ಶನಿವಾರ, ಡಿಸೆಂಬರ್ 7, 2019
21 °C
ಐಎನ್‌ಆರ್‌ಸಿ 4ನೇ ಹಂತದ ಎರಡನೇ ದಿನದ ಸ್ಪರ್ಧೆ

ಕರ್ಣ ಕಡೂರು ನಿಖಿಲ್‌ ಜೋಡಿಗೆ ಮುನ್ನಡೆ

Published:
Updated:
Deccan Herald

ಚಿಕ್ಕಮಗಳೂರು: ಕಾಫಿ ಕಣಿವೆಯಲ್ಲಿ ನಡೆಯುತ್ತಿರುವ ಐಎನ್‌ಆರ್‌ಸಿ (ಇಂಡಿಯನ್‌ ನ್ಯಾಷನಲ್‌ ರ‍್ಯಾಲಿ ಚಾಂಪಿಯನ್‌) ನಾಲ್ಕನೇ ಹಂತದ ಎರಡನೇ ದಿನ ಶನಿವಾರ ನಡೆದ ಸ್ಪರ್ಧೆಯಲ್ಲಿ ಅರ್ಕಾ ಮೋಟಾರ್‌ ಸ್ಪೋರ್ಟ್ಸ್‌ ತಂಡದ ಬೆಂಗಳೂರಿನ ಕರ್ಣ ಕಡೂರು ಮತ್ತು ಸಹಚಾಲಕ ನಿಖಿಲ್‌ ವಿಠಲ್‌ ಪೈ ಜೋಡಿ ಮಿಂಚಿನ ವೇಗದಲ್ಲಿ ಕಾರು ಚಾಲನೆ ಮಾಡಿ ಮುನ್ನಡೆ ಸಾಧಿಸಿದರು.

ಕಾಫಿ ಡೇ ಪ್ರಾಯೋಜಕತ್ವದಲ್ಲಿ ಚಿಕ್ಕಮಗಳೂರು ಮೋಟಾರ್‌ ಸ್ಪೋರ್ಟ್ಸ್‌ ಕ್ಲಬ್‌ ವತಿಯಿಂದ ಆಯೋಜಿಸಿರುವ ಐಎನ್‌ಆರ್‌ಸಿ ರ‍್ಯಾಲಿ ಪ್ರಮುಖ ಘಟ್ಟದಲ್ಲಿ ಬೆಂಗಳೂರಿನ ಕರ್ಣ ಮತ್ತು ನಿಖಿಲ್‌ ಜೋಡಿ 80 ಕಿ.ಮೀ ಮಾರ್ಗವನ್ನು 1 ಗಂಟೆ 12 ನಿಮಿಷ 50 ಸೆಕೆಂಡ್‌ಗಳಲ್ಲಿ ಕ್ರಮಿಸಿದರು.

ಚಾಂಪಿಯನ್ಸ್‌ ತಂಡದ ಚಾಲಕ ಕೊಡಗಿನ ಬೋಪಯ್ಯ –ಗಗನ್‌ ಕುರುಂಬಯ್ಯ ಅವರು 1 ಗಂಟೆ 13 ನಿಮಿಷ 49.7 ಸೆಕೆಂಡ್‌ಗಳಲ್ಲಿ ಕ್ರಮಿಸಿ ಮೆಚ್ಚುಗೆ ಗಳಿಸಿದರು.

ಮಹೀಂದ್ರಾ ಅಡ್ವೆಂಚರ್‌ ತಂಡದ ಕೋಲ್ಕತ್ತದ ಅಮಿತ್ರಾಜಿತ್‌ ಘೋಷ್‌ ಮತ್ತು ಸಹಚಾಲಕ ಮಂಗಳೂರಿನ ಅಶ್ವಿನ್‌ ನಾಯಕ್‌ ಅವರು 1 ಗಂಟೆ 14 ನಿಮಿಷ 6.2 ಸೆಕೆಂಡ್‌ಗಳಲ್ಲಿ ತಲುಪಿ ಸಾಧನೆ ಮಾಡಿದರು.

ಚಟ್ನಹಳ್ಳಿ, ಚಂದ್ರಾಪುರ, ಕಮ್ಮರಗೋಡು ಕಾಫಿ ತೋಟದ ಅಂಕುಡೊಂಕಿನ ಮಾರ್ಗದಲ್ಲಿ ಪ್ರಮುಖ ಘಟ್ಟದ ಒಟ್ಟು ಆರು ಹಂತಗಳು ನಡೆದವು. ಬೆಳಿಗ್ಗೆ 8 ಗಂಟೆಗೆ ಸ್ಪರ್ಧೆ ಶುರುವಾಗಿ 5 ಗಂಟೆವರೆಗೆ ನಡೆಯಿತು. 46 ಕಾರುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಈ ಪೈಕಿ 6 ಕಾರುಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು, ಅವರು ಮಾರ್ಗ ಕ್ರಮಿಸಲು ಸಾಧ್ಯವಾಗಿಲ್ಲ.

ಫಾಲ್ಕನ್‌ ತಂಡದ ಚಾಲಕ ವಿಕ್ರಂ ರಾವ್‌ ಮತ್ತು ಸಹಚಾಲಕ ಸೋಮಯ್ಯ ಅವರ ಕಾರು ಚಂದ್ರಾಪುರ ತೋಟದ ಮಾರ್ಗದಲ್ಲಿ ಪಲ್ಟಿಯಾಯಿತು. ಕಾಫಿ ಕಣಿವೆ ಅಂಕುಡೊಂಕಿನ ಮಾರ್ಗಗಳಲ್ಲಿ ಶರವೇಗದ ಕಾರು ಚಾಲನೆಯನ್ನು ಸುತ್ತಮುತ್ತಲಿನ ಹಳ್ಳಿಗಳ ಜನರು ವೀಕ್ಷಿಸಿದರು.

ಐಎನ್‌ಆರ್‌ಸಿ 4ನೇ ಹಂತದ ಅಂತಿಮ ಸ್ಪರ್ಧೆಗಳು ಭಾನುವಾರ ನಡೆಯಲಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು