ಬುಧವಾರ, ಫೆಬ್ರವರಿ 26, 2020
19 °C
ಭಾರತದಲ್ಲಿ ಶೂಟಿಂಗ್ ಕ್ರೀಡೆ

ಮತ್ತೆ ಮೂಡಿದ ಭರವಸೆ...

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

ಶೂಟಿಂಗ್‌ ಎಂದಾಕ್ಷಣ ಮೊದಲು ನೆನಪಾಗುವುದು ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌, ರಂಜನ್‌ ಸೋಧಿ, ಅಭಿನವ್‌ ಬಿಂದ್ರಾ ಮತ್ತು ಗಗನ್‌ ನಾರಂಗ್ ಅವರ ಹೆಸರುಗಳು. ಭಾರತದ ಶೂಟಿಂಗ್‌ನಲ್ಲಿ ಹೊಸ ಕನಸು ಬಿತ್ತಿದ ದಿಗ್ಗಜರು ಇವರು.

2004ರ ಒಲಿಂಪಿಕ್ಸ್‌ನ ಮಾತು. ಆ ಕೂಟದಲ್ಲಿ ಭಾಗವಹಿಸಿದ್ದ ರಾಜ್ಯವರ್ಧನ್‌ ಸಿಂಗ್‌ ಅವರು ಪದಕಕ್ಕೆ ಗುರಿ ಇಡುತ್ತಾರೆ ಎಂದು ಯಾರೂ ನಿರೀಕ್ಷಿಸಿಯೇ ಇರಲಿಲ್ಲ. ಗ್ರೀಸ್‌ನ ರಾಜಧಾನಿ ಅಥೆನ್ಸ್‌ನಲ್ಲಿ ರಾಜ್ಯವರ್ಧನ್‌, ಪವಾಡ ಮಾಡಿಯೇ ಬಿಟ್ಟರು. ಬೆಳ್ಳಿಯ ಪದಕ ಜಯಿಸಿ, ಶೂಟಿಂಗ್‌ ಲೋಕದ ಗಮನ ಸೆಳೆದ ಅವರು ಎಲ್ಲರೂ ಭಾರತದತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ದರು. ಅಲ್ಲಿಂದ ಭಾರತದ ಶೂಟಿಂಗ್‌ನಲ್ಲಿ ನವ ಮನ್ವಂತರ ಶುರುವಾಗಿತ್ತು.

2008ರ ಬೀಜಿಂಗ್‌ ಕೂಟದಲ್ಲಿ ಅಭಿನವ್‌ ಬಿಂದ್ರಾ ಕೂಡ ಚಾರಿತ್ರಿಕ ಸಾಧನೆ ಮಾಡಿದ್ದರು. ಚಿನ್ನದ ಪದಕಕ್ಕೆ ಮುತ್ತಿಟ್ಟು ಹೊಸ ಮೈಲುಗಲ್ಲು ಸ್ಥಾಪಿಸಿದ್ದ ಅವರು, ಶೂಟಿಂಗ್‌ನಲ್ಲಿ ಎತ್ತರದ ಸಾಧನೆ ಮಾಡುವ ಕನಸು ಕಾಣುತ್ತಿದ್ದ ಅದೆಷ್ಟೋ ಮಂದಿಗೆ ಸ್ಫೂರ್ತಿಯ ಸೆಲೆಯಾಗಿದ್ದರು.

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲೂ ಭಾರತದ ಶೂಟರ್‌ಗಳು ಬೆಳಗಿದ್ದರು. ಗಗನ್‌ ನಾರಂಗ್‌ ಮತ್ತು ವಿಜಯಕುಮಾರ್‌ ಅವರು ಪದಕಗಳನ್ನು ಜಯಿಸಿ ಆಂಗ್ಲರ ನಾಡಿನಲ್ಲಿ ತ್ರಿವರ್ಣ ಧ್ವಜ ರಾರಾಜಿಸುವಂತೆ ಮಾಡಿದ್ದರು. ಆದರೆ ಸಾಂಬಾ ನಾಡಿನಲ್ಲಿ (ಬ್ರೆಜಿಲ್‌) ನಮ್ಮವರ ಜಾದೂ ನಡೆಯಲಿಲ್ಲ. 2016ರ ಕೂಟದಲ್ಲಿ 12 ಮಂದಿಯ ದೊಡ್ಡ ಪಡೆಯೇ ಕಣಕ್ಕಿಳಿದಿತ್ತು. ಹೀಗಿದ್ದರೂ ರಿಯೊ ಡಿ ಜನೈರೊದಲ್ಲಿ ಪದಕದ ಖಾತೆ ತೆರೆಯಲು ಆಗಿರಲಿಲ್ಲ. ಈಗ ಮತ್ತೊಂದು ಒಲಿಂಪಿಕ್ಸ್‌ ಸನ್ನಿಹಿತವಾಗಿದೆ. 2020ರ ಜುಲೈ 24ರಿಂದ ಆಗಸ್ಟ್‌ 9ರವರೆಗೆ ಜಪಾನ್‌ನ ಟೋಕಿಯೊದಲ್ಲಿ ಆಯೋಜನೆಯಾಗಿರುವ ಕೂಟಕ್ಕೆ 15 ಮಂದಿ ರಹದಾರಿ ಪಡೆದಿದ್ದಾರೆ. ಭಾರತದ ಮಟ್ಟಿಗೆ ಇದೊಂದು ದಾಖಲೆ. ಇವರ ಪೈಕಿ ಒಂದಿಬ್ಬರಿಂದಲಾದರೂ ಪದಕದ ಸಾಧನೆ ಅರಳಬಹುದೆಂಬ ಭರವಸೆ ಈಗ ಗರಿಗೆದರಿದೆ.

ಯುವ ಪಡೆಯ ಮೇಲೆ ನಿರೀಕ್ಷೆ

ಟೋಕಿಯೊ ಕೂಟಕ್ಕೆ ಟಿಕೆಟ್‌ ಪಡೆದಿರುವವರ ಪೈಕಿ ಬಹುತೇಕರು ಹದಿಹರೆಯದವರು. ಸೌರಭ್‌ ಚೌಧರಿ, ಐಶ್ವರಿ ಪ್ರತಾಪ್‌ ಸಿಂಗ್‌ ತೋಮರ್‌ ಮತ್ತು ದಿವ್ಯಾಂಶ್‌ ಪನ್ವಾರ್‌ ಅವರು ಇನ್ನೂ ಚಿಗುರು ಮೀಸೆಯ ಹುಡುಗರು. ಇವರು ಈಗಾಗಲೇ ಅಂತರರಾಷ್ಟ್ರೀಯ ಕೂಟಗಳಲ್ಲಿ ಪದಕಗಳನ್ನು ಗೆದ್ದು ಗಮನ ಸೆಳೆದಿದ್ದಾರೆ. ಮನು ಭಾಕರ್‌, ಯಶಸ್ವಿನಿ ದೇಸ್ವಾಲ್‌ ಹಾಗೂ ಚಿಂಕಿ ಯಾದವ್‌ ಕೂಡ ಬಿಂದ್ರಾ, ನಾರಂಗ್‌ ಅವರಂತಹ ದಿಗ್ಗಜರು ತೋರಿಸಿಕೊಟ್ಟ ಹಾದಿಯಲ್ಲೇ ಮುಂದಡಿ ಇಡುತ್ತಿದ್ದಾರೆ.

ಇದನ್ನೂ ಓದಿ: ಶೂಟಿಂಗ್: ಮನು–ಸೌರಭ್‌ಗೆ ಚಿನ್ನ

ಪಿಸ್ತೂಲ್‌ ವಿಭಾಗದ ತರಬೇತುದಾರ ಜಸ್ಪಾಲ್‌ ರಾಣಾ ಮತ್ತು ರೈಫಲ್‌ ವಿಭಾಗದ ಕೋಚ್‌ ಸುಮಾ ಶಿರೂರು ಅವರ ಗರಡಿಯಲ್ಲಿ ಪಳಗಿರುವ ಈ ಯುವ ಪಡೆ ಟೋಕಿಯೊದಲ್ಲಿ ಪದಕದ ಫಸಲು ತೆಗೆಯುವ ನಿರೀಕ್ಷೆ ಇದೆ. ವಿಶ್ವಕಪ್‌, ವಿಶ್ವ ಮತ್ತು ಏಷ್ಯನ್‌ ಚಾಂಪಿಯನ್‌ಷಿಪ್‌ಗಳಲ್ಲಿ ಚೀನಾ, ಜಪಾನ್‌, ಆಸ್ಟ್ರೇಲಿಯಾ ಹಾಗೂ ಇತರೆ ದೇಶಗಳ ಸ್ಪರ್ಧಿಗಳಿಗೆ ಸಡ್ಡು ಹೊಡೆದಿದ್ದ ಇವರೆಲ್ಲಾ ‘ಸೂರ್ಯೋದಯದ ನಾಡಿನಲ್ಲೂ’ ಪ್ರಕಾಶಿಸಬಹುದೆಂದು ನಿರೀಕ್ಷಿಸಲಾಗಿದೆ.

ಸಂಜೀವ್‌ ರಜಪೂತ್‌, ತೇಜಸ್ವಿನಿ ಸಾವಂತ್‌, ಅಪೂರ್ವಿ ಚಾಂಡೇಲಾ, ಅಂಜುಮ್‌ ಮೌದ್ಗಿಲ್‌, ಅಭಿಷೇಕ್‌ ವರ್ಮಾ ಅವರಂತಹ ಅನುಭವಿಗಳೂ ಟೋಕಿಯೊದ ಶೂಟಿಂಗ್‌ ರೇಂಜ್‌ನಲ್ಲಿ ‘ಅದೃಷ್ಟ ಪರೀಕ್ಷೆ’ ನಡೆಸಲಿದ್ದಾರೆ.

ಚಂಡೀಗಡದ 25ರ ಹರೆಯದ ಅಂಜುಮ್‌, 2020ರ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಭಾರತದ ಮೊದಲಿಗರು. ವಿಶ್ವ ಚಾಂಪಿಯನ್‌ಷಿಪ್‌, ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಬೇಟೆಯಾಡಿರುವ ಇವರು ಚೊಚ್ಚಲ ಅವಕಾಶದಲ್ಲೇ ಒಲಿಂಪಿಕ್ಸ್‌ ಪದಕಕ್ಕೆ ಕೊರಳೊಡ್ಡುವ ಸವಾಲನ್ನು ಮೀರಿ ನಿಂತು ದೇಶದ ಕೀರ್ತಿ ಬೆಳಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಾಯ್‌ ಮತ್ತು ಎನ್‌ಆರ್‌ಎಐನ ಶ್ರಮ

ಭಾರತ ಈಗ ಶೂಟಿಂಗ್ ಕ್ರೀಡೆಯ ‘ಶಕ್ತಿ ಕೇಂದ್ರ’ವಾಗುವತ್ತ ದಾಪುಗಾಲಿಟ್ಟಿದೆ. ಈ ಪ್ರಗತಿಯ ಹಿಂದೆ ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್‌ಆರ್‌ಎಐ) ಹಾಗೂ ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ಕೊಡುಗೆ ಅಪಾರ.

ಶೂಟಿಂಗ್‌ನ ಬೇರುಗಳನ್ನು ಇನ್ನಷ್ಟು ಆಳಕ್ಕೆ ಇಳಿಸುವ ಉದ್ದೇಶದಿಂದ ಈ ಸಂಸ್ಥೆಗಳು ಹಲವು ಯೋಜನೆಗಳನ್ನು ರೂಪಿಸಿ ಅವುಗಳನ್ನು ಕಾರ್ಯಗತಗೊಳಿಸಿವೆ. ಅವುಗಳಲ್ಲಿ ಪ್ರಮುಖವಾದುದು ‘ಜೂನಿಯರ್‌ ಕಾರ್ಯಕ್ರಮ’. ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಎಳವೆಯಲ್ಲಿಯೇ ಗುರುತಿಸಿ ಅದಕ್ಕೆ ಸಾಣೆ ಹಿಡಿಯುವ ಕೆಲಸಕ್ಕೆ ಈ ಸಂಸ್ಥೆಗಳು ಈಗ ಹೆಚ್ಚು ಒತ್ತು ನೀಡುತ್ತಿವೆ. ಇದರ ಫಲವಾಗಿ ಸೌರಭ್‌ ಚೌಧರಿ, ಮನು ಭಾಕರ್‌ ಅವರಂತಹ ಯುವ ಪ್ರತಿಭೆಗಳು ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ.

ಸ್ಕೀಟ್‌ ವಿಭಾಗದಲ್ಲೂ ನಮ್ಮವರು ಪಾರುಪತ್ಯ ಸಾಧಿಸಬೇಕೆಂಬ ಉದ್ದೇಶದಿಂದ ಎನ್‌ಆರ್‌ಎಐ, ಇಟಲಿಯ ಎನ್ನಿಯೊ ಫಾಲ್ಕೊ ಅವರನ್ನು ಕೋಚ್‌ ಆಗಿ ನೇಮಿಸಿದೆ. 1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದ ಫಾಲ್ಕೊ ಅವರು ಕೋಚ್‌ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ನಮ್ಮ ಶೂಟರ್‌ಗಳ ಸಾಮರ್ಥ್ಯ ವೃದ್ಧಿಸಿದೆ. ಅನುಭವಿ ಮೆರಾಜ್‌ ಅಹಮದ್‌ ಮತ್ತು ಅಂಗದ್‌ ಬಾಜ್ವಾ ಉತ್ತಮ ಸಾಮರ್ಥ್ಯ ತೋರಿ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿರುವುದು ಇದಕ್ಕೊಂದು ನಿದರ್ಶನ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು