ಸೋಮವಾರ, ಆಗಸ್ಟ್ 8, 2022
24 °C

‘ಮೂರ್ನಾಲ್ಕು ದಿನಗಳಲ್ಲಿ ಗುಣಮುಖನಾಗುತ್ತೇನೆ’ ಎಂದಿದ್ದ ಮಿಲ್ಖಾ ಸಿಂಗ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಹೌದು ಮಗು, ನನಗೆ ಕೋವಿಡ್ ದೃಢಪಟ್ಟಿದೆ. ಆದರೆ ಆರೋಗ್ಯವಾಗಿದ್ದೇನೆ, ಕೆಮ್ಮು, ಜ್ವರ ಮತ್ತಾವುದೇ ಸಮಸ್ಯೆಯಿಲ್ಲ. ಕೋವಿಡ್‌ ನನ್ನಿಂದ ತೊಲಗಲಿದೆ. ಮೂರ್ನಾಲ್ಕು ದಿನಗಳಲ್ಲಿ ಗುಣಮುಖನಾಗುವೆ ಎಂದು ವೈದ್ಯರು ಹೇಳಿದ್ದಾರೆ‘...

ಕೋವಿಡ್ ಖಚಿತಪಟ್ಟಿದ್ದ ಕುರಿತು ಮಾತನಾಡಿಸಿದ ಸುದ್ದಿಸಂಸ್ಥೆಗೆ ಮಿಲ್ಖಾ ಸಿಂಗ್‌ ನೀಡಿದ ಮೊದಲ ಪ್ರತಿಕ್ರಿಯೆ ಇದು.

ಜೀವನದಲ್ಲಿ ಹಲವು ಗೆಲುವು, ಸೋಲಿನ ಕ್ಷಣಗಳನ್ನು ಎದುರಿಸಿದ್ದ ದಿಗ್ಗಜ ಅಥ್ಲೀಟ್‌ ಮಿಲ್ಖಾ ಸಿಂಗ್ ತಮಗೆ ಕೋವಿಡ್ ಖಚಿತಪಟ್ಟಿದ್ದಾಗಲೂ ಆಶಾವಾದದ ಮಾತುಗಳನ್ನೇ ಆಡಿದ್ದರು.

ಕೊರೊನಾ ಸೋಂಕಿನೊಂದಿಗೆ ತಿಂಗಳ ಕಾಲ ಸೆಣಸಿದ್ದ 91 ವರ್ಷದ ಮಿಲ್ಖಾ ಸಿಂಗ್‌, ಶುಕ್ರವಾರ ಚಂಡೀಗಡದ ಪಿಜಿಐಎಂಇಆರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

ಸೋಂದು ದೃಢಪಟ್ಟ ಬಳಿಕ ಮೇ 23ರಂದು ಮುಂಜಾಗೃತಾ ಕ್ರಮವಾಗಿ ಅವರನ್ನು ಮೊಹಾಲಿಯ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರ ಪತ್ನಿ, ಭಾರತ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲ್ ಕೌರ್ ಅವರನ್ನೂ ಕೋವಿಡ್ ಕಾರಣದಿಂದ ಅದೇ ಆಸ್ಪತ್ರೆಗೆ ದಾಖಲಿಸಲಾಯಿತು (ಕಳೆದ ಭಾನುವಾರ ಅವರು ಮೃತಪಟ್ಟಿದ್ದರು).

ಬಳಿಕ ಕುಟುಂಬದ ಮನವಿಗೆ ಸ್ಪಂದಿಸಿ ಮಿಲ್ಖಾ ಸಿಂಗ್ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿತ್ತು. ಬಳಿಕ ಆಮ್ಲಜನಕ ಮಟ್ಟ ಕುಸಿದ ಕಾರಣ ಜೂನ್ ಮೂರರಂದು ಪಿಜಿಐಎಂಇಆರ್ ಆಸ್ಪತ್ರೆಗೆ ದಾಖಲಾಗಿದ್ದರು.

ಕೋವಿಡ್ ಖಚಿತಪಟ್ಟ ಆರಂಭದಲ್ಲಿ ಮಿಲ್ಖಾ ಸಿಂಗ್ ಅವರಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ.

‘ಬೆಳಗಿನ ವಾಯುವಿಹಾರ ಮತ್ತು ವ್ಯಾಯಾಮಗಳನ್ನು ಹೊರತುಪಡಿಸಿ ನಾನು ಮನೆಯಲ್ಲೇ ಇರುತ್ತಿದ್ದೆ. ನಿನ್ನೆಯಷ್ಟೇ ವಾಯುವಿಹಾರ ಮಾಡಿದ್ದೇನೆ. ಹೀಗಾಗಿ ಚಿಂತಿಸುವ ಅಗತ್ಯವಿಲ್ಲ, ನನ್ನ ಉತ್ಸಾಹ ಕಡಿಮೆಯಾಗಿಲ್ಲ. ಈ ಕೋವಿಡ್‌ ಕಾಲದಲ್ಲಿ ದೈಹಿಕ ವ್ಯಾಯಾಮ ಮತ್ತು ಆರೋಗ್ಯವಾಗಿರುವುದು ಬಹಳ ಮುಖ್ಯ ಎಂದು ನಾನು ಹೇಳುತ್ತಲೇ ಇದ್ದೇನೆ. ನನ್ನ ವಯಸ್ಸು 91. ಆದರೂ ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದೇನೆ‘ ಎಂದು ಅವರು ಸೋಂಕು ತಗಲಿದ್ದು ಗೊತ್ತಾದ ಸಂದರ್ಭದಲ್ಲಿ ಹೇಳಿದ್ದರು.

‘ಸುಸ್ತು ಹಾಗೂ ಮೈಕೈ ನೋವು ಕಾಡುತ್ತಿದೆ ಎಂದು ಅವರು ಹೇಳಿದ್ದು ಇದೇ ಮೊದಲ ಬಾರಿ‘ ಎಂದು ಮಿಲ್ಖಾ ಅವರ ಪತ್ನಿ ನಿರ್ಮಲ್ ಕೌರ್ ನುಡಿದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು