ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ್ಮಿಂಗ್‌ಹ್ಯಾಮ್ ಬೇಸಿಗೆಗೆ ಕಾಮನ್‌ವೆಲ್ತ್ ಕ್ರೀಡಾಕೂಟದ ಕಾವು

ಪದಕಗಳ ಬೇಟೆಗೆ ಭಾರತದ ಪಡೆ ಸನ್ನದ್ಧ; ಶೂಟಿಂಗ್ ಗೈರು, ಕ್ರಿಕೆಟ್ ಹಾಜರು; ನೀರಜ್ ಚೋಪ್ರಾ ಅನುಪಸ್ಥಿತಿಯ ಕೊರಗು
Last Updated 27 ಜುಲೈ 2022, 19:24 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್‌ನಲ್ಲಿ ಬೇಸಿಗೆಯ ಬಿಸಿಯನ್ನು ಮತ್ತಷ್ಟು ಏರಿಸಲು ಗುರುವಾರ ಆರಂಭವಾಗಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟ ಸಿದ್ಧವಾಗಿದೆ.

ಈ ಕೂಟದಲ್ಲಿ ಪದಕಗಳ ಬೇಟೆಯಾಡಲು ಭಾರತದ ‘ಜಂಬೋ’ ಗಾತ್ರದ ಪಡೆಯೂ ಸನ್ನದ್ಧವಾಗಿದೆ. ಆದರೆ ಈ ಬಾರಿ ಶೂಟಿಂಗ್‌ ಕ್ರೀಡೆಯನ್ನು ರದ್ದುಗೊಳಿಸಿರುವುದರಿಂದ ಭಾರತದ ಪದಕಗಳಿಕೆಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ‌

ನಾಲ್ಕು ವರ್ಷಗಳ ಹಿಂದೆ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕೂಟದಲ್ಲಿ ಭಾರತವು ಜಯಿಸಿದ್ದ ಒಟ್ಟು 66 ಪದಕಗಳಲ್ಲಿ ಶೂಟಿಂಗ್‌ನ ಏಳು ಚಿನ್ನಗಳು ಇದ್ದವು. ಇನ್ನೂ ಕೆಲವು ವಿಭಾಗಗಲ್ಲಿ ಪದಕಗಳ ಮಿಂಚು ಹರಿಯುವ ಭರವಸೆಯೂ ಇದೆ. ಬ್ಯಾಡ್ಮಿಂಟನ್, ವೇಟ್‌ಲಿಫ್ಟಿಂಗ್, ಬಾಕ್ಸಿಂಗ್, ಕುಸ್ತಿ, ಟೇಬಲ್ ಟೆನಿಸ್ ಅದರಲ್ಲಿ ಪ್ರಮುಖವಾಗಿವೆ. ಅಥ್ಲೆಟಿಕ್ಸ್‌ನಲ್ಲಿ ಇದುವರೆಗೆ ಭಾರತವು ಒಟ್ಟು 28 ಪದಕಗಳನ್ನು ಜಯಿಸಿದೆ. ಈ ಬಾರಿಯೂ ಕೆಲವು ವಿಭಾಗಗಳಲ್ಲಿ ಪದಕಗಳಿಕೆಯ ನಿರೀಕ್ಷೆ ಇದೆ.

ಆದರೆ, ಒಲಿಂಪಿಕ್ ಚಾಂಪಿಯನ್ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಗಾಯಗೊಂಡಿದ್ದಾರೆ. ಆದ್ದರಿಂದಾಗಿ ಇಲ್ಲಿ ಒಂದು ಪದಕ ಜಯದ ಅವಕಾಶ ತಪ್ಪಿದೆ. ಮಹಿಳೆಯರ 100 ಮೀಟರ್ಸ್ ಮತ್ತು 4X100 ಮೀ ರಿಲೆ ಸ್ಪರ್ಧಿ ಎಸ್. ಧನಲಕ್ಷ್ಮೀ, ಲಾಂಗ್‌ ಜಂಪ್ ಅಥ್ಲಿಟ್ ಐಶ್ವರ್ಯಾ ಬಾಬು ಅವರು ಇತ್ತೀಚೆಗೆ ಉದ್ದೀಪನ ಮದ್ದು ಸೇವನೆ ಮಾಡಿ ಸಿಕ್ಕಿಬಿದ್ದ ಕಾರಣ ಅಮಾನತಾಗಿದ್ದಾರೆ. ಇದರಿಂದಾಗಿ ಅಥ್ಲಟಿಕ್ಸ್‌ನಲ್ಲಿ ಹಿಮಾ ದಾಸ್, ದ್ಯುತಿ ಚಾಂದ್, ಶ್ರೀಶಂಕರ್ ಮೇಲೆ ಹೆಚ್ಚು ನಿರೀಕ್ಷೆಯ ಭಾರವಿದೆ.

ಕುಸ್ತಿಯಲ್ಲಿ ಭಜರಂಗ್ ಪೂನಿಯಾ, ವಿನೇಶಾ ಪೋಗಟ್, ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು, ಬ್ಯಾಡ್ಮಿಂಟನ್ ನಲ್ಲಿ ಒಲಿಂಪಿಯನ್ ಪಿ.ವಿ. ಸಿಂಧು, ಕೆ. ಶ್ರೀಕಾಂತ್, ಲಕ್ಷ್ಯ ಸೇನ್, ಅಶ್ವಿನಿ ಪೊನ್ನಪ್ಪ ಭರವಸೆಯ ಆಟಗಾರರಾಗಿದ್ದಾರೆ. ಬ್ಯಾಡ್ಮಿಂಟನ್‌ ತಂಡವು ಪುರುಷ, ಮಹಿಳೆಯರ ಸಿಂಗಲ್ಸ್‌, ಡಬಲ್ಸ್ ಮತ್ತು ಮಿಶ್ರ ಡಬಲ್ಸ್‌ ವಿಭಾಗಗಳಲ್ಲಿ ಉತ್ತಮ ಆಟಗಾರರು ಕಣಕ್ಕಿಳಿಯಲಿದ್ದಾರೆ.

ಟೇಬಲ್‌ ಟೆನಿಸ್‌ನಲ್ಲಿ ಅನುಭವಿ ಶರತ್ ಕಮಲ್ ಈ ಬಾರಿ ಸಿಂಗಲ್ಸ್‌ ಚಿನ್ನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಮಣಿಕಾಬಾತ್ರಾ, ಜಿ. ಸತ್ಯನ್, ಹರ್ಮಿತ್ ದೇಸಾಯಿ ಅವರೂ ಉತ್ತಮ ಲಯದಲ್ಲಿದ್ದಾರೆ.

ಬಾಕ್ಸಿಂಗ್‌ ರಿಂಗ್‌ನಲ್ಲಿಯೂ ಭರವಸೆಯ ಕಿರಣಗಳು ಮೂಡಿವೆ. ಒಲಿಂಪಿಕ್ ಕಂಚು ವಿಜೇತ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್, ವಿಶ್ವ ಚಾಂಪಿಯನ್ ನಿಖತ್ ಜರೀನ್ ಮತ್ತು ಪುರುಷರಲ್ಲಿ ಅಮಿತ್ ಪಂಘಾಲ್ ಗೆದ್ದುಬರುವ ನಿರೀಕ್ಷೆ ಇದೆ.

ಈ ಬಾರಿ ಮರುಸೇರ್ಪಡೆಯಾಗಿರುವ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ಬಳಗ ಕೂಡ ವಿಜಯವೇದಿಕೆಯ ಮೇಲೆ ಸಂಭ್ರಮಿಸುವ ಛಲದಲ್ಲಿದೆ. ನಾನ್ ಒಲಿಂಪಿಕ್ ವಿಭಾಗದ ಸ್ಕ್ವಾಷ್‌ನಲ್ಲಿ ದೀಪಿಕಾ ಪಳ್ಳಿಕಲ್ ಅವರ ಬಳಗವೂ ಜಯಭೇರಿ ಬಾರಿಸುವತ್ತ ಚಿತ್ತ ನೆಟ್ಟಿದೆ.

ಭಾರತ ಹಾಕಿ ತಂಡದ ಮನಪ್ರೀತ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್ ಮತ್ತು ಪಿ.ಆರ್. ಶ್ರೀಜೇಶ್
ಭಾರತ ಹಾಕಿ ತಂಡದ ಮನಪ್ರೀತ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್ ಮತ್ತು ಪಿ.ಆರ್. ಶ್ರೀಜೇಶ್

ಹಾಕಿಯಲ್ಲಿ ಭರವಸೆ

ಹೋದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತದ ಪುರುಷರ ತಂಡ ಮತ್ತು ನಾಲ್ಕನೇ ಸ್ಥಾನ ಪಡೆದಿದ್ದ ಮಹಿಳೆಯರ ತಂಡಗಳು ಇಲ್ಲಿ ಪದಕ ಭರವಸೆ ಮೂಡಿಸಿವೆ. ಬಲಿಷ್ಠ ಆಸ್ಟ್ರೇಲಿಯಾ ತಂಡದ ಸವಾಲು ಮೀರಿನಿಂತರೆ ಇದು ಅಸಾಧ್ಯವೇನಲ್ಲ.

ತಂಡ ಕ್ರೀಡೆಗಳಲ್ಲಿ ಹಾಕಿಯಿಂದಲೇ ಹೆಚ್ಚು ನಿರೀಕ್ಷೆ ಇದೆ. ಮನಪ್ರೀತ್ ಸಿಂಗ್ ನಾಯಕತ್ವದ ತಂಡದಲ್ಲಿ ಗುರ್ಜಂತ್ ಸಿಂಗ್, ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಅವರಂತಹ ಅನುಭವಿ ಆಟಗಾರರೂ ಇದ್ದಾರೆ. ಸವಿತಾ ಪೂನಿಯಾ ನೇತೃತ್ವದ ಮಹಿಳಾ ಬಳಗವೂ ‘ಚಕ್‌ ದೇ ಇಂಡಿಯಾ’ ಎಂದು ವಿಜಯಘೋಷ ಮಾಡಲು ತುದಿಗಾಲಿನಲ್ಲಿ ನಿಂತಿದೆ.

ಸಿಂಧು ಧ್ವಜಧಾರಿ

ಬರ್ಮಿಂಗ್‌ಹ್ಯಾಮ್: ಎರಡು ಒಲಿಂಪಿಕ್ಸ್ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಗುರುವಾರ ಕಾಮನ್‌ವೆಲ್ತ್ ಕ್ರೀಡಾಕೂಟದ ಪಥಸಂಚಲನದಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸುವರು.

ಟೋಕಿಯೊ ಒಲಿಂಪಿಕ್ ಚಿನ್ನದ ವಿಜೇತ ಅಥ್ಲೀಟ್ ನೀರಜ್ ಚೋಪ್ರಾ ಅವರು ಈ ಮೊದಲು ಧ್ವಜಧಾರಿಯಾಗಿ ಆಯ್ಕೆಯಾಗಿದ್ದರು. ಆದರೆ, ಅವರು ಈಚೆಗೆ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಗಾಯಗೊಂಡಿದ್ದು, ಕಾಮನ್‌ವೆಲ್ತ್ ಕೂಟದಿಂದ ಹಿಂದೆ ಸರಿದಿದ್ದಾರೆ. ಆದ್ದರಿಂದ ಸಿಂಧು ಅವರನ್ನು ಭಾರತ ಒಲಿಂಪಿಕ್ ಸಂಸ್ಥೆಯು ಆಯ್ಕೆ ಮಾಡಿದೆ.

ವಿದ್ಯಾರ್ಥಿಗಳಿಂದ ಪದಕ ವಿನ್ಯಾಸ

ಈ ಬಾರಿಯ ಕ್ರೀಡಾಕೂಟದ ಪದಕಗಳನ್ನು ಅಂಬರ್ ಅಲಿಸ್‌ ಫ್ರಾನ್ಸೆಸ್ಕಾ ವಿಲ್‌ಕಾಕ್ಸ್ ಮತ್ತು ಕ್ಯಾತರಿನಾ ರಾಡ್ರಿಗಸ್‌ ಸಿಯೆರೊ ಎಂಬ ವಿದ್ಯಾರ್ಥಿಗಳು ವಿನ್ಯಾಸ ಮಾಡಿದ್ದಾರೆ.

ಬ್ರಿಟಿಷ್‌ ಸಾಮ್ರಾಜ್ಯದ ಆಟಗಳಿಂದ ಕಾಮನ್‌ವೆಲ್ತ್ ಗೇಮ್ಸ್‌ವರೆಗೆ..

1930ರಲ್ಲಿ ಆರಂಭವಾದ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು 1950ರವರೆಗೆಬ್ರಿಟಿಷ್‌ ಸಾಮ್ರಾಜ್ಯದ ಗೇಮ್‌ಗಳೆಂದು ಕರೆಯಲಾಗುತ್ತಿತ್ತು. ಪ್ರತಿ ನಾಲ್ಕು ವರ್ಷಗಳವರೆಗೆ ನಡೆಯುವ ಕೂಟವನ್ನು 1954–66ರವರೆಗೆ ‘ಬ್ರಿಟಿಷ್‌ ಎಂಪೈರ್‌ ಮತ್ತು ಕಾಮನ್‌ವೆಲ್ತ್ ಗೇಮ್ಸ್‘ ಎನ್ನಲಾಗುತ್ತಿತ್ತು. ತರುವಾಯ ಇದು ಕಾಮನ್‌ವೆಲ್ತ್ ಕೂಟವಾಗಿ ಬದಲಾಯಿತು.

ಚೊಚ್ಚಲ ಕೂಟವನ್ನು ಆಯೋಜಿಸಿದ್ದು ಕೆನಡಾದ ಹ್ಯಾಮಿಲ್ಟನ್‌ ನಗರ. ಕೆನಡಾದ ಪತ್ರಕರ್ತ ಮೆಲ್ವಿಲ್ಲೆ ಮಾರ್ಕ್ಸ್ ರಾಬಿನ್ಸನ್ ಅವರನ್ನು ಗೇಮ್ಸ್‌ನ ಜನಕ ಎಂದು ಕರೆಯಲಾಗುತ್ತದೆ. ಬ್ರಿಟಿಷರು ಆಳಿದ ದೇಶಗಳಲ್ಲಿ, ಹಬ್ಬಗಳ ವೇಳೆ ಆಯೋಜಿಸುವ ಆಟಗಳಿಂದ ಸ್ಫೂರ್ತಿ ಪಡೆದು ಕಾಮನ್‌ವೆಲ್ತ್ ಗೇಮ್ಸ್ ಶುರುವಾದವು.

1942 ಮತ್ತು 1946ರ ಕೂಟಗಳು ವಿಶ್ವ ಎರಡನೇ ಮಹಾಯುದ್ಧದ ಕಾರಣ ನಡೆಯಲಿಲ್ಲ.

ಸಿಜಿಎಫ್‌ ಮೇಲ್ವಿಚಾರಣೆ: ಕಾಮನ್‌ವೆಲ್ತ್ ಕೂಟದ ಮೇಲ್ವಿಚಾರಣೆಯ ಹೊಣೆಯನ್ನು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಷನ್ (ಸಿಜಿಎಫ್‌) ನೋಡಿಕೊಳ್ಳುತ್ತದೆ. ಕ್ರೀಡಾ ಚಟುವಟಿಕೆಗಳು, ಆತಿಥ್ಯ ದೇಶಗಳ ಆಯ್ಕೆಯು ಸಿಜಿಎಫ್‌ನ ಜವಾಬ್ದಾರಿಯಾಗಿದೆ. ಕಾಮನ್‌ವೆಲ್ತ್ ನೇಷನ್ಸ್‌ನಲ್ಲಿ ಸದ್ಯ 54 ಸದಸ್ಯ ರಾಷ್ಟ್ರಗಳಿದ್ದು 72 ತಂಡಗಳು ಭಾಗವಹಿಸುತ್ತಿವೆ.

ಅತಿ ಹೆಚ್ಚು ಬಾರಿ ಗೇಮ್ಸ್ ಆಯೋಜಿಸಿದ್ದು ಆಸ್ಟ್ರೇಲಿಯಾ (5). ಕಳೆದ ಆವೃತ್ತಿಗೂ (2018) ಆ ದೇಶವೇ ಆತಿಥ್ಯ ವಹಿಸಿತ್ತು. ದೆಹಲಿಯಲ್ಲಿ ನಡೆದ 2010ರ ಆವೃತ್ತಿಯಲ್ಲಿ ಭಾರತ 101 ಪದಕ ಜಯಿಸಿ 2ನೇ ಸ್ಥಾನ ಗಳಿಸಿತ್ತು.

ಲವ್ಲಿನಾ ಕೋಚ್‌ಗೆ ಕೋಣೆ ಬಿಟ್ಟುಕೊಟ್ಟ ಮುಖ್ಯ ಕೋಚ್

ನವದೆಹಲಿ: ಭಾರತ ಮಹಿಳಾ ಬಾಕ್ಸಿಂಗ್ ತಂಡದ ಮುಖ್ಯ ಕೋಚ್ ಭಾಸ್ಕರ್ ಭಟ್ ಅವರು ಕಾಮನ್‌ವೆಲ್ತ್ ಕ್ರೀಡಾಗ್ರಾಮದಲ್ಲಿ ತಮಗೆ ಲಭಿಸಿದ್ದ ಕೋಣೆಯನ್ನು ತೆರವುಗೊಳಿಸಿದ್ದಾರೆ. ಒಲಿಂಪಿಯನ್ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರ ವೈಯಕ್ತಿಕ ಕೋಚ್ ಸಂಧ್ಯಾ ಗುರಂಗ್ ಅವರಿಗೆ ಭಾಸ್ಕರ್ ತಮ್ಮ ಕೋಣೆಯನ್ನು ಬಿಟ್ಟುಕೊಟ್ಟಿದ್ದಾರೆ. ಅವರು ಆಯೋಜಕರಿಂದ ಮಾನ್ಯತೆ ಪಡೆದ ಹೋಟೆಲ್‌ ಕೋಣೆಯಲ್ಲಿ ವಾಸ್ತವ್ಯ ಮಾಡಿದ್ದಾರೆ. ‘ಹೊಟೇಲ್‌ನಿಂದ ಕ್ರೀಡಾಗ್ರಾಮಕ್ಕೆ ಹತ್ತು ನಿಮಿಷದ ನಡಿಗೆಯ ಮೂಲಕ ತಲುಪಬಹುದು’ ಎಂದು ಭಟ್ ತಿಳಿಸಿದ್ದಾರೆ. ‘ಸ್ವಯಂಪ್ರೇರಿತನಾಗಿ ಕೋಣೆಯನ್ನು ಸಂಧ್ಯಾಗೆ ಬಿಟ್ಟುಕೊಟ್ಟಿರುವೆ. ಇದು ನಮ್ಮ ತಂಡದ ಆಂತರಿಕ ವಿಷಯ. ಇಂತಹ ವಿಷಯಗಳನ್ನು ನಮ್ಮೊಳಗೆ ಬಗೆಹರಿಸಿಕೊಳ್ಳಬೇಕು’ ಎಂದೂ ಭಟ್ ಹೇಳಿದ್ದಾರೆ.

ಜಸ್ಲೀನ್ ಸಿಂಗ್‌ಗೆ ಅವಕಾಶ

ಕೂಟದಲ್ಲಿ ಸ್ಪರ್ಧಿಸಲಿರುವ ಭಾರತ ಜುಡೊ ತಂಡದಲ್ಲಿ ಜಸ್ಲೀನ್ ಸಿಂಗ್ ಅವರ ಆಯ್ಕೆಗೆ ದೆಹಲಿ ಹೈಕೋರ್ಟ್ ಬುಧವಾರ ಹಸಿರುನಿಶಾನೆ ತೋರಿದೆ.

ಅವರ ಮೇಲಿದ್ದ ಅಶಿಸ್ತಿನ ಆರೋಪದಿಂದ ಅವರನ್ನು ಖುಲಾಸೆಗೊಳಿಸಿರುವ ಹೈಕೋರ್ಟ್ ಕಾಮನ್‌ವೆಲ್ತ್ ಕೂಟಕ್ಕೆ ತೆರಳಲು ಅನುಮತಿ ನೀಡಿದೆ ಎಂದು ಐಒಎ ಕಾರ್ಯದರ್ಶಿ ರಾಜೀವ್ ಮೆಹ್ತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT