ರಲ್ಲಿ ರಾಷ್ಟ್ರೀಯ ತಂಡಕ್ಕೆ ಕೆಲವು ಯುವ ಆಟಗಾರರು ಸೇರ್ಪಡೆಯಾಗಿದ್ದು ಸಕಾರಾತ್ಮಕ ಅಂಶ ಎಂದು ಮನ್‌ಪ್ರೀತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT