ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜುಗೆ ವರ್ಷದ ಮಹಿಳೆ ಪ್ರಶಸ್ತಿ ಗೌರವ

Last Updated 2 ಡಿಸೆಂಬರ್ 2021, 14:25 IST
ಅಕ್ಷರ ಗಾತ್ರ

ಮೊನಾಕೊ (ಪಿಟಿಐ): ಭಾರತದ ದಿಗ್ಗಜ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಅವರಿಗೆ ವರ್ಷದ ಮಹಿಳೆ ಪ್ರಶಸ್ತಿಗಾಗಿ ವಿಶ್ವ ಅಥ್ಲೆಟಿಕ್ಸ್ (ಡಬ್ಲ್ಯುಎ) ಆಯ್ಕೆ ಮಾಡಿದೆ. ಈ ಗೌರವಕ್ಕೆ ಪಾತ್ರರಾದ ಭಾರತದ ಮೊದಲ ಅಥ್ಲೀಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರತಿಭಾನ್ವಿತ ಅಥ್ಲೀಟ್‌ಗಳ ಬೆಳವಣಿಗೆಗೆ ಮಹತ್ವದ ಪಾತ್ರ ವಹಿಸುವ ಮತ್ತು ಲಿಂಗಸಮಾನತೆಯನ್ನು ಪ್ರತಿಪಾದಿಸುವ ಅಥ್ಲೀಟ್‌ಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

44 ವರ್ಷದ ಅಂಜು 2003ರ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಮಹಿಳೆಯರ ಲಾಂಗ್ ಜಂಪ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದರು.

‘ಮಾಜಿ ಲಾಂಗ್‌ ಜಂಪ್ ಅಥ್ಲೀಟ್ ಅಂಜು ಅವರು ಭಾರತದ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದಾರೆ. 2016ರಲ್ಲಿ ಅವರು ಬಾಲಕಿಯರಿಗೆ ತರಬೇತಿ ನೀಡಲು ಅಕಾಡೆಮಿ ಆರಂಭಿಸಿದ್ದಾರೆ. ಇಲ್ಲಿ ತರಬೇತಿ ಪಡೆದ ಕ್ರೀಡಾಪಟುವೊಬ್ಬರು ಈಚೆಗೆ 20 ವರ್ಷದೊಳಗಿನ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಪದಕ ಜಯಿಸಿದ್ದಾರೆ’ ಎಂದು ವಿಶ್ವ ಅಥ್ಲೆಟಿಕ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ನಾಲ್ಕು ತಿಂಗಳುಗಳ ಹಿಂದೆ ನಡೆದಿದ್ದ 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಶೈಲಿ ಸಿಂಗ್ ಅವರು ಅಂಜು ಅವರ ಅಕಾಡೆಮಿಯಲ್ಲಿ ತರಬೇತಿ ಪಡೆದವರು.

2019ರಲ್ಲಿ ಭಾರತದ ಅಥ್ಲೆಟಿಕ್ಸ್ ದಂತಕತೆ ಪಿ.ಟಿ. ಉಷಾ ಅವರಿಗೆ ವಿಶ್ವ ಅಥ್ಲೆಟಿಕ್ಸ್ ಸಂಸ್ಥೆಯು ‘ವೆಟರನ್‌ ಪಿನ್–2019’ ಪುರಸ್ಕಾರ ನೀಡಿತ್ತು. ಕ್ರೀಡೆಯ ಬೆಳವಣಿಗೆಯಲ್ಲಿ ಅವರು ನೀಡಿದ್ದ ಕಾಣಿಕೆಗಾಗಿ ಈ ಗೌರವ ನೀಡಲಾಗಿತ್ತು.

‘ಪ್ರತಿದಿನ ಬೆಳಿಗ್ಗೆ ದೇಶದ ಕ್ರೀಡೆಗೆ ನಾನೇನು ಮರಳಿಸಬಲ್ಲೆ ಎಂದು ಯೋಚಿಸುತ್ತೇನೆ. ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತೇನೆ. ಅದರಿಂದ ಕೆಲವು ಬಾಲಕಿಯರು ಉನ್ನತ ಸಾಧನೆ ಮಾಡುತ್ತಿರುವುದು ಸಂತಸದ ವಿಷಯ. ನನ್ನ ಪ್ರಯತ್ನ, ಪರಿಶ್ರಮಗಳನ್ನು ಗುರುತಿಸಿರುವ ಅಥ್ಲೆಟಿಕ್ಸ್‌ ಸಂಸ್ಥೆಗೆ ಧನ್ಯವಾದಗಳು’ ಎಂದು ಅಂಜು ಟ್ವೀಟ್ ಮಾಡಿದ್ದಾರೆ.

ಕೇರಳದ ಅಂಜು 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಹೋದ ವರ್ಷ ಅವರು ಭಾರತ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್‌ಐ) ಸೀನಿಯರ್ ಉಪಾಧ್ಯಕ್ಷೆಯಾಗಿ ನೇಮಕವಾಗಿದ್ದರು.

ಒಲಿಂಪಿಕ್ಸ್ ಚಾಂಪಿಯನ್‌ ಜಮೈಕಾದ ಎಲೈನ್ ಥಾಮ್ಸನ್ ಹೆರಾ ಮತ್ತು ನಾರ್ವೆಯ ಕಾರ್ಸ್ಟನ್ ವಾರ್‌ಹೋಮ್ ಅವರಿಗೆ ವರ್ಷದ ಅಥ್ಲೀಟ್ ಪುರಸ್ಕಾರ ಪ್ರದಾನ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT