ಹರ್ಷಿತಾ ಮಿಂಚಿನಾಟ: ಭಾರತ ಫೈನಲ್‌ಗೆ

7
18 ವರ್ಷದೊಳಗಿನವರ ಏಷ್ಯಾ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್: ಇಂದು ಅಂತಿಮ ಹಣಾಹಣಿ

ಹರ್ಷಿತಾ ಮಿಂಚಿನಾಟ: ಭಾರತ ಫೈನಲ್‌ಗೆ

Published:
Updated:
Deccan Herald

ಬೆಂಗಳೂರು: ಎದುರಾಳಿಗಳನ್ನು ಕಂಗಾಲಾಗಿಸಿದ ಭಾರತ ತಂಡದವರು 18 ವರ್ಷದೊಳಗಿನ ಬಾಲಕಿಯರ ಏಷ್ಯಾ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಫೈನಲ್‌ಗೆ ಲಗ್ಗೆ ಇರಿಸಿದರು. ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಹಾಂಕಾಂಗ್ ತಂಡವನ್ನು ಭಾರತ 83–38ರಿಂದ ಮಣಿಸಿತು. ಮತ್ತೊಂದು ಸೆಮಿಫೈನಲ್‌ನಲ್ಲಿ ಕಜಕಸ್ತಾನ 76–56ರಿಂದ ಸಿರಿಯಾವನ್ನು ಮಣಿಸಿತು. ಫೈನಲ್‌ ಶನಿವಾರ ನಡೆಯಲಿದೆ.

ಕನ್ನಡತಿ ಹರ್ಷಿತಾ ಕಲ್ಲೇಟಿರ ಬೋಪಯ್ಯ (18 ಪಾಯಿಂಟ್ಸ್‌, 16 ರೀಬೌಂಡ್ಸ್, 2 ಬ್ಲಾಕ್‌) ಅವರ ಆಲ್‌ರೌಂಡ್ ಆಟದ ಮೂಲಕ ಆರಂಭದಲ್ಲೇ ಭಾರತ ಭಾರಿ ಮುನ್ನಡೆ ಸಾಧಿಸಿತು. ಮೊದಲ ಕ್ವಾರ್ಟರ್‌ ಮುಗಿದಾಗ ಭಾರತ 23–8ರಿಂದ ಮುನ್ನಡೆದಿತ್ತು. ಪ್ರಥಮಾರ್ಧದ ಮುಕ್ತಾಯಕ್ಕೆ ಆತಿಥೇಯರ ಮುನ್ನಡೆ 51–21ಕ್ಕೆ ಏರಿತು. ತೀವ್ರ ಒತ್ತಡಕ್ಕೆ ಸಿಲುಕಿದ ಹಾಂಕಾಂಗ್‌ಗೆ ಮೂರನೇ ಕ್ವಾರ್ಟರ್‌ನ 12ನೇ ನಿಮಿಷಗಳ ವರೆಗೂ ಒಂದು ಪಾಯಿಂಟ್ ಕೂಡ ಕಲೆ ಹಾಕಲು ಆಗಲಿಲ್ಲ. ಈ ಕ್ವಾರ್ಟರ್‌ನಲ್ಲಿ ಭಾರತ 17 ಪಾಯಿಂಟ್‌ ಗಳಿಸಿದರೆ ಹಾಂಕಾಂಗ್ ಗಳಿಕೆ ಕೇವಲ ಎರಡು ಪಾಯಿಂಟ್‌!

ನಾಲ್ಕನೇ ಕ್ವಾರ್ಟರ್‌ನಲ್ಲಿ ತಿರುಗೇಟು ನೀಡಲು ಹಾಂಕಾಂಗ್ ಪ್ರಯತ್ನಿಸಿತು. ಆದರೆ ಭಾರತ ಭಾರಿ ಮುನ್ನಡೆಯಿಂದ ಗೆದ್ದಿತು.

ನೌರಾ ಹೋರಾಟಕ್ಕೆ ಸಿಗದ ಫಲ: ಕಜಕಸ್ತಾನ ಎದುರಿನ ಪಂದ್ಯದಲ್ಲಿ ಸಿರಿಯಾದ ನೌರಾ ಶಹಾರ ಅಮೋಘ ಆಟದ ಮೂಲಕ ಮಿಂಚು ಹರಿಸಿದರು. ಆದರೆ ಅವರ ಹೋರಾಟಕ್ಕೆ ಫಲ ಸಿಗಲಿಲ್ಲ. 23 ಪಾಯಿಂಟ್ಸ್ ಮತ್ತು 19 ರೀಬೌಂಡ್ಸ್‌ ಮೂಲಕ ಗಮನ ಸೆಳೆದರು.

ಮೊದಲ ಕ್ವಾರ್ಟರ್‌ನಲ್ಲಿ ಒಂದು ಪಾಯಿಂಟ್‌ ಮುನ್ನಡೆ (18–17) ಗಳಿಸಿದ ಸಿರಿಯಾ, ದ್ವಿತೀಯ ಕ್ವಾರ್ಟರ್‌ನಲ್ಲಿ ವಿಶ್ವಾಸದಿಂದಲೇ ಕಣಕ್ಕೆ ಇಳಿದಿತ್ತು. ಆದರೆ ಕಜಕಸ್ತಾನ 20–16ರ ಮುನ್ನಡೆ ಸಾಧಿಸಿತು. ವಿರಾಮದ ನಂತರ ಕಜಕಸ್ತಾನ ಆಟಗಾರ್ತಿಯರು ಪ್ರಬಲ ಪೈಪೋಟಿ ನೀಡಿ ಎದುರಾಳಿ ಆಟಗಾರ್ತಿಯರನ್ನು ದಂಗುಬಡಿಸಿದರು. ಮೂರನೇ ಕ್ವಾರ್ಟರ್‌ನಲ್ಲಿ 18–6ರ ಮುನ್ನಡೆ ಗಳಿಸಿದ ತಂಡ ಕೊನೆಯ ಕ್ವಾರ್ಟರ್‌ನಲ್ಲಿ ಐದು ಪಾಯಿಂಟ್‌ಗಳ (21–16) ಮುನ್ನಡೆ ಸಾಧಿಸಿ ಪಂದ್ಯ ಗೆದ್ದಿತು. 

ಇರಾನ್‌ಗೆ ಐದನೇ ಸ್ಥಾನ: ಐದು ಮತ್ತು ಆರನೇ ಸ್ಥಾನ ನಿರ್ಣಯಿಸುವಕ್ಕಾಗಿ ಸಂಜೆ ನಡೆದ ಪಂದ್ಯದಲ್ಲಿ ಇರಾನ್‌ 63–51ರಿಂದ ಸಿಂಗಪುರವನ್ನು ಮಣಿಸಿತು. ಇರಾನ್ ಪರವಾಗಿ ಫಾತಿಮಾ ಅಘಸಡೆಗನ್‌ 29 ಪಾಯಿಂಟ್‌ ಗಳಿಸಿದರು. ನೇಗಿನ್ ರಸೊಲಿಪೊರ್‌ 11 ರೀಬೌಂಡ್ ಮೂಲಕ ಮಿಂಚಿದರು. ಸಿಂಗಪುರಕ್ಕೆ ಎಸ್ತೆರ್ ಅಕಿನ್‌ರೆಸೊಯೆ 14 ಪಾಯಿಂಟ್ ಗಳಿಸಿಕೊಟ್ಟರೆ, ಕಾಂಗ್ ಯೀ ಟಾನ್‌ ಒಂಬತ್ತು ರೀಬೌಂಡ್‌ಗಳ ಮೂಲಕ ಗಮನ ಸೆಳೆದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !