ಗುರುವಾರ , ಫೆಬ್ರವರಿ 25, 2021
19 °C

ಚಿಲಿ ವಿರುದ್ಧ ಗೆದ್ದ ಭಾರತ ಮಹಿಳಾ ಜೂನಿಯರ್ ಹಾಕಿ ತಂಡ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸ್ಯಾಂಟಿಯಾಗೊ, ಚಿಲಿ: ಭಾರತ ಮಹಿಳಾ ಜೂನಿಯರ್ ಹಾಕಿ ತಂಡ ತನ್ನ ಅಜೇಯ ಓಟವನ್ನು ಮುಂದುವರಿಸಿದೆ. ಚಿಲಿ ರಾಷ್ಟ್ರೀಯ ತಂಡದ ಎದುರು ಭಾನುವಾರ ನಡೆದ ಪಂದ್ಯದಲ್ಲಿ ಜೂನಿಯರ್ ಆಟಗಾರ್ತಿಯರು 2–0ಯಿಂದ ಜಯಭೇರಿ ಮೊಳಗಿಸಿದರು.

ಚಿಲಿ ಪ್ರವಾಸದಲ್ಲಿ ಐದನೇ ಪಂದ್ಯವಾಡಿದ ತಂಡಕ್ಕೆ ಸಂಗೀತಾ ಕುಮಾರಿ (48ನೇ ನಿಮಿಷ) ಹಾಗೂ ಸುಶ್ಮಾ ಕುಮಾರಿ (56ನೇ ನಿಮಿಷ) ಗೋಲು ತಂದುಕೊಟ್ಟರು.

ಪಂದ್ಯದ ಆರಂಭದಲ್ಲಿ ಉಭಯ ತಂಡಗಳಿಗೆ ಗೋಲು ಗಳಿಸುವ ಹಲವು ಅವಕಾಶಗಳು ಇದ್ದವು. ಆದರೆ ಎರಡೂ ಕಡೆಯ ಡಿಫೆನ್ಸ್ ವಿಭಾಗ ಬಲಿಷ್ಠವಾಗಿದ್ದರಿಂದ ಯಶಸ್ಸು ಸಿಗಲಿಲ್ಲ. ಎರಡನೇ ಕ್ವಾರ್ಟರ್‌ನಲ್ಲಿ ಭಾರತದ ಆಟಗಾರ್ತಿಯರು ತುಸು ಒತ್ತಡದಲ್ಲಿದ್ದಂತೆ ಕಂಡು ಬಂದರು. ಸತತ ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಆತಿಥೇಯ ತಂಡಕ್ಕೆ ನೀಡಿದರು. ಆದರೆ ಈ ಹಂತದಲ್ಲೂ ಡಿಫೆನ್ಸ್ ವಿಭಾಗ ಭಾರತದ ರಕ್ಷಣೆಗೆ ಬಂದಿತು. ಮೂರನೇ ಕ್ವಾರ್ಟರ್‌ನಲ್ಲೂ ಇದು ಮರುಕಳಿಸಿತು.

ಆದರೆ ಭಾರತದ ಆಟಗಾರ್ತಿಯರ ಸಾಂಘಿಕ ಪ್ರಯತ್ನಕ್ಕೆ ನಾಲ್ಕನೇ ಕ್ವಾರ್ಟರ್‌ನಲ್ಲಿ ಫಲ ಸಿಕ್ಕಿತು. ಸೊಗಸಾದ ಗೋಲು ದಾಖಲಿಸಿದ ಸಂಗೀತಾ ಮುನ್ನಡೆ ತಂದುಕೊಟ್ಟರು. 49ನೇ ನಿಮಿಷದಲ್ಲಿ ಆತಿಥೇಯ ತಂಡಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಆದರೆ ಭಾರತದ ಆಟಗಾರ್ತಿಯರು ಈ ಪ್ರಯತ್ನವನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾದರು.

56ನೇ ನಿಮಿಷದಲ್ಲಿ ಭಾರತಕ್ಕೆ ದೊರೆತ ಪೆನಾಲ್ಟಿ ಕಾರ್ನರ್ ಪಂದ್ಯದ ಫಲಿತಾಂಶವನ್ನು ನಿರ್ಧರಿಸಿತು. ಸುಶ್ಮಾ ಕುಮಾರಿ ತೋರಿದ ಕೈಚಳಕ ಗೆಲುವನ್ನು ಖಚಿತಪಡಿಸಿತು.

ಐದು ಪಂದ್ಯಗಳ ಪೈಕಿ ಭಾರತ ತಂಡಕ್ಕೆ ಇದು ನಾಲ್ಕನೇ ಜಯವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು