ಶನಿವಾರ, ಸೆಪ್ಟೆಂಬರ್ 18, 2021
28 °C

ಒಲಿಂಪಿಕ್ಸ್‌ ಸಾಧಕರಿಗೆ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದು ದೇಶದ ಹಿರಿಮೆ ಹೆಚ್ಚಿಸಿದ್ದ ಕ್ರೀಡಾಪಟುಗಳು ಸೋಮವಾರ ತವರಿಗೆ ಮರಳಿದರು. ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು.

ಚಿನ್ನದ ಹುಡುಗ ನೀರಜ್‌ ಚೋಪ್ರಾ, ಪುರುಷರ ಮತ್ತು ಮಹಿಳಾ ಹಾಕಿ ತಂಡಗಳ ಸದಸ್ಯರು ಹಾಗೂ ಇತರ ಕ್ರೀಡಾಪಟುಗಳು ಟೋಕಿಯೊದಿಂದ ಹಿಂತಿರುಗುತ್ತಿದ್ದಾರೆ ಎಂಬ ವಿಷಯ ಗೊತ್ತಾದ ಕೂಡಲೇ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಅವರೆಲ್ಲಾ ಪದಕ ವೀರರ ಹೆಸರುಗಳನ್ನು ಹೇಳುತ್ತಾ ಜಯಘೋಷ ಮೊಳಗಿಸಿದರು. ಮಾಧ್ಯಮದವರೂ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. 

ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ಪ್ರಧಾನ ನಿರ್ದೇಶಕ ಸಂದೀಪ್‌ ಪ್ರಧಾನ್‌ ನೇತೃತ್ವದ ಅಧಿಕಾರಿಗಳ ತಂಡವು ಕ್ರೀಡಾಪಟುಗಳಿಗೆ ಹೂಗುಚ್ಛ ನೀಡಿ ಬರಮಾಡಿಕೊಂಡಿತು. ಭಾರತೀಯ ಅಥ್ಲೆಟಿಕ್ಸ್‌ ಫೆಡರೇಷನ್‌ (ಎಎಫ್‌ಐ) ಮುಖ್ಯಸ್ಥ ಆದಿಲ್‌ ಸುಮರಿವಾಲಾ ಕೂಡ ಜೊತೆಗಿದ್ದರು.

ಹೊರಭಾಗದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ನೆರೆದಿರುವುದನ್ನು ಮನಗಂಡ ವಿಮಾನ ನಿಲ್ದಾಣದ ಸಿಬ್ಬಂದಿ, ಕ್ರೀಡಾಪಟುಗಳನ್ನು ಬೇರೊಂದು ಮಾರ್ಗದ ಮೂಲಕ ಹೊರಗೆ ಕಳುಹಿಸಿದರು. ನಿಲ್ದಾಣದಲ್ಲಿದ್ದವರ ಪೈಕಿ ಅನೇಕರು ನೀರಜ್‌ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಅವರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಹರಸಾಹಸಪಟ್ಟರು.

ಕೋವಿಡ್‌ ಹಿನ್ನೆಲೆಯಲ್ಲಿ ಕ್ರೀಡಾಪಟುಗಳು ತಾವು ಪಾಲ್ಗೊಳ್ಳುವ ಸ್ಪರ್ಧೆಯ ಪದಕ ಪ್ರದಾನ ಮುಗಿದ 48 ಗಂಟೆಗಳೊಳಗೆ ಕ್ರೀಡಾಗ್ರಾಮ ತೊರೆಯಬೇಕೆಂದು ಒಲಿಂಪಿಕ್ಸ್‌ ಆಯೋಜಕರು ಸೂಚಿಸಿದ್ದರು. ಹೀಗಾಗಿ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಮತ್ತು ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಕೆಲದಿನಗಳ ಹಿಂದೆಯೇ ತವರಿಗೆ ಬಂದಿದ್ದರು.

ಭಾರತವು ಈ ಬಾರಿ ಒಟ್ಟು ಏಳು ಪದಕಗಳನ್ನು ಗೆದ್ದಿತ್ತು. ಇದು ಒಲಿಂಪಿಕ್ಸ್‌ನಲ್ಲಿ ದೇಶದ ಶ್ರೇಷ್ಠ ಸಾಧನೆಯೂ ಆಗಿದೆ. 2012ರ ಲಂಡನ್‌ ಕ್ರೀಡಾಕೂಟದಲ್ಲಿ ಭಾರತದ ಖಾತೆಗೆ ಆರು ಪದಕಗಳು ಸೇರಿದ್ದವು. 228 ಮಂದಿಯನ್ನೊಳಗೊಂಡ ತಂಡ ಟೋಕಿಯೊ ಕೂಟದಲ್ಲಿ ಪಾಲ್ಗೊಂಡಿತ್ತು. ಇದರಲ್ಲಿ 120 ಜನ ಕ್ರೀಡಾಪಟುಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು